ಬೆಂಗಳೂರು
ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಬೆಂಗಳೂರು ನಗರ ಸಿದ್ಧವಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ. ಬಿಬಿಎಂಪಿಯು ಬೆಂಗಳೂರಿನಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿದೆ.
ನಾಗರೀಕರು ಈ ಸೌಲಭ್ಯಗಳನ್ನು ಪಡೆದುಕೊಂಡು ಮೂರ್ತಿಗಳನ್ನು ಈ ಟ್ಯಾಂಕರ್ಗಳಲ್ಲಿ ವಿಸರ್ಜಿಸಬಹುದು. ಅಥವಾ ಗಣೇಶ ಮೂರ್ತಿ ವಿಸರ್ಜನೆಗೆ ಗುರುತಿಸಿರುವ ಹತ್ತಿರದ ಕಲ್ಯಾಣಿ ಅಥವಾ ಕೆರೆಗೆ ವಿಸರ್ಜನೆ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ. ಈ ಉದ್ದೇಶಕ್ಕಾಗಿ ಸುಮಾರು 41 ಕೆರೆಗಳನ್ನು ಗುರುತಿಸಲಾಗಿದೆ ಮತ್ತು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗಿದೆ.
ಬೆಂಗಳೂರು ಪೂರ್ವ ವಲಯದಲ್ಲಿ ಅತಿ ಹೆಚ್ಚು ಸಂಚಾರಿ ಟ್ಯಾಂಕರ್‌ಗಳ (138) ವ್ಯವಸ್ಥೆ ಮಾಡಲಾಗಿದೆ. ನಂತರ ಪಶ್ಚಿಮ ವಲಯದಲ್ಲಿ (84) ಹೆಚ್ಚಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.