ಪಾಟ್ನಾ:
ಈ ವರ್ಷ ಪವಿತ್ರ ರಂಜಾನ್ ಮಾಸದ ಶುಕ್ರವಾರ ಬರುವ ಹೋಳಿ ಹಬ್ಬದಂದು ಮುಸ್ಲಿಮರು ಮನೆ ಒಳಗಡೆಯೇ ಇರಬೇಕು ಎಂದು ಬಿಹಾರದ ಶಾಸಕರೊಬ್ಬರು ಸೋಮವಾರ ಮನವಿ ಮಾಡಿದ್ದಾರೆ. ಹಿಂದೂಗಳು ಯಾವುದೇ ಅಡ್ಡಿಯಿಲ್ಲದೆ ಹೋಳಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಿ ಎಂದು ಅವರು ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಬನಿ ಜಿಲ್ಲೆಯ ಬಿಸ್ಫಿ ವಿಧಾನಸಭಾ ಕ್ಷೇತ್ರದ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್, ಮುಸ್ಲಿಮರಿಗೆ ವರ್ಷದಲ್ಲಿ 52 ಜುಮ್ಮಾಗಳು (ಶುಕ್ರವಾರ) ಇರುತ್ತವೆ. ಅವುಗಳಲ್ಲಿ ಒಂದು ದಿನ ಹೋಳಿ ಹಬ್ಬ ಬಂದಿದೆ. ಆದ್ದರಿಂದ, ಅವರು ಹಿಂದೂಗಳಿಗೆ ಹಬ್ಬವನ್ನು ಆಚರಿಸಲು ಅವಕಾಶ ನೀಡಬೇಕು ಮತ್ತು ಅವರ ಮೇಲೆ ಬಣ್ಣಗಳನ್ನು ಬಳಿದರೆ ಕೋಪಗೊಳ್ಳಬಾರದು. ಅಂತಹವರಿದ್ದರೆ ಅವರು ಮನೆಯೊಳಗೆ ಇರಬೇಕು. ಕೋಮು ಸೌಹಾರ್ದತೆ ಕಾಪಾಡಲು ಇದು ಅತ್ಯಗತ್ಯ ಎಂದರು.
ಮುಸ್ಲಿಮರು ರಂಜಾನ್‌ನಲ್ಲಿ ರೋಜಾ (ಉಪವಾಸ) ಆಚರಿಸುತ್ತಾರೆ ಮತ್ತು ಶುಕ್ರವಾರದಂದು ವಿಶೇಷ ಪ್ರಾರ್ಥನೆ ಮಾಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅವರು ಯಾವಾಗಲೂ ಇಬ್ಬಗೆಯ ನೀತಿ ಅನುಸರಿಸುತ್ತಾರೆ.
ಅಬಿರ್-ಗುಲಾಲ್ (ಬಣ್ಣದ ಪುಡಿಗಳು) ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಲು ಖುಷಿಪಡುತ್ತಾರೆ. ಆದರೆ ಅವರ ಬಟ್ಟೆಯ ಮೇಲೆ ಕೆಲವು ಕಲೆಗಳು ಬಿದ್ದರೆ, ದೆವ್ವ ಬಿದ್ದಂತೆ ಭಯಪಡುತ್ತಾರೆ ಎಂದು ಟೀಕಿಸಿದರು. ಈ ಹೇಳಿಕೆ ನೀಡಿದ ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, “ಇಂತಹ ಹೇಳಿಕೆ ನೀಡಲು ಅವರು ಯಾರು? ಹೇಗೆ ಇಂತಹ ಹೇಳಿಕೆ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು, “ಸಿಎಂ ಎಲ್ಲಿದೀಯಪ್ಪಾ? ಬಚೋಲ್‌ನನ್ನು ಶಿಕ್ಷಿಸುವ ಧೈರ್ಯ ಅವರಿಗೆ ಇದೆಯೇ ಎಂದು ಕಿಡಿಕಾರಿದ್ದಾರೆ.
ಭಾರತ ‘ರಾಮ ಮತ್ತು ರಹೀಮ್’ನಲ್ಲಿ ನಂಬಿಕೆಯಿರುವ ದೇಶ. ಇದು ಬಿಹಾರ – ಇಲ್ಲಿ ಒಬ್ಬ ಮುಸ್ಲಿಂ ಸಹೋದರನನ್ನು ರಕ್ಷಿಸಲು ಐದು ಅಥವಾ ಆರು ಹಿಂದೂಗಳು ನಿಲ್ಲುತ್ತಾರೆ ಎಂದು ತೇಜಸ್ವಿ ಪಿಟಿಐಗೆ ತಿಳಿಸಿದರು.
