ಹುಬ್ಬಳ್ಳಿ
ವಿದ್ಯಾಕಾಶಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕದಿಂದ ಭಾರೀ ಅಂತರಿಂದ ಗೆದ್ದುಕೊಂಡು ಬರುತ್ತಿರುವ ಬಿಜೆಪಿ ಅಭ್ಯರ್ಥಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿಯವರು ಐದನೇ ಭಾರಿ ಅಖಾಡಕ್ಕೆ ಇಳಿದಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿದ ಅವರು ತಮ್ಮ ಆಸ್ತಿ ಎಷ್ಟಿದೆ ಎಂದು ಘೋಷಿಸಿಕೊಂಡಿದ್ದಾರೆ.ಕೇಂದ್ರ ಸಚಿವರಾದರೂ, ಸಂಸದರಾದರೂ ಕೆಲವು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದರೂ ಸಹಿತ ಪ್ರಹ್ಲಾದ್ ಜೋಶಿಯವರ ಬಳಿ ಒಂದೇ ಒಂದು ಸ್ವಂತ ವಾಹನ ಇಲ್ಲ. ರಾಜಕಾರಣಿಗಳ ಪೈಕಿ ಸ್ವಂತಕ್ಕೆ ವಾಹನ ಇಲ್ಲದ ನಾಯಕರೆಂದರೆ ಅದು ಇವರೆ. ಹಾಗಾದರೆ ಇವರ ಒಟ್ಟು ಆಸ್ತಿ ಎಷ್ಟು? ಎಷ್ಟು ಸಾಲವಿದೆ ಎಂಬೆಲ್ಲ ಮಾಹಿತಿ, ಅಂಕಿ ಅಂಶಗಳು ಇಲ್ಲಿ ತಿಳಿಯಿರಿ.ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಸೋಮವಾರ ಪಕ್ಷದ ಹಿರಿಯ ನಾಯಕರ ಜೊತೆ ಬೃಹತ್ ಮೆರವಣಿಗೆ ನಡೆಸಿದರು. ಪ್ರಚಾರ ಮುಖೇನ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರದಲ್ಲಿ ಈ ಬಾರಿ ಅವರು ತಮ್ಮ ಸ್ಥಿರಾಸ್ತಿ ಮೌಲ್ಯ ₹11.24 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಪ್ರಹ್ಲಾದ್ ಜೋಶಿಯವರ ಒಟ್ಟು ಆಸ್ತಿ ಮೌಲ್ಯ ₹10.34 ಕೋಟಿ ಘೋಷಿಸಿಕೊಂಡಿದ್ದರು. ಈ ಸ್ಥಿರಾಸ್ತಿ ಮೌಲ್ಯ 8.09 ಕೋಟಿ ಇತ್ತು, ಈ ಬಾರಿ ಸ್ಥಿರಾಸ್ತಿ ಮೌಲ್ಯ ₹11.24 ಕೋಟಿ ಎಂದು ಅವರು ತಿಳಿಸಿದ್ದಾರೆ.ಕಳೆದ ಚುನಾವಣೆ ವೇಳೆ ಜೋಶಿಯವರ ಪತ್ನಿ ಜ್ಯೋತಿ ಅವರ ಚರಾಸ್ತಿ ಮೌಲ್ಯ ₹27 ಲಕ್ಷ ಎಂದು ಮಾಹಿತಿ ನೀಡಿದ್ದರು. ಈ ಬಾರಿ ₹5.93 ಕೋಟಿ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಿಂದಿನ ಬಾರಿ ಜೋಶಿ ಅವರು ₹ 5.15 ಕೋಟಿ ಸಾಲ ಹಾಗೂ ಪತ್ನಿ ಹೆಸರಿನಲ್ಲಿ ₹2ಲಕ್ಷ ಸಾಲ ಘೋಷಿಸಿಕೊಂಡಿದ್ದರು.ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಐದನೇ ಬಾರಿಗೆ ಸ್ಪರ್ಧಿಸಿರುವ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಒಟ್ಟು ₹13.97 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಬಗ್ಗೆ ಅವರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸತತ ನಾಲ್ಕು ಬಾರಿ ಧಾರವಾಡದಿಂದ ಸಂಸತ್‌ಗೆ ಆಯ್ಕೆಯಾಗಿರುವ ಅವರ ಬಳಿ ಓಡಾಡಲು ಸ್ವಂತ ವಾಹನ ಇಲ್ಲ. ಜೋಶಿ ಅವರ ಬಳಿ 184 ಗ್ರಾಂ ಚಿನ್ನ 5 ಕೆ.ಜಿ ಬೆಳ್ಳಿ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಇದೆ. ಜೋಶಿ ಅವರ ಹೆಸರಿನಲ್ಲಿ ₹6.63 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ ₹1.37 ಕೋಟಿ ಸಾಲ ಇದೆ.ಪತ್ನಿ ಜ್ಯೋತಿ ಅವರ ಒಟ್ಟು ಆಸ್ತಿಯ ಮೌಲ್ಯ ₹ 6.80 ಕೋಟಿ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮೇಲಿನ ಎಲ್ಲ ವಿವರಗಳನ್ನು ಪ್ರಹ್ಲಾದ್ ಜೋಶಿಯವರು ಘೋಷಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ