ಚಿಕ್ಕಬಳ್ಳಾಪುರ:

ಬಯಲುಸೀಮೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವ.. ದಿಢೀರ್ ಬೆಳವಣಿಗೆಯಿಂದ ಕಂಗಾಲಾಗಿ ಮನೆಯಿಂದ ಓಡೋಡಿ ಹೊರಗೆ ಬಂದ ಜನ, ಆತಂಕದಲ್ಲಿ ಗ್ರಾಮದ ಜನರು.
ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಸಚಿವ ಡಾ.ಕೆ.ಸುಧಾಕರ್ ಅವರ ತವರು ಪೆರೇಸಂದ್ರ, ಸೇರಿದಂತೆ ಮಂಡಿಕಲ್, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಬೆಂಗಳೂರಿಗೆ ಸುಮಾರು 65-70 ಕಿ.ಮೀ. ದೂರದ ಗ್ರಾಮಗಳಲ್ಲಿ ಈ ಸದ್ದು ಕೇಳಿ ಬಂದಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸುದ್ದಿ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.9 ರಿಂದ 3 ರಷ್ಟು ತೀವ್ರತೆ ದಾಖಲಾಗಿದೆ.
ಎಲ್ಲೇಲ್ಲಿ ಕಂಪನ:
ಚಿಕ್ಕಬಳ್ಳಾಪುರ ತಾಲೂಕಿನ, ಹೊಸಹಳ್ಳಿ, ದೊಡ್ಡಹಳ್ಳಿ, ಬಂಡಹಳ್ಳಿ, ಭೋಗಪರ್ತಿ, ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿದೆ. ಈ ಬಾರಿ ಮಳೆ ಜಾಸ್ತಿಯಾಗಿದೆ. ಅಂತರ್ಜಲ ಉಕ್ಕುತ್ತಿದೆ. ಹಾಗಾಗಿ ವಿಫಲ ಕೊಳವೆ ಬಾವಿಗಳ ಮೂಲಕ ಅಂತರ್ಜಲ ಮರುಪೂರಣದಿಂದ ಏರ್ ಬ್ಲಾಸ್ಟ್ ಆಗಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್.ಲತಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಭೂ ಕಂಪನ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದು, ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಟಷ್ಟನೆ ನೀಡಿದೆ. ಆದರೆ ಪೆರೇಸಂದ್ರ ವ್ಯಾಪ್ತಿಯ ಬಾಲನಾಗಮ್ಮ ಬೆಟ್ಟದ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದೇ ಇದಕ್ಕೆಲ್ಲಾ ಕಾರಣ. ಬಾಲನಾಗಮ್ಮ ದೇವರ ಶಾಪದಿಂದ ಆಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಇತ್ತೀಚೆಗೆ ಚಿಂತಾಮಣಿ ಸೇರಿದಂತೆ ಹಲವೆಡೆ ಭಾರೀ ಶಬ್ಧವಾಗಿದ್ದ ಅನುಭವವಾಗಿತ್ತು. ಆದರೆ ಭೂಮಿ ಕಂಪಿಸಿದ ಅನುಭವ ಆಗಿರಲಿಲ್ಲ. ಆದರೆ ಪೆರೇಸಂದ್ರ, ಮಂಡಿಕಲ್, ಮುದ್ದೇನಹಳ್ಳಿ ವ್ಯಾಪ್ತಿಯಲ್ಲಿ ಶಬ್ಧ ಮತ್ತು ಭೂಮಿ ಕಂಪಿಸಿದ ಅನುಭವವಾಗಿದ್ದು, ಇದೆಲ್ಲಾ ಕಲ್ಲು ಗಣಿಗಾರಿಕೆಯ ಎಫೆಕ್ಟ್ ಎಂದು ಜನರು ಆರೋಪಿಸುತ್ತಿದ್ದಾರೆ.
ಧೈರ್ಯ ತುಂಬಿದ ಜಿಲ್ಲಾಧಿಕಾರಿ
ಚಿಕ್ಕಬಳ್ಳಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ಮುಂಜಾನೆ 2 ಭಾರಿ ಭೂಕಂಪನದ ಅನುಭವ ಆಗಿ ರಿಕ್ಟರ್ ಮಾಪನದಲ್ಲಿ 2.9 ಮತ್ತು 3.0 ತೀವ್ರತೆಯ ಭೂಕಂಪನ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ತಾಲೂಕಿನ ಬಂಡಹಳ್ಳಿ ಮತ್ತು ಶೆಟ್ಟೆಗೆರೆ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯ ಜನರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಭೂಕಂಪದಲ್ಲಿ ಪ್ರಾಣಹಾನಿ ಹಾಗೂ ಪ್ರಾಣ ನಷ್ಟವಾಗಿಲ್ಲ. ಆದರೆ ಇದನ್ನ ಸರಿಯಾಗಿ ಮಾಪನ ಮಾಡಿ ವರದಿ ನೀಡುವ ವ್ಯವಸ್ಥೆಯನ್ನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರವಾಗಲಿ ಅಥವಾ ಗೌರಿಬಿದನೂರಿನಲ್ಲಿ ಭೂಕಂಪನ ಮಾಪನ ಕೇಂದ್ರ ಹೊಂದಿರುವ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಈ ಬಗ್ಗೆ ಜನರಿಗೆ ಎಚ್ಚರಿಕೆ ಕೊಡದಿರುವುದು ದುರದೃಷ್ಟಕರ.
ಸರ್ಕಾರ ಭೂಕಂಪನದ ಅನುಭವ ಆಗಿರುವ ಹಳ್ಳೀಗಳನ್ನ ಹೊಂದಿಕೊಂಡಂತಿರುವ ಅಕ್ರಮ ಅವೈಜ್ಞಾನಿಕ ಗಣಿಗಾರಿಕೆ ನಿಷೇಧಿಸುವ ಪ್ರಯತ್ನ ಮಾಡಿ ಸುರಕ್ಷತಾ ವಲಯದ ಅಡಿಯಲ್ಲಿ ಘೋಷಣೆ ಮಾಡಬೇಕು.
-ಆರ್.ಆಂಜನೇಯರೆಡ್ಡಿ, ನೀರಾವರಿ ಹೋರಾಟಗಾರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








