ಬೆಂಗಳೂರು :
‘ಸರ್ಕಾರ ಉರುಳುತ್ತದೆ’ ಎಂದು ಹೇಳಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದ್ದರು ಎನ್ನಲಾದ ಹೆಡ್ ಕಾನ್‌ಸ್ಟೆಬಲ್ ನಾಗರಾಜ್ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
‘ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 1ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನಾಗರಾಜ್ ಅವರು ಜೆ.ಪಿ.ನಗರದಲ್ಲಿರುವ ಮುಖ್ಯಮಂತ್ರಿ ಅವರ ನಿವಾಸದ ಎದುರು ಭದ್ರತೆಗೆ ನಿಯೋಜನೆಗೊಂಡಿದ್ದರು. ರಹಸ್ಯ ಕಾರ್ಯಾಚರಣೆ ನಡೆಸಿದ್ದ ಸುದ್ದಿವಾಹಿನಿಯೊಂದರ ಪ್ರತಿನಿಧಿ, ಅವರನ್ನು ಮಾತನಾಡಿಸಿ ಮುಖ್ಯಮಂತ್ರಿಯವರ ಬಗ್ಗೆ ಅಭಿಪ್ರಾಯ ಕೇಳಿದ್ದರು’ ಆಗ ‘ಇವರ ದೌರ್ಜನ್ಯ ಬಹಳ ದಿನ ನಡೆಯೊಲ್ಲ. ಹಳ್ಳಕ್ಕೆ ಬೀಳಲೇ ಬೇಕು. ಅಧಿಕಾರ ಹೋಗಲಿ, ಇವ್ರ ದರ್ಪ – ದೌಲತ್ತು ಗೊತ್ತಾಗುತ್ತದೆ’ ಎಂದು ನಾಗರಾಜ್ ತಮ್ಮ ಅಭಿಪ್ರಾಯ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
ನಾಗರಾಜ್ ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಸೂಚಿಸಿದ್ದರು. ಸೂಚನೆ ಮೇರೆಗೆ ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ