ಲೋಕಸಭಾ ಚುನಾವಣೆ: ಮೇ 23ರಂದು ಮತ ಎಣಿಕೆಯ ಕುರಿತು ಅಭ್ಯರ್ಥಿ/ಏಜೆಂಟರ್‍ಗೆ ಡಿಸಿ ಮಾಹಿತಿ

ತುಮಕೂರು

     ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಇದೇ ಮೇ 23ರಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಸಂಬಂಧ ಅಭ್ಯರ್ಥಿ/ ಏಜೆಂಟರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಮಾಹಿತಿ ನೀಡಿದರು.

     ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಅಭ್ಯರ್ಥಿಗಳ ಹಾಗೂ ಚುನಾವಣಾ ಏಜೆಂಟರ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ ಎಂದರು.

    ಪ್ರತಿ ಮತ ಎಣಿಕೆ ಟೇಬಲ್‍ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಒಬ್ಬ ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗುವುದು. ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಪ್ರತಿ ಮತ ಎಣಿಕೆ ಟೇಬಲ್‍ಗೆ ಒಬ್ಬ ಏಜೆಂಟರನ್ನು ನೇಮಕ ಮಾಡಲು ಅವಕಾಶವಿದ್ದು, ಮತ ಎಣಿಕೆ ಏಜೆಂಟರ ನೇಮಕಾತಿಗಾಗಿ ಈಗಾಲೇ ತಮಗೆ ನೀಡಿರುವ ನಮೂನೆ 18ರಲ್ಲಿ ಏಜೆಂಟರ ಮಾಹಿತಿಯನ್ನು ದ್ವಿಪ್ರತಿಯಲ್ಲಿ ಎರಡು ಭಾವಚಿತ್ರದೊಂದಿಗೆ ಮೇ 18ರೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು.

     ಅಲ್ಲದೆ ಮತ ಎಣಿಕೆ ಏಜೆಂಟರು ಮೇ 23ರ ಬೆಳಿಗ್ಗೆ 7-30 ಗಂಟೆಗೆ ನಿಯೋಜಿತ ಎಣಿಕೆ ಕೊಠಡಿಯೊಳಗೆ ಬಿಡಲಾಗುವುದು ಎಂದು ಅವರು ತಿಳಿಸಿದರು. ಏಜೆಂಟರುಗಳು ಮತ ಎಣಿಕೆ ಕೇಂದ್ರದೊಳಗೆ ಬರುವಾಗ ಕಡ್ಡಾಯವಾಗಿ ಐ.ಡಿ.ಕಾರ್ಡ್‍ಗಳನ್ನು ತರತಕ್ಕದ್ದು, ತಪ್ಪಿದಲ್ಲಿ ಅಂತಹ ಏಜೆಂಟರುಗಳು ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸುವಂತಿಲ್ಲ. ಏಜೆಂಟರು ನಿಯೋಜಿತ ಮತ ಎಣಿಕೆ ಟೇಬಲ್ ಹೊರತುಪಡಿಸಿ ಬೇರೆ ಟೇಬಲ್‍ಗಾಗಲೀ, ಬೇರೆ ಕೊಠಡಿಗಾಗಲೀ ಹೋಗಲು ಅವಕಾಶವಿರುವುದಿಲ್ಲ ಹಾಗೂ ಯಾವುದೇ ಅಹಿತಕರ ಘಟನೆ/ ಶಾಂತಿಭಂಗ ಉಂಟಾಗಲು ಅವಕಾಶ ನೀಡಿದಲ್ಲಿ ಅಂತಹವರನ್ನು ಮತ ಎಣಿಕೆ ಕೇಂದ್ರದಿಂದ ಹೊರಗೆ ಕಳುಹಿಸಲಾಗುವುದು ಮತ್ತು ಕಾನೂನು ರೀತ್ಯಾ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

       ಮೊಬೈಲ್/ ಎಲೆಕ್ಟ್ರಾನಿಕ್ ಉಪಕರಣಗಳು, ಇಂಕ್‍ಪೆನ್, ಬೀಡಿ/ಸಿಗರೇಟು, ಬೆಂಕಿಪೊಟ್ಟಣ/ ಲೈಟರ್ ಇತ್ಯಾದಿ ವಸ್ತುಗಳನ್ನು ಮತ ಎಣಿಕೆ ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದ್ದು, ಅಂದು ಬೆಳಿಗ್ಗೆ 8 ಗಂಟೆಗೆ ಚುನಾವಣಾ ವೀಕ್ಷಕರ ಸಮಕ್ಷಮ ಇವಿಎಂ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು ಎಂದರು. ಇಟಿಪಿಬಿಎಸ್ ಮತ್ತು ಅಂಚೆ ಮತ ಪತ್ರಗಳನ್ನು ತುಮಕೂರು ವಿವಿಯ ವಿಜ್ಞಾನ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಪ್ರತ್ಯೇಕ ಕೊಠಡಿಯಲ್ಲಿ ಎಣಿಕೆ ಮಾಡಲಾಗುವುದು. ಇದರಿಂದಾಗಿ ಈ ಕೊಠಡಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ ಎಣಿಕೆಯು ಸ್ವಲ್ಪ ತಡವಾಗಿ ಆರಂಭವಾಗಲಿದೆ. ಅಲ್ಲದೆ ಅಭ್ಯರ್ಥಿ/ ಏಜೆಂಟರುಗಳಿಗೆ ಅಂಚೆ ಮತಪತ್ರಗಳ ಎಣಿಕೆಯ ವಿಧಾನದ ಬಗ್ಗೆ ಜಿಲ್ಲಾಧಿಕಾರಿಗಳು ವಿವರಿಸಿದರು.

       ಅಭ್ಯರ್ಥಿ ಅಥವಾ ಅವರ ಏಜೆಂಟರಿಗೆ ಪ್ರತ್ಯೇಕವಾದ ಕೊಠಡಿಯನ್ನು ಮೀಸಲಿರಿಸಲಾಗಿದೆ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಿಗೆ ತೆರಳಿ ಮತ ಎಣಿಕೆ ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ. ಅಭ್ಯರ್ಥಿ ಅಥವಾ ಅವರ ಏಜೆಂಟರ್ ಒಂದು ಮೊಬೈಲ್‍ನ್ನು ತರಲು ಅವಕಾಶ ವಿರುತ್ತದೆ. ಮತ ಎಣಿಕೆ ಕೊಠಡಿಯಲ್ಲಿ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ. ಆದರೆ ಅವರಿಗಾಗಿ ಮೀಸಲಿರಿಸಿರುವ ಕೊಠಡಿಯಲ್ಲಿ ಬಳಸಬಹುದು ಎಂದು ಅವರು ತಿಳಿಸಿದರು.

       ಚುನಾವಣಾ ಮತ ಎಣಿಕೆಯಲ್ಲಿ ತೊಡಗಿಸಿಕೊಂಡಿರುವ ಯಾವುದೇ ಅಧಿಕಾರಿ, ಸಿಬ್ಬಂದಿಗಳು, ಏಜೆಂಟರ್‍ಗಳಿಗೆ ಮೊಬೈಲ್ ತರಲು ಅವಕಾಶವಿರುವುದಿಲ್ಲ. ಚುನಾವಣಾ ಎಣಿಕೆ ವೀಕ್ಷಕರಾಗಿ ಮಾತ್ರ ಮೊಬೈಲ್ ಬಳಕೆ ಮಾಡಲು ಆಯೋಗ ಅವಕಾಶ ನೀಡಿದೆ ಎಂದ ಅವರು ಮಾಧ್ಯಮದವರಿಗೆ ಮೊಬೈಲ್ ತರಲು ಅವಕಾಶ ನೀಡಿದ್ದು, ಮೊಬೈಲ್‍ನ್ನು ಮತ ಎಣಿಕೆ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕೇಂದ್ರದಲ್ಲಿ ಬಳಸಲು ಮಾತ್ರ ಅವಕಾಶವಿದೆ ಎಂದು ಅವರು ವಿವರಿಸಿದರು.

       ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಮತದಾನ ಯಶಸ್ವಿಯಾಗಿ ನಡೆಯಲು ಸಹಕರಿಸಿದಂತೆಯೇ ಮತ ಎಣಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಅಭ್ಯರ್ಥಿಗಳು/ ಏಜೆಂಟರ್‍ನ್ನು ಕೋರಿದರು.
ಪ್ರತಿ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಬ್ಬರಂತೆ ಒಟ್ಟು ನಾಲ್ಕು ಮಂದಿ ಕೇಂದ್ರ ಚುನಾವಣಾ ಎಣಿಕೆ ವೀಕ್ಷಕರು ಆಗಮಿಸಲಿದ್ದು, ರ್ಯಾಂಡಮ್ ಆಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ವಿವಿ ಪ್ಯಾಟ್‍ಗಳಲ್ಲಿನ ಓಟರ್ ಸ್ಲಿಪ್‍ಗಳನ್ನು ಎಣಿಕೆ ಮಾಡಬೇಕಾಗಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

      ಅಲ್ಲದೆ ಮತಯಂತ್ರಗಳಲ್ಲಿ ಎಣಿಕೆ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಕಂಡು ಬಂದರೆ ಅವುಗಳನ್ನು ಸರಿಪಡಿಸಲು ಬಿಇಎಲ್ ಸಂಸ್ಥೆಯ ಇಂಜಿನಿಯರ್‍ಗಳು ಕೂಡ ಇರಲಿದ್ದಾರೆ ಎಂದು ಅವರು ಹೇಳಿದರು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರು ಮತ ಎಣಿಕೆಯನ್ನು ಸುಗಮವಾಗಿ ನಡೆಸಲು ವ್ಯಾಪಕ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾಧಿಕಾರಿ ಕಛೇರಿಯ ಕಛೇರಿ ಸಹಾಯಕ ಮೋಹನ್, ಅಭ್ಯರ್ಥಿಗಳು/ ಏಜೆಂಟರ್‍ಗಳು, ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap