ಕೋವಿಡ್‍ ಪರಿಣಾಮ ಶಬರಿಮಲೆ ಯಾತ್ರಿಕರ ಸಂಖ್ಯೆ ಇಳಿಮುಖ

ಹುಳಿಯಾರು:


ಹುಳಿಯಾರಿನಲ್ಲಿ ನಿಂತಲ್ಲೇ ನಿಂತಿವೆ ಟ್ಯಾಕ್ಸಿಗಳು

          ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆ ಯಾತ್ರಿಕರ ಸಂಖ್ಯೆ ಕುಸಿದಿದ್ದು ಇದರಿಂದ ಟ್ಯಾಕ್ಸಿ, ಟಿಟಿ ವಾಹನಗಳ ಚಾಲಕರು, ಮಾಲೀಕರಿಗೆ ಭಾರಿ ನಷ್ಟ ಉಂಟಾಗಿದೆ.

ಹೌದು ಹುಳಿಯಾರು ಪಟ್ಟಣದಿಂದಲೇ ಪ್ರತಿ ವರ್ಷ ನಾನೂರಕ್ಕೂ ಹೆಚ್ಚು ಮಂದಿ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದರು. ಹಾಗಾಗಿ ಡಿಸೆಂಬರ್ ಮತ್ತು ಜನವರಿ ಮಾಹೆಯಲ್ಲಿ ಟ್ಯಾಕ್ಸಿಗಳಿಗೆ ಬಿಡುವಿಲ್ಲದ ಬಾಡಿಗೆ ಸಿಗುತ್ತಿತ್ತು. ಹುಳಿಯಾರಿನ ಟ್ಯಾಕ್ಸಿಗಳೆಲ್ಲವೂ ಬುಕ್ ಆಗಿ ಬೇರೆ ಸ್ಥಳಗಳಿಂದ ವಾಹನಗಳನ್ನು ತರಿಸುತ್ತಿದ್ದ ನಿದರ್ಶನಗಳೂ ಇದ್ದವು.

ಆದರೆ ಮೊದಲ ಮತ್ತು ಎರಡನೇ ಅಲೆ ವೇಳೆ ಎರಡು ಬಾರಿ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿತ್ತು. ಆ ಬಳಿಕ ಕುಸಿದ ಪ್ರವಾಸೋದ್ಯಮ ಇನ್ನೂ ಚೇತರಿಕೆ ಕಂಡಿಲ್ಲ.

ಶೇ.90 ರಷ್ಟು ಲಸಿಕೆ ಗುರಿ ಮುಟ್ಟಿರುವುದರಿಂದ ಈ ವರ್ಷ ಕೋವಿಡ್ ಕಾಟ ಕಡಿಮೆಯಾಗಿ ಪ್ರವಾಸೋಧ್ಯಮ ಚೇತರಿಕೆ ಕಾಣುತ್ತದೆಂದು ಊಹಿಸಲಾಗಿತ್ತು. ಅಲ್ಲದೆ ಕೋವಿಡ್ ನಿಯಮ ಸಡಿಲಿಸಿರುವುದರಿಂದ ಈ ವರ್ಷ ಗತಕಾಲದ ವೈಭವ ಮರಳಬಹುದೆಂದು ಟ್ಯಾಕ್ಸಿ ಮಾಲೀಕರು, ಚಾಲಕರು ನಿರೀಕ್ಷಿಸಿದ್ದರು.

ಆದರೆ, ಸರ್ಕಾರ ರಾತ್ರಿ ಕಫ್ರ್ಯೂ, ವಾರಾಂತ್ಯ ಕಫ್ರ್ಯೂ ಜಾರಿ ಮಾಡಿರುವುದರಿಂದ ಮತ್ತೆ ಪ್ರವಾಸೋಧ್ಯಮಕ್ಕೆ ಗರ ಬಡಿದಿದೆ. ಅಲ್ಲದೆ ಶಬರಿಮಲೆ ಯಾತ್ರೆಗೂ ಸಹ ಭಕ್ತರು ಮುಂದಾಗದಿರುವುದು ಪ್ರವಾಸೋಧ್ಯಮವನ್ನೇ ನಂಬಿದವರಲ್ಲಿ ಆತಂಕ ಸೃಷ್ಠಿಸಿದೆ.

ಶಬರಿಮಲೆ ಯಾತ್ರೆ ನೆಪದಲ್ಲಿ ತಮಿಳುನಾಡು ತೀರ್ಥ ಕ್ಷೇತ್ರಗಳ ಯಾತ್ರೆಯ ಜೊತೆಗೆ ರಾಜ್ಯದ ಪ್ರಸಿದ್ಧ ದೇವಾಲಯಗಳಿಗೂ ಭಕ್ತರು ಪ್ರವಾಸ ಮಾಡುವುದರಿಂದ ಹತ್ತದಿನೈದು ದಿನಗಳ ವರೆವಿಗೂ ವಾಹನಗಳು ಬುಕ್ ಆಗುತ್ತಿದ್ದವು. ಅಲ್ಲದೆ ಪ್ರವಾಸಿಗರ ಆಯ್ಕೆಗೆ ತಕ್ಕಂತೆ ಟೂರಿಸ್ಟ್ ವಾಹನಗಳಾದ ಸಿಫ್ಟ್, ಟೆಂಪೋ ಟ್ರ್ಯಾವಲರ್, ಇನೋವಾ, ಎರಿಟಿಗ, ವ್ಯಾನ್‍ಗಳು ಇಲ್ಲಿ ಸಿಗುತ್ತಿದ್ದರಿಂದ ಸುತ್ತಮುತ್ತಲ 50 ಕಿ.ಮಿ.ವ್ಯಾಪ್ತಿಯ ಬಾಡಿಗೆ ಸಿಗುತ್ತಿತ್ತು.

ಪರಿಣಾಮ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಕ್ಸಿ, ಟಿಟಿ ವಾಹನಗಳು ಬುಕ್ಕಿಂಗ್ ಆಗುತ್ತಿದ್ದವು. ಅದರಲ್ಲೂ ಹೊಸ ವಾಹನ, ಒಳ್ಳೆ ಡ್ರೈವರ್‍ಗಳನ್ನು ತಿಂಗಳ ಮೊದಲೆ ಬುಕ್ಕಿಂಗ್ ಮಾಡುತ್ತಿದ್ದರು. ಆದರೆ, ಕಫ್ರ್ಯೂಯಿಂದಾಗಿ ಈ ಬಾರಿ ಮಾಸಿಕ ಪೂಜೆಗೆ 18 ಮಂದಿ, ಪಡಿ ಪೂಜೆಗೆ 12 ಮಂದಿ ಹಾಗೂ ಜ್ಯೋತಿ ಪೂಜೆಗೆ 7 ಮಂದಿ ಮಾತ್ರ ತೆರಳಿದ್ದಾರೆ. ಇದರಿಂದ ಶಬರಿಮಲೆ ಸೀಜನ್ ನೆಚ್ಚಿಕೊಂಡಿದ್ದ ವಾಹನ ಚಾಲಕರು ಮತ್ತು ಮಾಲೀಕರಿಗೆ ಭಾರಿ ಆರ್ಥಿಕ ನಷ್ಟವಾಗಿದೆ.

ನಿತ್ಯ ಕನಿಷ್ಠ 400 ಬಾಟಾ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಟೂರಿಸ್ಟ್ ಡೈವರ್‍ಗಳು ಕೋವಿಡ್‍ನಿಂದ ಕೆಲಸ ಇಲ್ಲದೆ ಬರಿಗೈಯಲ್ಲಿ ಮನೆಗೆ ತೆರಳುತ್ತಿದ್ದಾರೆ. ಖಾಸಗಿ ಫೈನಾನ್ಸ್‍ನಲ್ಲಿ ಸಾಲ ಮಾಡಿ ವಾಹನ ತಂದವರು ಇದರ ಇಎಂಐ ಕಟ್ಟಲು ಪರದಾಡುತ್ತಿದ್ದಾರೆ.

ಜೊತೆಗೆ ಟ್ಯಾಕ್ಸ್, ವಿಮೆ ನವೀಕರಣ, ವಾಹನ ದುರಸ್ತಿ ಸೇರಿದಂತೆ ಹಲವು ಬಗೆಯ ಖರ್ಚುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಮುಂದೇನು ಎಂಬ ಆತಂಕದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಪರಿಸ್ಥಿತಿ ಸುಧಾರಿಸದೆ ಹೋದರೆ ನೂರಾರು ಮಂದಿಯ ಬದುಕು ದುರ್ಬರವಾಗಲಿದೆ.

ಯಾತ್ರಿಗಳ ಸಂಖ್ಯೆ ಭಾರಿ ಇಳಿಮುಖ

ಕೇರಳ ಸರ್ಕಾರ ಶಬರಿಮಲೆಯಾತ್ರೆ ಕೈಗೊಳ್ಳುವವರಿಗೆ ಕೈಗೊಂಡಿರುವ ಕೋವಿಡ್ ನಿಯಮದಿಂದ ಈ ವರ್ಷ ಮಾಲಾಧಿರಿಗಳ ಸಂಖ್ಯೆ ಭಾರಿ ಇಳಿದಿದೆ. ಪ್ರತಿವರ್ಷ ನಾಲ್ಕುನೂರಕ್ಕೂ ಹೆಚ್ಚು ಮಂದಿ ತೆರಳುತಿದ್ದವರು ಆನ್‍ಲೈನ್ ಬುಕ್ಕಿಂಗ್, ಕೋವಿಡ್ ಪರೀಕ್ಷೆ, ಲಸಿಕೆ ದೃಢಿಕರಣದಿಂದ ಯಾತ್ರೆಗೆ ತೆರಳಲು ನಿರಾಸಕ್ತಿ ತಾಳಿರುವುದರಿಂದ ಐವತ್ತಕ್ಕೆ ಕುಸಿದಿದೆ.

ಆದರೆ ಹುಳಿಯಾರಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳಿಗೆ ಭಕ್ತರು ಮೊದಲಿನಂತೆ ಸೇರುತ್ತಿದ್ದಾರೆ. ಹಾಗಾಗಿ ಶಬರಿಮಲೆಯಲ್ಲಿ ನಡೆದಂತೆ ಹುಳಿಯಾರಿನಲ್ಲೂ ನಡೆಯುತ್ತಿರುವ ಗರುಡದರ್ಶನ ವಿಸ್ಮಯ ನೋಡಲು ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ.

-ಗೋಪಾಲಸ್ವಾಮಿ, ಗುರುಸ್ವಾಮಿಗಳು, ಹುಳಿಯಾರು.

ಲಾಕ್‍ಡೌನ್‍ನಿಂದ ಚಾಲಕರು ಹೈರಾಣು

         ಎರಡು ಲಾಕ್‍ಡೌನ್‍ನಿಂದ ಚಾಲಕರು ಹೈರಾಣಾಗಿದ್ದಾರೆ. ಈ ಬಾರಿಯೂ ಕಫ್ರ್ಯೂ ಜಾರಿ ಮಾಡಿರುವುದರಿಂದ ಬಾಡಿಗೆ ಕೇಳುವವರು ಇಲ್ಲದಾಗಿ ಆದಾಯಕ್ಕೆ ಹೊಡೆತ ಬಿದ್ದಿದೆ.

          ಕೋವಿಡ್ ಕಡಿಮೆ ಆಗಿದ್ದರಿಂದ ಶಬರಿಮಲೆ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರಡುತ್ತಾರೆ ಎಂಬ ನೀರಿಕ್ಷೆ ಇತ್ತು. ಆದರೆ ಸೋಂಕು ಹೆಚ್ಚುತ್ತಿರುವುದರಿಂದ ಈ ಬಾರಿಯೂ ಯಾತ್ರೆಗೆ ಯಾರೂ ವಾಹನಗಳನ್ನು ಬುಕ್ ಮಾಡಿಲ್ಲ. ಇದರಿಂದ ಜೀವನ ನಡೆಸುವುದೇ ದುಸ್ಥರವಾಗಿದೆ. ಚಾಲಕರ ಸಂಕಷ್ಟಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಮಲ್ಲಿಕಾರ್ಜುನ್, ಟ್ರಾಕ್ಸಿಚಾಲಕ, ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ