ನವದೆಹಲಿ
ಮುಡಾ ಹಗರಣದ ಸಂಬಂಧ ಶುಕ್ರವಾರ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದ ಸಿಎಂ ಸಿದ್ದರಾಮಯ್ಯ, ಸಂಪೂರ್ಣ ಮಾಹಿತಿ ನೀಡಿ ವರಿಷ್ಠರ ಜೊತೆ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಹೋರಾಟಕ್ಕೆ ಬೆಂಬಲ ನೀಡಿದೆ. ಆದರೆ, ವಿಷಯ ಇದಲ್ಲ. ಈಗ ಮುಖ್ಯಮಂತ್ರಿಗೆ ಹೈಕಮಾಂಡ್ ಬೆಂಬಲ ನೀಡಿದ್ದರೂ ಮುಂದೆ ಸಿಎಂ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಅಸಲಿ ಆಟ ಬೇರೆಯೇ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಹೇಳಿವೆ.
ಕಾಂಗ್ರೆಸ್ ಮನೆಯಲ್ಲಿ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಶುರುವಾಗಿದೆ. ತೆರೆಮರೆಯಲ್ಲೇ ಅದಲು ಬದಲು ಆಟದ ಕಸರತ್ತು ನಡೆಯುತ್ತಿದೆ. ಸಿಎಂ ಬದಲಾವಣೆ ಮಾಡಬೇಕಾದ ಸ್ಥಿತಿ ಬಂದರೆ ಹೇಗೆ ಎಂಬ ಬಗ್ಗೆ ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ. ಸಿಎಂ ಬದಲಾವಣೆ ಸ್ಥಿತಿ ಬಂದರೆ ಮುಂದಿನ ಸಿಎಂ ಯಾರಾಗಲಿದ್ದಾರೆ? ಸಿದ್ದರಾಮಯ್ಯರನ್ನು ಬದಲಾವಣೆ ಮಾಡಿದರೆ ಆ ಸ್ಥಾನಕ್ಕೆ ಯಾರು ಸೂಕ್ತ? ಸರ್ಕಾರದ ರಕ್ಷಣೆಗೆ ಯಾರಿಗೆ ಸಾರಥ್ಯ ಕೊಡಬೇಕೆಂಬ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಶುರುವಾಗಿದೆ ಎನ್ನಲಾಗುತ್ತಿದೆ.
ಹಿರಿಯ ಸಚಿವರು, ಮತ್ತು ಹೈಕಮಾಂಡ್ ಮಟ್ಟದಲ್ಲಿ ಪ್ಲ್ಯಾನ್ ಬಿ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಗೃಹ ಸಚಿವ ಜಿ ಪರಮೇಶ್ವರ್ 2 ಗಂಟೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಸತೀಶ್ ಜಾರಕಿಹೊಳಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಚರ್ಚೆಗಳ ಹಿಂದೆ ಮುಂದಿನ ಲೆಕ್ಕಾಚಾರದ ಬಗ್ಗೆ ಅಲೋಚನೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಹೇಳಿವೆ.
ಬದಲಾವಣೆಯ ಬೆಳವಣಿಗೆಗಳಿಗೆ ಪುಷ್ಟಿ ನೀಡುವಂತಹ ಸನ್ನಿವೇಶಗಳು ಕೂಡ ಕಣ್ಣಮುಂದೆಯೇ ಗೋಚರಿಸುತ್ತಿವೆ. ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಹೈಕಮಾಂಡ್ ನಾಯಕರ ಭೇಟಿಯಾಗಿದ್ದಾರೆ. ಆದರೆ, ಸಭೆ ಮುಗಿದ ಬಳಿಕ ಸಿದ್ದರಾಮಯ್ಯ ಮಾತ್ರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಡಿಸಿಎಂ ಡಿಕೆ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಇಂದು ಸಂಜೆ ಮತ್ತೆ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ನಂತರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇದರ ಮಧ್ಯೆ ಕೆಸಿ ವೇಣುಗೋಪಾಲ್‌ರನ್ನ ಭೇಟಿಯಾದ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಮನೆಯಲ್ಲಿ ಬೀಸಿರುವ ಬದಾಲಾವಣೆ ಬಿರುಗಾಳಿಗೆ ಸಾಕ್ಷ್ಯದಂತಿವೆ.
ಹೈಕಮಾಂಡ್ ಮೀಟಿಂಗ್‌ನಲ್ಲಿ ಸಂಪುಟ ಪುನಾರಚನೆ ಬಗ್ಗೆಯೂ ಪ್ರಸ್ತಾಪವಾಗಿದೆ. ಸಂಪುಟದಿಂದ ಕೆಲ ಸಚಿವರನ್ನ ಕೈ ಬಿಡುವ ಬಗ್ಗೆ ಚರ್ಚೆಯಾಗಿದ್ದು, ಈ ಬಗ್ಗೆ ಚರ್ಚಿಸಲು ಮತ್ತೆ ದೆಹಲಿಗೆ ಬರುವುದಾಗಿ ಸಿಎಂ ಹೇಳಿದ್ದಾರೆ. ಎರಡು ತಿಂಗಳ ಬಳಿಕ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದ್ದು, ಐದರಿಂದ 6 ಸಚಿವರನ್ನ ಸಂಪುಟದಿಂದ ಕೈಬಿಡುವ ಚಿಂತನೆ ಇದೆಯಂತೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಆಗುವ ಸಾಧ್ಯತೆ ಇದೆ.
ಬಿಜೆಪಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಕಹಳೆ ಊದಿದ್ದಾರೆ. ಆದರೆ, ಬದಲಾವಣೆಯ ಚರ್ಚೆ ನಡೆಸಿ ಬಿಜೆಪಿಗೆ ತಾವೇ ಅಸ್ತ್ರ ಕೊಟ್ಟಿದ್ದಾರೆ. ಕಾಂಗ್ರೆಸ್ ಮನೆಯ ಬದಲಾವಣೆ ಬಿರುಗಾಳಿ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಸೀಟ್‌ಗಾಗಿ ಕಾಂಗ್ರೆಸ್‌ನಲ್ಲಿ ಮ್ಯೂಸಿಕಲ್ ಚೇರ್ ನಡೆಯುತ್ತಿದೆ ಎಂದಿದ್ದಾರೆ.ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಉರುಳಾಗಿ ಪರಿಣಮಿಸಿದೆ. ಹೈಕಮಾಂಡ್‌ನಿಂದ ಅಭಯ ಸಿಕ್ಕಿತೋ ಅಥವಾ ಶುಕ್ರವಾರದ ಸಭೆಯ ಬಳಿಕ ಬದಲಾವಣೆ ಭಯ ಶುರುವಾಯಿತೋ ಎಂಬ ಪ್ರಶ್ನೆ ಉದ್ಭವಿಸಿದೆ.