ಮಮತಾ-ರಾಹುಲ್‍ರ ವಿರಸ : ಏಕೆ?

0
27

ಪ. ಬಂಗಾಳ:

      ಮಮತಾ ಬ್ಯಾನರ್ಜಿ ಮತ್ತು ರಾಹುಲ್‍ಗಾಂಧಿ ಇವರಿಬ್ಬರೂ ಪರಸ್ಪರ ವಿರೋಧಿಗಳಾಗಲು ಕಾರಣ ಏನು? ಪಶ್ಚಿಮಬಂಗಾಲ ಚುನಾವಣೆ ಸಮೀಕ್ಷೆ ನಡೆಸಲು ಬಂದಂದಿನಿಂದ ನಮಗೆ ಎದುರಾಗಿರುವ ಪ್ರಶ್ನೆ ಇದು.

        ಎಷ್ಟಾಗಲಿ ದೂರದ ಬೆಂಗಳೂರಿನ ವರದಿಗಾರರು ನಾವು. ಹೀಗಾಗಿ ಬಂಗಾಲಿ ಮತದಾರರು, ಚಿಂತಕರು, ಬುದ್ಧಿಜೀವಿಗಳು, ಪತ್ರಕರ್ತರು-ಇತ್ಯಾದಿ ಸಮಾಜದ ವಿವಿಧ ವರ್ಗಗಳ ಜನರನ್ನು ಉತ್ತರಕ್ಕಾಗಿ ಸಂಪರ್ಕಿಸುವುದು ನಮಗೆ ಅನಿವಾರ್ಯವಾಯಿತು.
ಹಲವು ಮಂದಿ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರು. ಕಮ್ಯುನಿಸ್ಟರು, ತೃಣಮೂಲ ಕಾರ್ಯಕರ್ತರು, ಮುಸ್ಲಿಮರು, ಹಿಂದೂ ಸಂಘಟನೆಗಳು ಇವರೇ ಮೊದಲಾಗಿ ಜನಾಭಿಪ್ರಾಯ ಮುಖಂಡರು ತಮ್ಮದೇ ಆದ ರೀತಿಯಲ್ಲಿ ಸಮಸ್ಯೆಯನ್ನು ಅವಲೋಕಿಸಿದರು. ಉತ್ತರ ನಮಗೆ ಸಮರ್ಪಕವೆನಿಸಲಿಲ್ಲ.

        ಈ ಪೈಕಿ ಪಶ್ಚಿಮ ಬಂಗಾಲದ ಅತ್ಯಂತ ಹಿರಿಯ ರಾಜಕೀಯ ವಿಮರ್ಶಕ ಹಾಗೂ ಬುದ್ಧಿಜೀವಿ ಅಮಿತದ್ಯುತಿ ಕುಮಾರರ ವಿಶ್ಲೇಷಣೆ ಸೂಕ್ತವೆನಿಸಿತು. ಪ್ರಶ್ನೆಗೆ ಈ ಹಿರಿಯ ಮನುಷ್ಯ ಏನು ಉತ್ತರಿಸಿದರು ಎನ್ನುವುದನ್ನು ತಿಳಿಸುವ ಮುನ್ನ ಯಾರಿವರು ಎನ್ನುವ ಮಾಹಿತಿ ನೀಡುವುದು ನಮ್ಮ ಕರ್ತವ್ಯ.

        ಅಮಿತದ್ಯುತಿ ಕುಮಾರರು ಚಂದನ್‍ನಗರದ ನಿವಾಸಿ. ಒಂದು ಕಾಲದಲ್ಲಿ ಫ್ರೆಂಚರ ವಸಾಹತುವಾಗಿದ್ದ ಚಂದನ ನಗರ ಕೊಲ್ಕತ್ತೆಯಿಂದ ಸುಮಾರು 70 ಕಿ.ಮೀ ದೂರ ಉತ್ತರಕ್ಕಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಉತ್ತಮ ಹವೆ ಕೊಲ್ಕತ್ತೆಯ ನಾಗರಿಕರಿಗೆ ಬಹುಪ್ರಿಯ.

          ಇವರು ಕಟ್ಟಾ ಮಾಕ್ರ್ಸಿಸ್ಟ್ ಕಮ್ಯುನಿಸ್ಟರು. ಇಡೀ ಬದುಕನ್ನು ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳ ಅನುಷ್ಠಾನ ಮತ್ತು ಪ್ರಚಾರಕ್ಕಾಗಿ ಮೀಸಲಿಟ್ಟವರು. ಕಮ್ಯುನಿಸ್ಟ್ ಕಟ್ಟಾಳು. ಮಾಜಿ ಮುಖ್ಯಮಂತ್ರಿ ಜ್ಯೋತಿಬಸು ಮತ್ತು ಬುದ್ಧದೇವ ಭಟ್ಟಾಚಾರ್ಯರ ಸಮಕಾಲೀನರು. ಲೋಕಸಭಾಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿಯವರ ಸಹವರ್ತಿ. ಪಶ್ಚಿಮ ಬಂಗಾಲದ ಇಂದಿನ ಕಮ್ಯುನಿಸ್ಟ್ ಮಾಕ್ರ್ಸಿಸ್ಟ್ ಮುಂದಾಳು ಗಳಿಗೆ ಪಾಠ ಹೇಳಿದವರು.

        ಕರ್ನಾಟಕದ ಹುಬ್ಬಳ್ಳಿಯ ಕಮ್ಯುನಿಸ್ಟ್ ಚಿಂತಕ ಪ್ರೊ.ಕೆ.ಎಸ್. ಶರ್ಮಾರಂತೆಯೇ ಅಪಾರ ಆಸಕ್ತಿಯ ಓದುಗರು, ಜ್ಞಾನಿ, ಬರಹಗಾರರು. ಇಷ್ಟಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದವರು.ಇಂದಿಗೂ ಅಮಿತದ್ಯುತಿ ಚಂದನ ನಗರದ ಓಣಿಯೊಂದರಲ್ಲಿ ಮುರುಕು ಮನೆಯಲ್ಲಿ ವಾಸಿಸುತ್ತಿದ್ದಾರೆ. ಪಶ್ಚಿಮಬಂಗಾಲದ ಹಿರಿಯ ಪ್ರೆಸ್ ಫೋಟೋಗ್ರಾಫರ್ ಸೈಬರ್‍ದಾಸ್‍ರ ಮೂಲಕ ನಮಗೆ ಅವರ ಪರಿಚಯ ಲಭಿಸಿತ್ತು.

         ದ್ಯುತಿಯವರು ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿಯವರ ರಾಜಕೀಯದ ಮಜಲುಗಳನ್ನು ಹೋಲಿಸುವ ಮುನ್ನ ಹೇಳಿದ ಮಾತು ಗಮನಾರ್ಹವಾಗಿತ್ತು.ಕುರ್ಚಿ-ಪ್ರಜಾತಂತ್ರದ ಪರಮ ಶತ್ರು. ಅಧಿಕಾರದಾಹ ರಾಜಕೀಯ ನೇತಾರರನ್ನು ದಾರಿ ತಪ್ಪಿಸುತ್ತದೆ.
ಈ ಮಾತನ್ನು ಬಿಡಿಸಿ ಹೇಳುವುದಾದರೆ ಮಮತಾ ಬ್ಯಾನರ್ಜಿ, ರಾಹುಲ್‍ಗಾಂಧಿ, ನರೇಂದ್ರ ಮೋದಿ, ಮಾಯಾವತಿ, ಮುಲಾಯಂ, ಮತ್ತು ಅಖಿಲೇಶ್ ಮೊದಲಾದ ನಾಯಕರು ಅಧಿಕಾರದ ಕುರ್ಚಿಯ ಹಿಂದೆ ಬಿದ್ದಿದ್ದಾರೆ. ಇದೇ ಅಮಿತದ್ಯುತಿ ಕುಮಾರರ ಮಾತಿನ ಅರ್ಥ.
ಇದಿಷ್ಟು ಪೀಠಿಕೆಯ ನಂತರ ನೇರವಾಗಿ ವಿಷಯಕ್ಕೆ ಬರುತ್ತೇವೆ.

         ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಮತ್ತು ಪಶ್ಚಿಮಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇತ್ತ್ತೀಚಿನವರೆಗೂ ಅನ್ಯೋನ್ಯ ರಾಜಕೀಯ ನಾಯಕರುಗಳಾಗಿದ್ದವರು. ಒಟ್ಟಾಗಿ ಚಿಂತಿಸಿದವರು. ಜೋಡಿ ಆಗಿ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಕಾಣಿಸಿಕೊಂಡವರು. ಕೇಂದ್ರದಲ್ಲಿನ ಪ್ರಧಾನಮಂತ್ರಿ ಮೋದಿ ಸರ್ಕಾರವನ್ನು ಚುನಾವಣೆಯಲ್ಲಿ ಶತಾಯಗತಾಯ ಸೋಲಿಸಲು ಜೊತೆ ಜೊತೆಯಾಗಿ ಪಣತೊಟ್ಟವರು.

         ಕರ್ನಾಟಕದ ಜನಕ್ಕೆ ನೆನಪಿರಬೇಕು. ಒಂಭತ್ತು ತಿಂಗಳ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಇವರಿಬ್ಬರೂ ಒಂದಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಾಯಾವತಿ, ಅಖಿಲೇಶ್‍ಸಿಂಗ್ ಯಾದವ್, ಚಂದ್ರಬಾಬು ನಾಯ್ಡು, ಸೀತರಾಂ ಯಚೂರಿ, ಶರದ್‍ಪವಾರ್-ಇವರೇ ಮೊದಲಾದ ಅತಿರಥ ಮಹಾರಥರನ್ನು ವಿಧಾನಸೌಧದ ಪಾವಟಿಗೆಗಳ ಮೇಲೆ ಆದರಾಭಿಮಾನಗಳಿಂದ ಕುಳ್ಳಿರಿಸಿದವರೆ ದೀದಿ ಮಮತಾ.

         ಕಮ್ಯುನಿಸ್ಟ್ ಪಕ್ಷಗಳ 32 ವರ್ಷಗಳ ಆಡಳಿತವನ್ನು ಮುರಿದವರು ತೃಣಮೂಲ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ. ಇದು ಹಳೆಯ ಕಥೆ.ಆದರೆ, ತೃಣಮೂಲ ಕಾರ್ಯಕರ್ತರು ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮಬಂಗಾಲದಲ್ಲಿ ಕ್ರೌರ್ಯ, ಹಿಂಸೆ, ಬಲವಂತ ಹಣ ಸಂಗ್ರಹ, ಅತ್ಯಾಚಾರ ಮತ್ತಿತರ ಅಕ್ರಮಗಳಿಗೆ ಕಾರಣವಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ದೂಷಿಸುತ್ತಿರುವುದು ಮಮತಾರಿಗೆ ಅಸಹನೀಯವಾಗಿದ್ದಿರಬಹುದು.

        ಈ ಬಾರಿಯ ಚುನಾವಣಾ ಕಣದಲ್ಲಿ ನರೇಂದ್ರ ಮೋದಿಯ ವಿರುದ್ಧದ ಹೋರಾಟದ ಯಶಸ್ಸನ್ನು ಕಾಂಗ್ರೆಸ್ ನೊಂದಿಗೆ ಹಂಚಿಕೊಳ್ಳಲು ಮಮತಾರಿಗೆ ಸುತಾರಾಂ ಇಷ್ಟವಿರಲಿಲ್ಲ. ಮಹಾಘಟ ಬಂಧನದಿಂದ ತಮ್ಮ ಅಗ್ರಮಾನ್ಯ ನಾಯಕತ್ವಕ್ಕೆ ಚ್ಯುತಿಯಾಗಬಹ್ಮದೆಂಬ ಸಂಶಯ ಈಕೆಗೆ ಬಂದಿತ್ತೆಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ.ಮೇ.23ರಂದು ಫಲಿತಾಂಶದ ಕೀರ್ತಿ ತೃಣಮೂಲಕ್ಕೆ ಮಾತ್ರ ಸಿಗಲಿ ಎನ್ನುವ ಛಲ-ಹಠ ಮಮತಾರದು.

        ಅಧಿಕಾರ ದಾಹ ಮಮತಾ ಬ್ಯಾನರ್ಜಿಯವರ ಕಾರ್ಯವಿಧಾನ ಮತ್ತು ರೀತಿ ನೀತಿಗೆ ಕಾರಣವೆಂದು ಪಶ್ಚಿಮಬಂಗಾಲದ ಬುದ್ಧಿಜೀವಿಗಳ ಒಕ್ಕೊರಲಿನ ಟೀಕೆ. ಸಂಸತ್ತಿನಲ್ಲಿ ಪಶ್ಚಿಮಬಂಗಾಲದಿಂದ 39 ಸ್ಥಾನಗಳನ್ನು ಪಡೆದಿರುವ ತೃಣಮೂಲ ಕಾಂಗ್ರೆಸ್ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 44 ಸ್ಥಾನ ಗಳಿಸಿರುವ ಕಾಂಗ್ರೆಸ್‍ಗಿಂತ ಯಾವುದಕ್ಕೆ ಕಡಿಮೆ ಎಂದು ಬ್ಯಾನರ್ಜಿ ಭಾವಿಸಿದ್ದಾರೆ. ತಪ್ಪೇನೂ ಇಲ್ಲ.

          ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಅಧಿಕಾರದ ಮಮತಾ ಬ್ಯಾನರ್ಜಿಗೆ ಎಂದಾದರೊಂದು ದಿನ ದಿಲ್ಲಿಯಲ್ಲಿ ಅಧಿಕಾರದ ಕುರ್ಚಿ ಹಿಡಿಯುವ ದಾಹ ಪ್ರಾಯಶಃ ಹೆಚ್ಚಿರಬೇಕು.ಜನರ ದೃಷ್ಟಿಯಲ್ಲಿ ಕಾಣುವ ಅಧಿಕಾರದ ದಾಹ ರಾಜಕೀಯ ನಾಯಕರ ಚಿಂತನೆಗೆ ಹಿಡಿಸದಿರಬಹುದು. ರಾಷ್ಟ್ರಕ್ಕೆ ಮೋದಿ ಬದಲು ದೃಢವಾದ ಪರ್ಯಾಯ ನಾಯಕತ್ವದ ಮುಂಚೂಣಿಯಲ್ಲಿ ತಾವು ಇರಬೇಕೆಂದು ರಾಹುಲ್ ಗಾಂಧಿಯಂತೆಯೇ ಮಮತಾ ಬ್ಯಾನರ್ಜಿ ಆಶಿಸಿರಬಹುದು.

        ಒಳಗೊಳಗಿನ ಸಂಶಯ ಭಿನ್ನಾಭಿಪ್ರಾಯವಾಗಿ ಹೊರಬಂದದ್ದು ಮಮತಾರವರ ಮಾತಿನಿಂದ. ಕಳೆದ ಸೆಪ್ಟೆಂಬರ್ 18ರಂದು ಕೊಲ್ಕತ್ತೆಯ ಸಾರ್ವಜನಿಕ ಸಭೆಯಲ್ಲಿ ಜನ ಬದಲಾವಣೆ ಬಯಸುತ್ತಾರೆ ಎಂದು ಹೇಳಿ ತಮ ನಾಯಕತ್ವಕ್ಕೆ ಮೊದಲ ಪ್ರಾಶಸ್ತ್ಯವೆಂದು ಪ್ರತಿಪಾದಿಸಿದ್ದರು ದೀದಿ.

      ತಾಳ್ಮೆ, ಸಮಾಧಾನದಿಂದ ಮಮತಾರ ನಡೆನುಡಿಯನ್ನು ಸಾಕಷ್ಟು ಸಮಯ ಸಹಿಸಿಕೊಂಡರು ರಾಹುಲ್. ಸಹನೆ ಕೊನೆಗೊಂಡದ್ದು ಒಂದು ತಿಂಗಳ ಕೆಳಗೆ.

       ಮಾರ್ಚ್ 23ರಂದು ಮಾಲ್ಡಾ ಜಿಲ್ಲೆಯ ಚನಚಲದಲ್ಲಿ ರಾಹುಲ್‍ಗಾಂಧಿ ತೃಣಮೂಲ ಕಾಂಗ್ರೆಸ್‍ನ ಗೂಂಡಾಗಳು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ಇದಕ್ಕೆ ಮಮತಾರ ಪ್ರೋತ್ಸಾಹವಿದೆ ಎಂದು ನೇರ ಆಪಾದಿಸಿದರು. ಮಮತಾ ಬ್ಯಾನರ್ಜಿಯವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ, ಈಕೆ ಆಡಿದ್ದೇ ಆಟ ಎಂದು ಹರಿಹಾಯ್ದರು. ಇಷ್ಟು ಸಾಕಾಯಿತು ಮಮತಾ ದೀದಿಗೆ.

       ರಾಹುಲ್ ಒಬ್ಬ ಬಚ್ಚಾ (ಕನ್ನಡದ ನೆಲಭಾಷೆಯಲ್ಲಿ ಹೇಳಬಹುದಾದರೆ ಎಳೆನಿಂಬೆಕಾಯಿ) ಎಂದರು ಪಶ್ಚಿಮಬಂಗಾಲದ ಮುಖ್ಯಮಂತ್ರಿ.ಅಲ್ಲಿಂದ ಶುರುವಾಗಿದೆ ರಾಹುಲ್‍ಗಾಂಧಿ ಮಮತಾ ಬ್ಯಾನರ್ಜಿ ನಡುವಣ ವಾಗ್ಯುದ್ದ.ಎರಡು ಆನೆಗಳ ಕಾದಾಟದಲ್ಲಿ ಸಿಲುಕಿ ನಲುಗಿದ್ದು ಏನು ಗೊತ್ತೇನು? ಕಾಡಿನ ಹಸಿರು ಹುಲ್ಲು!


ಆರ್ ಎಸ್‍ ಎಸ್ ಜೊತೆ ಕೈ ಜೋಡಿಸಿದೆಯಂತೆ ಕಾಂಗ್ರೆಸ್!?

        ಟೀಕೆಗೂ ಒಂದು ಮಿತಿ ಇರಬೇಕು. ಮಮತಾ ದೀದಿಯಂತಹ ನಾಯಕಿ ಬಾಯಿಗೆ ಬಂದಂತೆ ಮಾತನಾಡಬಾರದು. ಇದು ರಾಹುಲ್‍ರ ಟೀಕೆ.

      ಮಮತಾ ಹೇಳುತ್ತಾರೆ, ಕಾಂಗ್ರೆಸ್ ಭಾಜಪವನ್ನು ಸಮರ್ಥವಾಗಿ ಎದುರಿಸುತ್ತಿಲ್ಲ ಎಂದು. ಹಾಗಾದರೆ ರಫೆಲ್ ವಿಮಾನ ಖರೀದಿಯ ದುಸ್ಸಾಹಸವನ್ನು ಬಹಿರಂಗಗೊಳಿಸಿದ್ದು ನಾವಲ್ಲವೇ? (ಕಾಂಗ್ರೆಸ್). ಚೌಕೀದಾರ ಕಳ್ಳ ; ಕಳ್ಳನನ್ನು ಜೈಲಿಗೆ ತಳ್ಳಿ ಎಂದು ಸಾರಿದವರು ಕಾಂಗ್ರೆಸ್ಸಿಗರಲ್ಲವೇ? ಪ್ರತಿ ಹಂತದಲ್ಲಿ ನರೇಂದ್ರ ಮೋದಿಯ ಅಕ್ರಮಗಳನ್ನು ಬಹಿರಂಗಗೊಳಿಸುತ್ತ ಬಂದಿರುವುದು ಕಾಂಗ್ರೆಸ್ ತಾನೆ?
ದಿನಾಜ್‍ಪುರ ಕ್ಷೇತ್ರದಲ್ಲಿ ರಾಹುಲ್‍ಗಾಂಧಿ ಮಮತಾಗೆ ಎಸೆದಂತಹ ಸವಾಲು ಇದು. ಅದೇ ದಿನ ಅದೇ ಕ್ಷೇತ್ರದ ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಕೆಲವೇ ಗಂಟೆ ಬಳಿಕ ಮಮತಾ ರಾಹುಲ್‍ಗೆ ಕೊಟ್ಟ ಉತ್ತರ ಹೀಗಿತ್ತು.

      ಸಾಕು ನಿಲ್ಲಿಸಿ….ನಿಮ್ಮ (ನಿನ್ನ) ಪ್ರತಾಪ. ದಿನಾಜ್‍ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಮುಖರ್ಜಿ (ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಗ) ಗೆಲುವಿಗಾಗಿ ಆರ್.ಎಸ್.ಎಸ್. ಕಾರ್ಯಕರ್ತರು ಕಾಂಗ್ರೆಸ್‍ನೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಬ್ರಹ್ಮರಾಮ್ ಪುರದ ಕಾಂಗ್ರೆಸ್ ಅಭ್ಯರ್ಥಿ ಸ್ವತಃ ಬಾಯಿಬಿಟ್ಟು ಈ ಮಾತು ಹೇಳಿದ್ದಾನೆ.ಡಾರ್ಜಲಿಂಗ್‍ನಲ್ಲಿಯೂ ಭಾಜಪ-ಕಾಂಗ್ರೆಸ್ ಪರಸ್ಪರ ಸಹಕರಿಸುತ್ತಿವೆ. ಇಷ್ಟು ಮಾಹಿತಿ ಸಾಕಲ್ಲವೇ ರಾಹುಲ್?ಅಂತೂ ನಡೆದಿದೆ ಅಹಿರಾವಣ-ಮಹಿರಾವಣ ಕಾಳಗ.


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here