ಬೆಂಗಳೂರು:
ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಅಭಿಮಾನಿಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಿದೆ. ಈ ಕುರಿತು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ಹಾಜರಾಗಿದ್ದ ಎ.ಜಿ, ಸರಕಾರದಿಂದ ಇಲ್ಲಿಯವರೆಗೆ ಕೈಗೊಂಡ ಕ್ರಮದ ಬಗ್ಗೆ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದರು. ವಿಚಾರಣೆ ವೇಳೆ ಹೈಕೋರ್ಟ್ ಕೇಳಿದ್ದ ಪ್ರಶ್ನೆಗಳಿಗೆ ಸರಕಾರ ಉತ್ತರಿಸಿದೆ. ನ್ಯಾಯಾಂಗ ತನಿಖೆ ಹಾಗೂ ಆಯೋಗ ತನಿಖೆ ಮುಂದಿರುವ ಪ್ರಶ್ನೆಗಳೇನು? ಎರಡೂ ತನಿಖೆಗಳಲ್ಲಿ ಬೇರೆ ಬೇರೆ ಅಭಿಪ್ರಾಯ ನೀಡಿದರೆ ಏನು ಮಾಡುತ್ತೀರಿ? ಅಂತಹ ಸಂದರ್ಭ ಎದುರಾದರೆ ಸರಕಾರ ಉತ್ತರಿಸಬೇಕಾಗಲಿದೆ ಎಂದು ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್, ನ್ಯಾ.ಸಿಎಂ.ಜೋಶಿ ಅವರ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ರಾಜ್ಯ ಸರಕಾರವಲ್ಲದೇ ಬೇರೆ ಯಾರನ್ನು ಪ್ರತಿವಾದಿ ಮಾಡಬೇಕು ಎಂದು ಎಜಿ ಅವರನ್ನು ಹೈಕೋರ್ಟ್ ಪ್ರಶ್ನಿಸಿತು. ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ಈ ಬಗ್ಗೆ ತೀರ್ಮಾನಿಸಬಹುದು ಎಂದು ಎಜಿ ಉತ್ತರ ನೀಡಿದರು. ನ್ಯಾಯಾಂಗ ಹಾಗೂ ಆಯೋಗ ತನಿಖೆಗೆ ನಮ್ಮ ವಿಚಾರಣೆಯ ಪ್ರಕ್ರಿಯೆಗೂ ಬದ್ಧವಾಗಿರಬೇಕಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು.
ಮೇ 4ರ ಕಾರ್ಯಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭದ್ರತೆಯಲ್ಲಿರಿಸಲಾಗಿದೆಯೇ? ದಾಖಲೆಗಳಲ್ಲಿ ತಿದ್ದುಪಡಿ ಮಾಡುವುದನ್ನು ತಪ್ಪಿಸಬೇಕು. ಎಲ್ಲ ದಾಖಲೆಗಳನ್ನೂ ಮುಖ್ಯ ಕಾರ್ಯದರ್ಶಿ ಕಸ್ಟಡಿಯಲ್ಲಿರಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಜಿ ಶಶಿಕಿರಣ್ ಶೆಟ್ಟಿ, ಪಾರದರ್ಶಕವಾಗಿ ಹೈಕೋರ್ಟ್ ಸೂಚನೆಗಳನ್ನು ಪಾಲಿಸಲಾಗುವುದು ಎಂದರು. ಎಸ್‌ಒಪಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಜಿ ಶಶಿಕಿರಣ್ ಶೆಟ್ಟಿ ಹೇಳಿಕೆ ನೀಡಿದರು. ಪರಿಹಾರ ಹೆಚ್ಚಿಸುವಂತೆ ಮೃತಪಟ್ಟವರ ಪರ ವಕೀಲರಿಂದ ಅರ್ಜಿ ಸಹ ವಿಚಾರಣೆ ನಡೆಯಿತು. ಈ ವೇಳೆ ಎಜಿ ಶಶಿಕರಣ್ ಶೆಟ್ಟಿ ಪರಿಹಾರವನ್ನು 25 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಅಧಿಕಾರಿಗಳ ಅಮಾನತು ಪ್ರಶ್ನಿಸಿ ನಂದೀಶ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಹ ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ತನಿಖೆ ನಡೆಸದೇ ಅಮಾನತು ಸರಿಯಲ್ಲವೆಂದು ವಾದ ಮಂಡಿಸಿದರು. ವಾದ ಆಲಿಸಿದ ಪೀಠ, ನೊಂದ ಅಧಿಕಾರಿಗಳು ಈ ಬಗ್ಗೆ ಕಾನೂನು ಹೋರಾಟ ನಡೆಸಬಹುದು. ಅರ್ಜಿದಾರರ ಹಿತಾಸಕ್ತಿ ಏನೆಂದು ಹೈಕೋರ್ಟ್ ಪ್ರಶ್ನೆ ಮಾಡಿತು. ಬಳಿಕ ವಿಚಾರಣೆ ಜೂನ್ 17ಕ್ಕೆ ನಿಗದಿಪಡಿಸಿದೆ.