ರಾಜ್ಯದಲ್ಲಿ ತಾರಕ್ಕೇರಿದ ಬರದ ಚರ್ಚೆ : ಸಮೀಕ್ಷೆಗೆಂದು ಟೊಂಕ ಕಟ್ಟಿದ ರಾಜಕಾರಣಿಗಳು….!

ತುಮಕೂರು:

     ಮಳೆ ಕೊರತೆ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳನ್ನು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇದರ ಹಿಂದೆಯೇ ಬರ ಪರಿಸ್ಥಿತಿ ಅಧ್ಯಯನಕ್ಕಾಗಿಯೇ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದೇ ತಂಡಕ್ಕೆ ಜಿಲ್ಲಾಡಳಿತ ಒಂದು ಸಮಗ್ರ ವರದಿಯನ್ನು ಸಲ್ಲಿಸಿದೆ.

    ಜಿಲ್ಲೆಯಲ್ಲಿ ಶೇ.69 ರಷ್ಟು ಬಿತ್ತನೆಯಾಗಿದ್ದು, ಇದರಲ್ಲಿ ಶೇಕಡ ಮುಕ್ಕಾಲು ಭಾಗ ಬೆಳೆ ಹಾನಿಯಾಗಿದೆ. 1880 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಸಣ್ಣ ಮತ್ತು ಮಧ್ಯಮ ರೈತರಿಗೆ ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ 8500 ರೂ. ಪರಿಹಾರದಂತೆ 148 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ಜಿಲ್ಲೆಯಲ್ಲಿ 3,14,630 ಹೆಕ್ಟೇರ್ ಪೈಕಿ 2,19,554 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಶೇ.30 ರಷ್ಟು ಬಿತ್ತನೆ ಕಡಿಮೆಯಾದರೂ ಬಿತ್ತಿರುವ ಬೆಳೆಯೂ ಸಹ ರೈತರ ಕೈಗೆ ಬಾರದ ಪರಿಸ್ಥಿತಿ ಇದೆ. ಇದೆಲ್ಲವನ್ನೂ ಪರಿಶೀಲಿಸಿ 1,08,622.06 ರೂ.ಗಳಷ್ಟು ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದು ಕೇಂದ್ರ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ನಷ್ಟವಾಗಿದೆ ಎಂಬ ಸಮಗ್ರ ವರದಿ ಕೇಂದ್ರದ ಕೈ ಸೇರಿದೆ. ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿಗಳು ವರದಿ ತಲುಪಿಸಿದ್ದಾರೆ.

    ಈಗ ಏನಿದ್ದರೂ ಬರ ಪರಿಹಾರದ ಹಣ ಬಿಡುಗಡೆಯಾಗಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಇಂತಹ ಸಂದರ್ಭದಲ್ಲಿ ವಿವಾದಗಳು ತಲೆದೋರಲಾರವು. ಈಗ ಪರಿಸ್ಥಿತಿ ವಿಭಿನ್ನ. ರಾಜ್ಯಕ್ಕೆ ಬರಬೇಕಾದ ಅನುದಾನದ, ಪರಿಹಾರದ ಪಾಲು ಸರಿಯಾಗಿ ಬರುತ್ತಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಇವೆ. ಈ ಸರ್ಕಾರದಲ್ಲಿ ಮಾತ್ರವೇ ಅಲ್ಲ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಸೂಕ್ತ ಸಮಯದಲ್ಲಿ ಅನುದಾನ ಬಾರದೆ ಇದ್ದುದಕ್ಕೆ ಅಸಮಾದಾನ ಹೊರ ಹಾಕಿದ್ದುಂಟು. ತುಮಕೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿಯೇ ಬಿ.ಎಸ್.ಯಡಿಯೂರಪ್ಪ ಈ ಅಸಮಾದಾನ ಹೊರ ಹಾಕಿದ್ದರು.

   ಈಗ ಕಾಂಗ್ರೆಸ್ ಸರ್ಕಾರ ಇದೆ. ಅನುದಾನ ಮತ್ತು ವಿವಿಧ ಬಾಬತ್ತುಗಳ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಅನುಮಾನಗಳಿಲ್ಲ. ಇದೇ ವಿಚಾರವಾಗಿ ಕೆಸರೆರಚಾಟ ಆರಂಭವಾಗಿದೆ. ಈಗ ಬೆಳೆ ನಷ್ಟ ಪರಿಹಾರದಲ್ಲಿಯೂ ಇದೇ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಬೆಳೆ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿಗಳಾದಿಯಾಗಿ ರಾಜ್ಯ ಸರ್ಕಾರದ ಹಲವು ಸಚಿವರು ಆರೋಪಿಸುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬರ ಪರಿಹಾರ ನೀಡುವಲ್ಲಿ ರಾಜ್ಯ ವಿಫಲವಾಗಿದೆ ಎನ್ನುತ್ತಿದ್ದಾರೆ.

    ಬಿಜೆಪಿಯು ಬರ ಪರಿಸ್ಥಿತಿ ಅಧ್ಯಯನಕ್ಕೆ ಇಳಿದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಪುಟಿದೆದ್ದಂತೆ ಕಾಣುತ್ತಿದ್ದಾರೆ. ಇಷ್ಟು ದಿನಗಳ ಕಾಲ ಒಂದು ರೀತಿಯಲ್ಲಿ ಮೌನಿಯಾಗಿಯೇ ಇದ್ದ ಬಿ.ಎಸ್.ವೈ. ಕಳೆದ ಒಂದು ವಾರದಿಂದ ಚುರುಕಾಗಿದ್ದಾರೆ. ಬರ ಪರಿಸ್ಥಿತಿ ಅಧ್ಯಯನದ ಹೆಸರಿನಲ್ಲಿ ಜಿಲ್ಲೆ, ತಾಲ್ಲೂಕುಗಳನ್ನು ಎಡತಾಕುತ್ತಿದ್ದಾರೆ. ಇವರ ಜೊತೆಗೆ ಬಿಜೆಪಿಯ ಇತರೆ ಕೆಲವು ನಾಯಕರು ಸಾಥ್ ನೀಡಿದ್ದಾರೆ.

    ಬಿಜೆಪಿ ಬರ ಪರಿಸ್ಥಿತಿ ಅಧ್ಯಯನ ಘೋಷಿಸುತ್ತಿದ್ದಂತೆಯೇ ಅದರ ಮಿತ್ರ ಪಕ್ಷವೂ ಆಗಿರುವ ಜೆಡಿಎಸ್ ಕೂಡ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದೆ. ನ.9 ರಿಂದ ಜಿಲ್ಲೆಯಲ್ಲಿ ಎರಡು ತಂಡಗಳಾಗಿ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಆ ಭಾಗದ ನಾಯಕರು, ಜಿಲ್ಲಾ ಮುಖಂಡರು ಇದರಲ್ಲಿ ಭಾಗಿಯಾಗಲಿದ್ದಾರೆ. ನ.15ಕ್ಕೆ ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದಾರೆ. ನ.9 ರಿಂದ 15ರವರೆಗೆ ಎರಡು ತಂಡಗಳು ಜಿಲ್ಲೆಯಾದ್ಯಂತ ಸಂಚರಿಸಿದರೂ ಸಹ ರಾಜ್ಯ ಮಟ್ಟದ ಜೆಡಿಎಸ್ ನಾಯಕರು ಭಾಗಿಯಾಗುತ್ತಿಲ್ಲ.

    ಜಿಲ್ಲೆಯಲ್ಲಿ ಆಗಿರುವ ನಷ್ಟ, ಒಟ್ಟಾರೆ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಅಧ್ಯಯನಕ್ಕಾಗಿಯೇ ಆಗಮಿಸಿದ ತಂಡಕ್ಕೆ ವರದಿ ಸಲ್ಲಿಕೆಯಾಗಿದೆ. ಜಿಲ್ಲಾಡಳಿತಗಳು ಈಗಾಗಲೇ ಪ್ರತ್ಯೇಕವಾಗಿ ತಮ್ಮ ವರದಿ ಸಲ್ಲಿಸಿವೆ. ಈಗ ಏನಿದ್ದರೂ ಈ ವರದಿಯಾಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬರ ಪರಿಹಾರ ಪ್ರಕ್ರಿಯೆಗಳನ್ನು ಚುರುಕುಗೊಳಿಸಬೇಕು.

     ಪರಿಸ್ಥಿತಿ ಈಗ ಭಿನ್ನವಾಗುತ್ತಿದೆ. ಈಗಾಗಲೇ ನಡೆಸಿರುವ ಅಧ್ಯಯನಕ್ಕೆ ಬದಲಾಗಿ ಮತ್ತೊಂದು ಅಧ್ಯಯನ ನಡೆಸಲು ಎರಡೂ ಪಕ್ಷಗಳು ಮುಂದಾಗಿವೆ. ಹಾಗಾದರೆ ಈಗ ಸರ್ಕಾರದ ವತಿಯಿಂದ ನಡೆಸಿರುವ ಅಧ್ಯಯನ ವರದಿ, ಪರಿಹಾರದ ಬೇಡಿಕೆ ಸಮರ್ಪಕವಾಗಿಲ್ಲವೆ? ಮತ್ತೊಂದು ಅಧ್ಯಯನ ನಡೆಸಿ ಪ್ರತ್ಯೇಕ ವರದಿ ಸಲ್ಲಿಸುವರೆ ಎಂಬ ಗೊಂದಲಗಳು ಸಹಜವಾಗಿ ಮೂಡುತ್ತವೆ.

    ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಈ ಸರ್ಕಾರ ಬೇರೆ ಏನನ್ನೂ ಮಾಡುತ್ತಿಲ್ಲ ಎಂಬ ಆರೋಪಗಳನ್ನು ವಿಪಕ್ಷಗಳ ಮುಖಂಡರು ಮಾಡುತ್ತಲೇ ಇದ್ದಾರೆ. ಬರ ಪರಿಹಾರದ ಅನುದಾನವನ್ನು ಕೇಂದ್ರದಿAದ ತರುವಲ್ಲಿ ವೈಫಲ್ಯ ಹೊಂದಿದ್ದಾರೆ ಎಂದೂ ಸಹ ಆರೋಪಿಸುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಂಸದರು ಈ ಸಂದರ್ಭದಲ್ಲಿ ತಮ್ಮ ಧ್ವನಿ ಹೊರ ಹಾಕಬೇಕು. ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಾದ ಯಾವುದೇ ಅನುದಾನ ಇರಲಿ ಅದಕ್ಕಾಗಿ ಶ್ರಮಿಸಬೇಕು. ಆದರೆ ರಾಜ್ಯದಲ್ಲಿ ಇಂತಹ ಪ್ರಯತ್ನಗಳೇ ಕಾಣುತ್ತಿಲ್ಲ.

   ಇದೀಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬರ ಪರಿಸ್ಥಿತಿ ಅವಲೋಕನಕ್ಕೆ ಮುಂದಾಗಿದ್ದು, ಕೇಂದ್ರಕ್ಕೆ ವರದಿ ಸಲ್ಲಿಸಲು ಮುಂದಾಗಿವೆ. ಆ ಮೂಲಕವಾದರೂ ಪರಿಹಾರ ಬರಲಿ ಎಂಬುದು ಎಲ್ಲರ ಅಪೇಕ್ಷೆ. ಆದರೆ ಇದರಲ್ಲೂ ರಾಜಕೀಯವನ್ನು ನಿರೀಕ್ಷಿಸಬೇಕೆ? ಬರ ಪರಿಸ್ಥಿತಿಯ ಅಧ್ಯಯನ ಮತ್ತು ಪರಿಹಾರದ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಾ ಹೋದರೆ ಪರಿಸ್ಥಿತಿ ಏನಾಗಬಹದು ಎಂಬುದು ಪ್ರಜ್ಞಾವಂತರ ಅಸಮಾಧಾನ. ರಾಜ್ಯ ಸರ್ಕಾರದ ವೈಫಲ್ಯವೇ ಇರಲಿ, ಕೇಂದ್ರ ಸರ್ಕಾರದ ನಿರ್ಲಕ್ಷö್ಯ ಧೋರಣೆಯೇ ಇರಲಿ, ವಿಪಕ್ಷಗಳ ರಾಜಕೀಯ ವರಸೆಯೇ ಇರಲಿ, ಏನಾದರೂ ಆಗಲಿ ಅಂತಿಮವಾಗಿ ಈ ರಾಜ್ಯಕ್ಕೆ ಬರಬೇಕಾದ ಅನುದಾನ, ಪರಿಹಾರಗಳು ಸಕಾಲದಲ್ಲಿ ಬಂದರಷ್ಟೇ ಸಾಕು.

    ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಇತರೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಹೊಸ ಯೋಜನೆಗಳು ರೂಪಿತವಾಗುತ್ತಿಲ್ಲ. ಇರುವ ಯೋಜನೆಗಳೇ ಸಮರ್ಪಕವಾಗಿ ಮುಂದುವರಿದರೆ ಸಾಕು. ಈ ನಡುವೆ ಬರಗಾಲ ಪರಿಸ್ಥಿತಿ ಆವರಿಸಿದೆ. ನೀರಿನ ಕೊರತೆ ಎದುರಾದರೆ ಬೇರೆಲ್ಲ ಕ್ಷೇತ್ರಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಸಹಜ. ನೀರಿನ ಅಭಾವ, ವಿದ್ಯುತ್ ಕೊರತೆಗೂ ಕಾರನವಾಗಲಿದೆ. ಈಗಾಗಲೇ ವಿದ್ಯುತ್ ಕೊರತೆ ಅನುಭವಿಸುತ್ತಿರುವ ರಾಜ್ಯಕ್ಕೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ. ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕೆಂಬುದು ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಆದಾಯ ಸಂಗ್ರಹಣೆಗೆ ಮುಂದಾಗಬೇಕು. ಕೇಂದ್ರದ ಅನುದಾನವೂ ಬರಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap