ರಾಮನಗರ:
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕಾರು ಪ್ರಯಾಣಿಕರಿಗೆ ಲಾಂಗ್ ತೋರಿಸಿ ಸುಲಿಗೆ ಮಾಡಲಾಗಿದೆ. ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿ ಘಟನೆ ನಡೆದಿದೆ.
ಹಿಮಾಚಲಂ ಹಾಗೂ ಅಂಕಯ್ಯ ಎಂಬವರು ಕಾರಿನಲ್ಲಿ ಚನ್ನಪಟ್ಟಣದಿಂದ ಬೆಂಗಳೂರಿಗೆ ಹೋಗುತ್ತಿದ್ದರು. ನಿದ್ರೆ ಮಂಪರು ಬಂದ ಹಿನ್ನೆಲೆಯಲ್ಲಿ ಕಾರು ಚಾಲಕ ಮಾಯಗಾನಹಳ್ಳಿ ಬ್ರಿಡ್ಜ್ ಕೆಳಗೆ ಕಾರ್ ನಿಲ್ಲಿಸಿಕೊಂಡು ಮುಖ ತೊಳೆಯುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಲಾಂಗ್ ತೋರಿಸಿ ಬೆದರಿಸಿ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
9.13 ಲಕ್ಷ ರೂ. ಮೌಲ್ಯದ 166 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕಳ್ಳರ ಹಾವಳಿ ನಿಂತಿಲ್ಲ. ದಶಪಥದ ಹಲವು ಕಡೆ ಪೊಲೀಸ್ ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ. ಹೊಯ್ಸಳ ವಾಹನಗಳು ಗಸ್ತು ತಿರುಗುತ್ತವೆ. ಆದರೂ ಸಮಯ ಸಾಧಿಸಿ ದರೋಡೆ ಮಾಡುತ್ತಿರುವುದು ಕಂಡುಬರುತ್ತಿದೆ.
ನಾಲ್ಕು ತಿಂಗಳ ಹಿಂದೆ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಗೆಳೆಯರ ಜತೆ ಹೋಗುತ್ತಿದ್ದ ರಾಮನಗರದ ಯುವಕನೊಬ್ಬನ ಕೊಲೆಯಾಗಿತ್ತು. ಜತೆಗಿದ್ದ ಯುವಕರಿಗೂ ತಿಳಿಯದಂತೆ ನಡೆದಿರುವ ಈ ಭೀಕರ ಕೃತ್ಯದ ಹಿಂದೆ ಹೆದ್ದಾರಿ ದರೋಡೆಕೋರರ ಪಾತ್ರವಿದೆಯೇ ಎಂಬ ಆತಂಕ ಮೂಡಿತ್ತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರದಲ್ಲಿ ಬೈಕ್ ನಿಲ್ಲಿಸಿದ್ದ ಯುವಕರ ಮೇಲೆ ಒಂದು ಗ್ಯಾಂಗ್ ದಾಳಿ ನಡೆಸಿತ್ತು. ಘಟನೆ ನಡೆದು ಮೂರು ದಿನಗಳಾದ ಮೇಲೆ ರುದ್ರಾಕ್ಷಿ ಕೆರೆಯಲ್ಲಿ ರಾಮ್ ಕುಮಾರ್ ಶವ ಪತ್ತೆಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ