ಹೈದರಾಬಾದ್:
ರಸ್ತೆ ದಾಟುವಾಗ ಕೆಲವರು ಪೋನಿನಲ್ಲಿ ಮಾತನಾಡುವುದರಲ್ಲೇ ನಿರತರಾಗಿರುತ್ತಾರೆ. ಇದರಿಂದ ಅವರಿಗೆ ರಸ್ತೆಯಲ್ಲಿ ಚಲಿಸುವ ವಾಹನದ ಬಗ್ಗೆ ಗಮನವಿರುವುದಿಲ್ಲ. ಹಾಗಾಗಿ ಇದರಿಂದ ಅನೇಕ ಅವಗಢಗಳು ಸಂಭವಿಸುತ್ತದೆ. ಅಂತಹದೊಂದು ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಬಹು ಎತ್ತರಕ್ಕೆ ಎಗರಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಜುಲೈ 14ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಣ್ಣೋಜಿಗುಡದ ಆರ್‌ಜಿಕೆ ಕಾಲೋನಿ ನಿವಾಸಿ ಬೊಡ್ಡು ಗಿರಿ ಬಾಬು (38) ಕಾರು ಅಪಘಾತದಿಂದ ಮೃತಪಟ್ಟ ವ್ಯಕ್ತಿ. ಜುಲೈ 14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಾಟ್ಕೇಸರ್ ಗ್ರಾಮದ ಕಡೆಗೆ ಹೋಗಲು ಎನ್‍ಟಿಪಿಸಿ ಎಕ್ಸ್ ರಸ್ತೆಯ ಬಳಿ ಎನ್‌ಎಚ್ -163 ರಸ್ತೆಯನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ಈ ಅಪಘಾತವು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು @sudhakarudumula ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪೋಸ್ಟ್ ನಲ್ಲಿ, ಮೊಬೈಲ್ ಫೋನ್‍ನಲ್ಲಿ ಮಾತನಾಡುವಾಗ ರಸ್ತೆ ದಾಟುವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಘಟನೆಯ ಪರಿಣಾಮ ಅಪಘಾತಕ್ಕೀಡಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ವಜ್ರಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ನಂತರ ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ಕಾಮಿನೇನಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನಪ್ಪಿರುವುದಾಗಿ ತಿಳಿದುಬಂದಿದೆ. ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದ ಕಾರಣ ಆತನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಚರಾಮ್ ಐಟಿ ಕಾರಿಡಾರ್ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಚಾಲಕ ಹಾಗೂ ಆತನ ಕೆಂಪು ಬಣ್ಣದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಈ ಘಟನೆ ಹೈದರಾಬಾದ್‍ನಲ್ಲಿ ಸಂಭವಿಸಿದ ಎರಡನೇ ಗಂಭೀರವಾದ ಅಪಘಾತ ಇದಾಗಿದೆ. ಇದಕ್ಕೂ ಮುನ್ನ ಜುಲೈ 13 ರಂದು ಗಚಿಬೌಲಿಯಲ್ಲಿ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಫುಡ್ ಡೆಲಿವರಿ ಬಾಯ್ ಸಾವನ್ನಪ್ಪಿದ್ದ.