ತುಮಕೂರು
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ಅಂತರಿಕ ಕಿತ್ತಾಟದಿಂದ ರಾಜಕೀಯ ಆರಾಜಕತೆ ಉಂಟಾಗಿದ್ದು, ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡುವ ಬದಲು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಕರ್ನಾಟಕ ವೀರಶೈವ-ಲಿಂಗಾಯಿತ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ನಾಯಕರುಗಳ ಪರಸ್ವರ ಕಿತ್ತಾಟ, ಆಡಿಯೋ ಬಿಡುಗಡೆ ಸೇರಿದಂತೆ ನಡೆಯುತ್ತಿರುವ ವಿದ್ಯಮಾನಗಳಿಂದ ಇಡೀ ರಾಜ್ಯದ ಮಾನ, ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ನಡೆತೆಯನ್ನು ಬಿಟ್ಟು ಹೋಗುವಂತೆ ಸಲಹೆ ನೀಡಿದರು.
ಕಳೆದ 2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದಾಗ ಉತ್ತಮ ಆಡಳಿತ ನೀಡಿದ್ದನ್ನು ನಾವು ಗಮನಿಸಬಹುದಾಗಿದೆ. ಅಂದು ನೀಡಿದ ಆಡಳಿತವನ್ನು ಇಂದಿಗೂ ರಾಜ್ಯದ ಜನತೆ ಮರೆತಿಲ್ಲ. ಅದೇ ರೀತಿ ಉತ್ತಮ ಆಡಳಿತದ ಮೂಲಕ ಜನತೆಗೆ ಅನುಕೂಲ ಮಾಡಿಕೊಟ್ಟರೆ, ಮುಂದಿನ ಜನಾಂಗ ಸರ್ಕಾರವನ್ನು ಮರೆಯುವುದಿಲ್ಲ. ಆದರೆ ಈ ರೀತಿ ಕೆಸರೆರಚಾಟದಿಂದ ಯಾರಿಗೂ ಲಾಭವಾಗುವುದಿಲ್ಲ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರುಗಳು ಪರಸ್ವರ ಮೇಲೆ ಆಡಿಯೋ, ವೀಡಿಯೋದಂತಹ ಆರೋಪಗಳನ್ನು ಮಾಡುವುದನ್ನು ಬಿಟ್ಟು, ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡಲಿ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಆಡಿಯೋ ಟೇಪ್ ಬಿಡುಗಡೆ ಮಾಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು, ನಕಲಿ ಟೇಪ್ ರೆಡಿ ಮಾಡಿ, ಒಂದು ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದು ಸಮುದಾಯಗಳ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಕೆಟ್ಟ ಸಂಸ್ಕತಿಗೆ ಪೂರ್ಣ ವಿರಾಮ ನೀಡುವಂತೆ ಮಹೇಶ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಟಿ.ಆರ್.ಸದಾಶಿವಯ್ಯ, ವಿಜಯಕುಮಾರ್, ಅಭಿಲಾಷ್, ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.