ತುಮಕೂರು:
ತುಮಕೂರು ನಗರ ಹಾಗೂ ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ವಾರದಲ್ಲಿ ಒಂದು ಕಡೆಯಾದರೂ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತ ಬಗ್ಗೆ, ಗಾಯಗೊಂಡ ಬಗ್ಗೆ, ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಗಳು ಬರುತ್ತಲೆ ಇವೆ.ಇತ್ತೀಚೆಗಷ್ಟೆ ಮಧುಗಿರಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ತಿಮ್ಮಣ್ಣ ಎಂಬುವರಿಗೆ ಸೇರಿದ 10 ಕುರಿಗಳನ್ನು ಬೀದಿ ನಾಯಿ ಕಚ್ಚಿ ಸಾಯಿಸಿದೆ. ಬದುಕಿಗೆ ಆಧಾರವಾಗಿದ್ದ ಕುರಿಗಳೆಲ್ಲ ಒಂದೇ ದಿನದಲ್ಲಿ ಅಸು ನೀಗಿದ್ದು, ಕುರಿಗಾಹಿ ಮಮ್ಮಲ ಮರುಗಿದ್ದಾನೆ. 2019ರ ಜುಲೈ ತಿಂಗಳಿನಲ್ಲಿ ಶಿರಾ ತಾಲ್ಲೂಕು ಕಾರೇಹಳ್ಳಿಯ ರಾಮಣ್ಣ ಎಂಬುವರಿಗೆ ಸೇರಿದ 11 ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದ್ದವು. ಇದು ಒಂದೆರಡು ಉದಾಹರಣೆಯಷ್ಟೆ. ಇಂತಹ ಘಟನೆಗಳು ಮರುಕಳಿಸುತ್ತಲೆ ಇವೆ. ಹೆಚ್ಚು ಕುರಿಗಳು ಬಲಿಯಾದಾಗ ಸುದ್ದಿಯಾಗುತ್ತವೆ. ಒಂದೋ, ಎರಡೋ ಕುರಿಗಳು, ಮೇಕೆಗಳು ಸಾಯುತ್ತಲೇ ಇದ್ದು, ಇಂತಹ ಸಣ್ಣಪುಟ್ಟ ಪ್ರಕರಣಗಳು ಬಹಿರಂಗಗೊಳ್ಳುತ್ತಿಲ್ಲ. ಅಷ್ಟರ ಮಟ್ಟಿಗೆ ನಾಯಿಗಳ ಹಾವಳಿ ಮಿತಿಮೀರಿದೆ.
ಚಿರತೆ ದಾಳಿಗೆ ಕುರಿ ಮತ್ತು ಮೇಕೆಗಳು ಬಲಿಯಾಗುತ್ತಿದ್ದರೆ ಮತ್ತೊಂದು ಕಡೆ ಸ್ಥಳೀಯವಾಗಿಯೇ ಇರುವ ಬೀದಿ ನಾಯಿಗಳ ಹಿಂಡು ಸಾಕು ಪ್ರಾಣಿಗಳನ್ನು ಕೊಲ್ಲಲು ಆರಂಭಿಸಿವೆ. ಪಶು ಸಾಕಾಣಿಕೆದಾರರು ಇದರಿಂದ ಹೈರಾಣಾಗಿ ಹೋಗಿದ್ದಾರೆ. ಇಷ್ಟಾದರೂ ಜಿಲ್ಲಾ ಹಾಗೂ ಸ್ಥಳೀಯ ಆಡಳಿತಗಳು ಕ್ರೂರ ನಾಯಿಗಳ ಉಪಟಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ?
2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಕುಣಿಗಲ್ ತಾಲ್ಲೂಕು ಮಾವಿನಕಟ್ಟೆ ಪಾಳ್ಯದ ಬಳಿ ನಾಯಿಗಳ ಹಿಂಡಿಗೆ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಒಂದಷ್ಟು ಕ್ರಮಗಳ ಬಗ್ಗೆ ಸೂಚನೆ ನೀಡಿದ್ದರು.
ತುಮಕೂರು ನಗರದಲ್ಲಂತೂ ಬೀದಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ನಾಯಿ ಅಡ್ಡ ಬಂದು ಬಹಳಷ್ಟು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ರಾತ್ರಿ ವೇಳೆ ಒಂಟಿಯಾಗಿ ಹೋಗುವವರ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸುತ್ತಿವೆ. ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಪಾರಾಗುವುದೇ ಒಂದು ಸಾಹಸದ ಕೆಲಸವಾಗಿದೆ.
ಮಕ್ಕಳ ಮೇಲೆ ನಾಯಿಗಳ ದಾಳಿ ನಡೆದಾಗ, ಆ ಸಂದರ್ಭದಲ್ಲಿ ಸಾರ್ವಜನಿಕ ಕೂಗು ಎದ್ದಾಗ ದಿಢೀರ್ ಎಂದು ಕ್ರಮದ ಭರವಸೆ ನೀಡುವ ಮಹಾನಗರ ಪಾಲಿಕೆಯು ಆನಂತರ ಯಾವುದೇ ಕ್ರಮ ಜರುಗಿಸದೆ ಜಾಣ ಮೌನಕ್ಕೆ ಶರಣಾಗುತ್ತದೆ. ಕಳೆದ ವರ್ಷ ಸದಾಶಿವನಗರದಲ್ಲಿ 8 ಮಕ್ಕಳಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಆಗಲೂ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು.
ಬೀದಿ ನಾಯಿಗಳನ್ನು ನಿಯಂತ್ರಿಸುವ ಕಾರ್ಯಾಚರಣೆ ಶೀಘ್ರವೇ ಆರಂಭವಾಗಲಿದೆ ಎಂದು ಕಳೆದ 3 ವರ್ಷಗಳಿಂದ ನಗರ ಪಾಲಿಕೆ ಹೇಳಿಕೊಂಡೇ ಬಂದಿದೆ. ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವ ಕಾರ್ಯ ಆರಂಭವಾಗಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತಾ ಬಂದರು. ಕಳೆದ ವರ್ಷ ಇನ್ನೂ ಒಂದು ಹೆಜ್ಜೆ ಮುಂದುವರಿದು ಅಜ್ಜಗೊಂಡನಹಳ್ಳಿ ಬಳಿ ಬೀದಿ ನಾಯಿಗಳನ್ನು ಹಿಡಿದು ಸಾಕಲು ಜಾಗ ಗುರುತಿಸಲಾಗಿದೆ. ಶೀಘ್ರವೇ ನಾಯಿಗಳನ್ನು ಹಿಡಿದು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿತ್ತು. ವರ್ಷಗಳು ಉರುಳಿ ಹೋಗುತ್ತ್ತಿವೆಯೇ ಹೊರತು ನಾಯಿಗಳ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ.
ನಗರ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಎಲ್ಲೆಂದರಲ್ಲಿ ಬಿಸಾಡುವ ತ್ಯಾಜ್ಯ ನಾಯಿಗಳಿಗೆ ಆಹಾರವಾಗುತ್ತಿದೆ. ನಾಯಿಕೊಡೆಗಳಂತೆ ಮಾಂಸದ ಅಂಗಡಿಗಳು ತಲೆ ಎತ್ತುತ್ತಿವೆ. ಈ ಅಂಗಡಿಗಳ ತ್ಯಾಜ್ಯದ ರುಚಿ ಕಂಡುಕೊಂಡ ನಾಯಿಗಳು ಮಾಂಸ ಸಿಗದೆ ಹೋದಾಗ ಹುಡುಕಿಕೊಂಡು ಸಾಕು ಪ್ರಾಣಿಗಳ ಮೇಲೆ ಎಗರುತ್ತಿವೆ. ರೊಪ್ಪಗಳಲ್ಲಿ, ದನದ ಕೊಟ್ಟಿಗೆಗಳಲ್ಲಿ ಬಿಟ್ಟಿರುವ ಕುರಿಗಳ ಮೇಲೂ ದಾಳಿ ಮಾಡುತ್ತಿವೆ. ತ್ಯಾಜ್ಯವನ್ನು ರಸ್ತೆಯ ಬಳಿ ಎಸೆಯುವುದು, ಎಲ್ಲೆಂದರಲ್ಲಿ ಬಿಸಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ.
ಗ್ರಾಮ ಪಂಚಾಯತಿಗಳಿಂದ ಹಿಡಿದು ನಗರ ಪಾಲಿಕೆಯವರೆಗೆ ಸ್ಥಳೀಯ ಆಡಳಿತಗಳು ಜನರ ಮೇಲೆ ಹಲವಾರು ರೀತಿಯ ಕರ ವಿಧಿಸುತ್ತವೆ. ಇದರಲ್ಲಿ ಶೇ.2 ಭಿಕ್ಷುಕರ ಕರವೂ ಸೇರಿದೆ. ಆಡಳಿತಗಳು ಈ ಕರವನ್ನು ಉಪಯೋಗಿಸಿಕೊಂಡು ಅಥವಾ ಇತರೆ ಮೂಲಗಳ ಸಹಾಯದಿಂದ ಪ್ರತಿ ತಾಲ್ಲೂಕಿನಲ್ಲಿ ನಾಯಿಗಳ ಪುನರ್ ವಸತಿಗಾಗಿ ಒಂದೊಂದು ಶೆಡ್ ನಿರ್ಮಾಣ ಮಾಡಬಹುದು. ಅಲ್ಲಿ ಸಂತಾನ ಹರಣ ಚಿಕಿತ್ಸೆ ನಡೆಸಿ ನಿಗದಿತವಾಗಿ ಆಹಾರ ನೀಡುವ ವ್ಯವಸ್ಥೆ ಕಲ್ಪಿಸಬಹುದು. ಇದಕ್ಕಾಗಿ ಎನ್‍ಜಿಓಗಳ ಸಹಭಾಗಿತ್ವ ಪಡೆಯಬಹುದು. ನಾಯಿಗಳಿಗೆ ಈ ರೀತಿ ಪುನರ್ ವಸತಿ ಕಲ್ಪಿಸುವುದಾದರೆ ಎಸ್‍ಪಿಸಿಎ ಕಾಯ್ದೆ ಉಲ್ಲಂಘನೆಯಾಗುವುದಿಲ್ಲ ಎನ್ನುತ್ತಾರೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ನಾಗಣ್ಣ.
ತುಮಕೂರು ನಗರದ ಯಾವುದೇ ವಾರ್ಡ್‍ಗೆ ಹೋದರೂ ನಾಯಿಗಳ ಹಿಂಡು ಕಂಡು ಬರುತ್ತದೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲವು ವೇಳೆ ಶಾಲಾ ಮಕ್ಕಳ ಮೇಲೂ ದಾಳಿ ಮಾಡಿವೆ. ಒಂದು ನಾಯಿ ಬೊಗಳಿದರೆ ಸಾಕು ಅದರ ಹಿಂದೆ ಮತ್ತಷ್ಟು ಸೇರಿಕೊಳ್ಳುತ್ತವೆ. ಒಂದರ ಹಿಂದೆ ಒಂದರಂತೆ ಸುತ್ತುವರಿದು ಮನುಷ್ಯನ ಮೇಲೆ ಎಗರುವ ವಾತಾವರಣ ಸೃಷ್ಟಿಯಾಗುತ್ತದೆ. ಕ್ರೂರಿ ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಬರುವುದು ಒಂದು ಸಾಹಸದ ಕೆಲಸ. ದ್ವಿಚಕ್ರ ವಾಹನಗಳಲ್ಲಿ ವೇಗವಾಗಿ ಓಡಿಸಿದರೆ ಅಪಘಾತವಾಗುವುದುಂಟು. ಬದಲಾಗಿ ವಾಹನದ ವೇಗ ಕಡಿಮೆ ಮಾಡಿ ನಾಯಿಗಳನ್ನು ಚದುರಿಸಿ ಬರುವುದೇ ಮೇಲು, ಇದೂ ಒಂದು ಕಲೆ ಎನ್ನುತ್ತಾರೆ ನಿತ್ಯ ನಾಯಿಗಳ ಹಾವಳಿಯಿಂದ ಬೇಸತ್ತಿರುವವರು.
ಮಾಂಸ ಮಾರಾಟದ ಅಂಗಡಿಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಈ ಅಂಗಡಿಗಳ ಬಳಿ ಬಿಸಾಡುವ ತ್ಯಾಜ್ಯ ತಿನ್ನಲು ನಾಯಿಗಳು ಅಲ್ಲಿಯೇ ಸುತ್ತುವರಿಯುತ್ತಿರುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ರಸ್ತೆಗೆ ಹೊಂದಿಕೊಂಡೆ ಮಲಗಿರುತ್ತವೆ. ಅವುಗಳಿಗೆ ವಾಹನ ಸ್ವಲ್ಪ ತಾಕಿದರೂ ಸಾಕು ಇಡೀ ಗುಂಪು ಅವರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೋಳಿ, ಕುರಿ, ಮೇಕೆ ಮತ್ತಿತರ ಮಾಂಸದ ತ್ಯಾಜ್ಯ ಹಾಗೂ ಇತರೆ ಅನುಪಯುಕ್ತ ವಸ್ತುಗಳನ್ನು ಕೆಲವು ಖಾಲಿ ಜಾಗಗಳಲ್ಲಿ ಎಸೆಯಲಾಗುತ್ತಿದೆ. ಇಂತಹ ಕಡೆಗಳಲ್ಲಿಯೂ ನಾಯಿಗಳ ಗುಂಪು ಸೇರಿಕೊಂಡು ಅಲ್ಲಿ ಹೋಗಿಬರುವವರ ಮೇಲೆ ಎರಗಲು ಮುಂದಾಗುತ್ತವೆ.
ಬೀದಿನಾಯಿ ಹಾವಳಿ ವಿರುದ್ಧ ಕ್ರಮಕ್ಕೆ ಸೂಚನೆ
ನಗರದಲ್ಲಿ ಕಾಡುತ್ತಿರುವ ಬೀದಿ ನಾಯಿಗಳ ಮತ್ತು ಬಿಡಾಡಿ ಹಂದಿಗಳ ಹಾವಳಿ ವಿರುದ್ಧ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಪೌರಾಡಳಿತ ನಿರ್ದೇಶಕರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ. ಸಾರ್ವಜನಿಕ ಹೋರಾಟಗಾರರೊಬ್ಬರು ಇತ್ತೀಚೆಗೆ ಸಲ್ಲಿಸಿದ್ದ ದೂರಿನ ಅರ್ಜಿಗೆ ಸಂಬಂಧಿಸಿದಂತೆ ಈ ಪತ್ರ ರವಾನೆಯಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಓಡಾಡಲು ಹೆದರುವಂತಾಗಿದೆ. ವಾಯು ವಿಹಾರಿಗಳೂ ಸಹ ಹೆದರುತ್ತಿದ್ದಾರೆ. ಎಲ್ಲೆಂದರಲ್ಲಿ ನುಗ್ಗುವ ಹಂದಿಗಳಿಂದ ತುಂಬಾ ತೊಂದರೆಯುಂಟಾಗುತ್ತಿದೆ. ಈ ಬಗ್ಗೆ ಕ್ರಮ ಜರಗಿಸುವಂತೆ ಪತ್ರದಲ್ಲಿ ಕೋರಲಾಗಿತ್ತು.
ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
