ಬೆಂಗಳೂರು:
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮತ್ತು ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ನಡೆಯುವ ಮೆರವಣಿಗೆಯಲ್ಲಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಹೊರಡಿಸಲಾಗಿದ್ದ ಆದೇಶ ಇದೀಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ವಿವಿ ಪುರಂನಲ್ಲಿರುವ ಜೈನ್ ಕಾಲೇಜಿನ ವಾಟ್ಸಪ್ ಗ್ರೂಪಿನಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
“ಏಪ್ರಿಲ್ 4 ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಸದಸ್ಯರು ಸೇರಿ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು. ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಬೇಕು. ಇದರಿಂದ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ” ಎಂದು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬಿಎಂಎಸ್ ಕಾಲೇಜಿನ ವಾಟ್ಸಾಪ್ ಗ್ರೂಪ್‌ಗಳಲ್ಲಿಯೂ ಇದೇ ರೀತಿಯ ಸಂದೇಶಗಳು ಹರಿದಾಡಿವೆ ಎಂದು ವರದಿಯಾಗಿದೆ.
ಕಾಲೇಜಿನ ಪ್ರತಿಯೊಂದು ತರಗತಿಯ ವಾಟ್ಸಪ್ ಗ್ರೂಪ್‌ನಲ್ಲೂ ಕೂಡ ಈ ಸಂದೇಶ ರವಾನಿಸಲಾಗಿದ್ದು, ಅಲ್ಲದೇ, ಕಾಲೇಜಿನ ಆಡಳಿತ ಮಂಡಳಿಯ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಭಾಗದ ತರಗತಿಗಳಿಗೆ ತೆರಳಿಯೂ ಕೂಡ ಸೂಚನೆ ನೀಡಿರುವುದಾಗಿ ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಲವು ವಿದ್ಯಾರ್ಥಿಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದು, ಕಡ್ಡಾಯ ಯಾಕೆ ಮಾಡಿದ್ದೀರಾ ಎಂದು ಕಾಲೇಜಿನ ಪ್ರಾಂಶುಪಾಲರಲ್ಲಿ ಪ್ರಶ್ನಿಸಿದಾಗ, ಅವರು ಸೂಕ್ತ ‘ಉತ್ತರ ನೀಡಿಲ್ಲ’ ಎಂದು ಹೇಳಲಾಗಿದೆ.