ಚಿತ್ರದುರ್ಗ
ರಾಜ್ಯ ಸರ್ಕಾರ ರಕ್ಷಣೆ ಮಾಡುವವರನ್ನೇ ಭಕ್ಷಕರನ್ನಾಗಿ ಮಾಡಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಪೊಲೀಸರನ್ನೇ ಈ ಸರ್ಕಾರ ಭಕ್ಷಕರನ್ನಾಗಿ ಮಾಡಿದೆ. ಲಕ್ಷಾಂತರ ರೂ. ಕೊಡುವವರೆಗೆ ಪೋಸ್ಟಿಂಗ್ ಕೊಡುವುದಿಲ್ಲ. ಸಮವಸ್ತ್ರಧಾರಿಗಳು ಭಕ್ಷಕರು ಮಾತ್ರವಲ್ಲ ಭಿಕಾರಿಗಳಾಗಿದ್ದಾರೆ. ಇದು ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಬೇರೆ ಇಲಾಖೆಗಳಲ್ಲಿ ಗುತ್ತಿಗೆ, ಟೆಂಡರ್, ಪರ್ಸೆಂಟೇಜ್ ನಡೆಯುತ್ತದೆ. ಆದರೆ, ಪೊಲೀಸರು ಜನಸಾಮಾನ್ಯರಿಂದ ವಸೂಲಿ ಮಾಡಬೇಕಾಗುತ್ತದೆ. ಲೂಟಿ ಹೊಡೆಯಿರಿ ಎಂದು ಸರ್ಕಾರವೇ ಒತ್ತಡ ಹೇರುತ್ತಿದೆ. ಇದರಿಂದಾಗಿ ಪೊಲೀಸ್ ಇಲಾಖೆ ಸಂಪೂರ್ಣ ದುರ್ಬಲವಾಗುತ್ತಿದೆ. ಪೊಲೀಸರಿಗೇ ರಕ್ಷಣೆ ಕೊಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಅವರು ಹೇಳಿದರು.
ಪಿಎಸ್ಐ ಪರಶುರಾಮ್ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಾಮಣಿಕತೆ ಇರುವುದರಿಂದಲೇ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಬೆಂಗಳೂರಲ್ಲಿ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಪಡೆಯಲು ಕೋಟಿಗಟ್ಟಲೆ ರೂಪಾಯಿ ಹಣ ಕೊಡಬೇಕು. ಜಿಲ್ಲೆಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಕೊಡಬೇಕಿದೆ. ಜನಪ್ರತಿನಿಧಿಗಳು, ಗೃಹ ಸಚಿವರು, ಮುಖ್ಯಮಂತ್ರಿಗೆ ಹಣ ಕೊಡಬೇಕು. ಪ್ರಬಲ ಮುಖ್ಯಮಂತ್ರಿ ಇದ್ದರೆ ಈ ರೀತಿ ಆಗುವುದಿಲ್ಲ. ದುರ್ಬಲ ಮುಖ್ಯಮಂತ್ರಿ ಇದ್ದಾಗ ಹೀಗೆಲ್ಲ ಆಗುತ್ತದೆ. ಶಾಸಕರಿಗೆಲ್ಲ ತೋಳಗಳಂತೆ ಹಣ ಕೀಳಲು ಬಿಟ್ಟಿದ್ದಾರೆ ಎಂದು ಭಾಸ್ಕರ್ ರಾವ್ ಆರೋಪಿಸಿದ್ದಾರೆ.
ಯಾದಗಿರಿ ಪಿಎಸ್ಐ ಪರಶುರಾಮ್ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ಕರ್ನಾಟಕದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣ ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ಲಂಚಕ್ಕಾಗಿ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಕಿರುಕುಳ ಕೊಟ್ಟಿದ್ದರಿಂದಲೇ ಪರಶುರಾಮ್ ಸಾವಿಗೀಡಾಗಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಸಿಐಡಿ ತನಿಖೆ ಪ್ರಗತಿಯಲ್ಲಿದೆ.