ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ರೈತರಿಗೆ ಅತಿಹೆಚ್ಚು ನೋಟೀಸ್‌ : ಜಿ ಪರಮೇಶ್ವರ್‌

ಬೆಂಗಳೂರು:

   ಈಗಿನ ಸಿದ್ದರಾಮಯ್ಯ ಸರ್ಕಾರಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ರೈತರಿಗೆ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಸೋಮವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ 2900 ಎಕರೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ನಾವು 300 ಎಕರೆಗೆ ನೀಡಿದ್ದೇವೆಂದು ಹೇಳಿದರು.

    ಸತ್ಯವನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆಂದು ಪ್ರಶ್ನಿಸಿದರು.

   ಮಾಜಿ ಶಾಸಕ ಕುಮಾರ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2,900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ವಕ್ಫ್ ವಿಚಾರವನ್ನಿಟ್ಟುಕೊಂಡು ರಾಜ್ಯ ಸುತ್ತಲು ಹೊರಟಿರುವ ಬಿಜೆಪಿ ನಾಯಕರು, ಯಾರು ಜಾಸ್ತಿ ನೋಟಿಸ್ ನೀಡಿದ್ದು? ಯಾರ ಮೇಲೆ‌ ಆಪಾದನೆ ಮಾಡಬೇಕು? ಎಂಬುದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು,

   ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಈ ವಿಷಯ ಗೊತ್ತಿದ್ದು, ಬಿಜೆಪಿಗೆ ಮುಜುಗರ ತರಲು ಪ್ರತಿಭಟನೆ ನಡೆಸುತ್ತಿದ್ದಾರೆಂದು ಇದೇ ವೇಳೆ ವ್ಯಂಗ್ಯವಾಡಿದರು.ಬಳಿಕ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸುವ ಕುರಿತು ನೂತನವಾಗಿ ಆಯ್ಕೆಯಾಗಿರುವ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಬಳಿ 138 ಶಾಸಕರಿದ್ದಾರೆ. ಸರ್ಕಾರ ಸ್ಥಿರವಾಗಿದೆ. ಅವರಿಗೆ ಆಪರೇಷನ್ ಕಮಲ ಬೇಡದಿರುವಾಗ, ನಮಗೇಕೆ ಆ ಶಾಸಕರು ಎಂದು ಪ್ರಶ್ನಿಸಿದರು.

Recent Articles

spot_img

Related Stories

Share via
Copy link