ಬೆಂಗಳೂರು
ಕೆಲವು ನಕಲಿ ವೀರರು ಬ್ರಾಂಡೆಡ್ ಉತ್ಪನ್ನಗಳನ್ನೇ ಹೋಲುವಂತೆ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿರುವುದು ಬಯಲಾಗಿದೆ.
ಕಾಟನ್ ಪೇಟೆಯಲ್ಲಿ ನಕಲಿ ಸರ್ಫ್ ಎಕ್ಸೆಲ್, ರಿನ್, ವ್ಹೀಲ್, ಏರಿಯಲ್, ಟೈಡ್, ಗುಡ್ ನೈಟ್ ಮತ್ತು ಆಲ್ ಔಟ್ ಸೇರಿ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳನ್ನ ಇಟ್ಟು ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ದೂರು ಆಧರಿಸಿ ಸಿಸಿಬಿ ಅಧಿಕಾರಿಗಳು ಗೋಡೌನ್ ಮತ್ತು ಮಾದನಾಯಕನಹಳ್ಳಿ ಠಾಣವ್ಯಾಪ್ತಿಯ ಕಾಚೋಹಳ್ಳಿಯ ಕಾರ್ಖಾನೆ ಮೇಲೆ ದಾಳಿ ಮಾಡಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಕಲಿ ಉತ್ಪನ್ನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ವಶಪಡಿಸಿಕೊಂಡ ನಕಲಿ ಮಾಲುಗಳ ಅಂದಾಜು ಮೌಲ್ಯ 1.75 ಕೋಟಿ ರೂ. ಎನ್ನಲಾಗಿದೆ.
ಸದ್ಯ ನಕಲಿ ಉತ್ಪನ್ನಗಳ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ದಳಪತ್ ಸಿಂಗ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಚೋಹಳ್ಳಿಯಲ್ಲಿ ನಕಲಿ ಉತ್ಪನ್ನಗಳ ಕಾರ್ಖಾನೆ ತೆರೆದಿದ್ದ ದಳಪತ್ ಸಿಂಗ್ ನಕಲಿ ಡಿಟರ್ಜೆಂಟ್ ಪೌಡರ್ ಮತ್ತು ಸೊಳ್ಳೆ ನಿವಾರಕ ದ್ರವಗಳನ್ನು ಉತ್ಪಾದಿಸುತ್ತಿದ್ದ. ಈ ನಕಲಿ ಉತ್ಪನ್ನಗಳಿಗೆ ಬೇಕಾದ ಲೇಬಲ್ಗಳನ್ನ ಗುಜರಾತ್ನ ಸೂರತ್ ನಲ್ಲಿರುವ ಕೆಲವು ಪ್ರಿಂಟಿಂಗ್ ಹಬ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದ.
ನಕಲಿ ಉತ್ಪನ್ನಗಳನ್ನು ಹುಬ್ಬಳ್ಳಿ, ಬೆಳಗಾವಿ, ಕೋಲಾರ, ಮಂಗಳೂರು, ಚೆನ್ನೈ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ನಕಲಿ ದಂಧೆಯ ಜಾಲ ದೊಡ್ಡದಾಗಿದ್ದು ಸಿಸಿಬಿ ಪೊಲೀಸರು ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.