ನಿಟ್ಟೂರು:
ಶತಮಾನೋತ್ಸವ ಮರೆತ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು
ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮೈದಾನವನ್ನು ಸ್ವಚ್ಛತೆ ಮಾಡುವುದಕ್ಕಿಂತ ಹಾಳು ಮಾಡುವವರೆ ಜಾಸ್ತಿಯಾಗಿದ್ದಾರೆ. ಗ್ರಾಮದ ಜ್ಞಾನ ದೇವಾಲಯ ಆಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣವು ಕೆಲವರಿಗೆ ಹುಟ್ಟುಹಬ್ಬ, ಪಾರ್ಟಿ ಆಚರಿಸಿಕೊಳ್ಳಲು ಬಳಕೆಯಾಗುತ್ತಿದ್ದು, ಶಾಲಾ ಆವರಣದಲ್ಲಿ ಎಣ್ಣೆ ಹೊಡೆದು ಮೋಜು-ಮಸ್ತಿ ಮಾಡಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಅಲ್ಲಿ ಬಿಸಾಡಿ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ದುರ್ವರ್ತನೆಯು ಗ್ರಾಮಸ್ಥರಲ್ಲಿ, ಪೋಷಕರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಕೆಲ ಹಳೆಯ ವಿದ್ಯಾರ್ಥಿಗಳೆ ಶಾಲಾ ಮೈದಾನದಲ್ಲಿ ಆಡಿದ್ದೆ ಆಟ, ಹೂಡಿದ್ದೆ ಲಗ್ಗೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುಗಳ ಮಳೆ ಸುರಿಸಿದ್ದಾರೆ.
ಸದರಿ ಪ್ರಾಥಮಿಕ ಪಾಠಶಾಲೆಯು 100 ವರ್ಷಗಳಷ್ಟು ಹಳೆಯ ಶಾಲೆಯಾಗಿದ್ದು, ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಶತಮಾನೋತ್ಸವ ಆಚರಣೆ ಮಾಡುವುದು ಬಿಟ್ಟು ಶಾಲಾ ಮೈದಾನದಲ್ಲಿ ಕೆಲವರು ಅನೈತಿಕ ಚಟುವಟಿಕೆ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಹಳೆ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಗ್ರಾಮದ ಮುಖಂಡರುಗಳು ಚಿಂತನೆ ಮಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
