ಬೆಂಗಳೂರು:
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿರುವ ವಿವಾದ ಸದ್ಯದಲ್ಲೇ ಶಮನವಾಗುವ ಸಾಧ್ಯತೆ ಇಲ್ಲ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬುಧವಾರ ಹೇಳಿದ್ದಾರೆ.
ಪ್ರಕರಣವೊಂದರಲ್ಲಿ ಅವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೈಲಿಗೆ ಹೋಗಲು ವಿಜಯೇಂದ್ರ ಅವರೇ ಕಾರಣ. ಯಡಿಯೂರಪ್ಪನವರ ಮಗ ಎಂಬುದನ್ನು ಹೊರತುಪಡಿಸಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಮಗೆ ಯಾವ ಶ್ರೇಯವಿದೆ? ಎಂದು ಅವರು ಪ್ರಶ್ನಿಸಿದರು.
30-40 ವರ್ಷಗಳ ಕಾಲ ಪಕ್ಷ ಕಟ್ಟಿದ ನಾಯಕರನ್ನು ಮೂಲೆಗುಂಪು ಮಾಡಿದ್ದೀರಿ. ಕೆಎಸ್ ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ನಿಮಗಿಲ್ಲ. ಬಿಎಸ್‌ವೈ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಯಾರೋ ತಮ್ಮ ‘ಚೋಟಾ ಸಹಿ’ಯನ್ನು ನಕಲು ಮಾಡಿದ್ದಕ್ಕಾಗಿ ಅವರು ಜೈಲಿಗೆ ಹೋಗಬೇಕಾಯಿತು. ಆ ಚೋಟಾ ಸಹಿಯನ್ನು ಮಾಡಿದವರು ಯಾರು’ ಎಂದು ಪ್ರಶ್ನಿಸಿದರು.
ಮಧು ಅವರನ್ನು ಸಮರ್ಥಿಸಿಕೊಂಡ ಅವರು, ಸಚಿವರ ಹೇರ್ ಸ್ಟೈಲ್ ಅವರ ಆಯ್ಕೆಯಾಗಿದೆ. ಮಧು ಅವರು 12,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದರು ಮತ್ತು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸಲು ಮೂರು ಪರೀಕ್ಷೆ ನಡೆಸುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಸೋತರೆ, ಬಿಜೆಪಿಯ ಡಾ. ಕೆ ಸುಧಾಕರ್ ಒಂದೇ ಒಂದು ಮತವನ್ನು ಜಾಸ್ತಿ ಪಡೆದರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಕ್ಷಾ ರಾಮಯ್ಯ ವಿರುದ್ಧ ಸುಧಾಕರ್ ಕಣಕ್ಕಿಳಿದಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಪ್ರದೀಪ್ ಈಶ್ವರ್ ಸೋಲಿಸಿದ್ದರು.
ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಿದ್ದಾರೆ ಎಂಬ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಕಲಿ ಪ್ರಮಾಣಪತ್ರಗಳೊಂದಿಗೆ ಎಂಬಿಬಿಎಸ್ ಮುಗಿಸಿದವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ 19-21 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.