ಅಮೆರಿಕದಿಂದ ಭಾರತೀಯರ ಗಡಿಪಾರು: ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ

ಬೆಂಗಳೂರು:

  ಭಾರತದ ಅಕ್ರಮ ವಲಸಿಗರನ್ನು ಅಮೆರಿಕಾ ಕೈದಿಗಳಂತೆ ನಡೆಸಿಕೊಂಡಿರುವುದನ್ನು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸಿಗರು ಮನುಷ್ಯರೇ. ಪ್ರಾಣಿಗಳಲ್ಲ. ಅವರನ್ನು ಅಪರಾಧಿಗಳಂತೆ ಕೈ-ಕಾಲಿಗೆ ಕೋಳ ಹಾಕಿ ಕರೆತಂದಿದ್ದು ತಪ್ಪು. ಅಮೆರಿಕದಂತಹ ಮುಂದುವರೆದ ದೇಶದಿಂದ ಇಂತಹ ನಡೆ ಖಂಡನೀಯ ಎಂದು ಹೇಳಿದರು.ಅಕ್ರಮವಾಗಿ ಅವರ ದೇಶದಲ್ಲಿ ನೆಲೆಸಿದ್ದರೆ, ಅದಕ್ಕೆ ಯಾವ ಶಿಕ್ಷೆ ನೀಡಬೇಕೋ ನೀಡಲಿ. ಅದನ್ನು ಬಿಟ್ಟು, ಈ ರೀತಿ ಖೈದಿಗಳಿಗೆ ಹಾಕಿದಂತೆ ಸರಪಳಿ ಹಾಕಿರುವುದನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಇದು ಮಾನವ ಕುಲಕ್ಕೆ ಅಗೌರವ ಎಂದು ಕಿಡಿಕಾರಿದರು.

  ಇದೇ ವೇಳೆ ಕೇಂದ್ರ ಸಚಿವ ಹೆಚ್’ಡಿ.ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ನಿಮಗೆ ಜವಾಬ್ದಾರಿ ಇಲ್ಲವೇ? ಸಚಿವರು ನಿಮ್ಮ ಜತೆ ಚರ್ಚೆ ಮಾಡಬೇಕೆ? ಈ ರಾಜ್ಯಕ್ಕೆ ಜವಾಬ್ದಾರಿ ನೀಡಬೇಕು ಎಂದು ನಿಮಗೆ ಜವಾಬ್ದಾರಿ ಇಲ್ಲವೇ? ನಾವು ಪ್ರಧಾನಿ ಹಾಗೂ ಹಣಕಾಸು ಸಚಿವೆ ಹಾಗೂ ನಮಗೆ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರಲ್ಲ. ಅವರಿಗೆ ರಾಜ್ಯದ ಬಗ್ಗೆ ಆಸಕ್ತಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ಅವರ ವೈಯಕ್ತಿಕ ಆಸಕ್ತಿ ಹೊರತಾಗಿ ರಾಜ್ಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ರಾಜ್ಯ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಲ್ಲಿ ನಾನು ಆಸಕ್ತಿ ನೋಡಿಲ್ಲ ಎಂದು ತಿರುಗೇಟು ನೀಡಿದರು.

  ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುತ್ತಾರೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕುರಿತು ಪ್ರತಿಕ್ರಿಯಿಸಿ, ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ ಎಂದರು. 

  ಬೆಂಗಳೂರಿಗೆ ನೀರು ಕೊಡಿಸುವುದೇ ನನ್ನ ಕೊನೆ ಆಸೆ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿ, ನಾನು ಸಚಿವನಾದ ಬಳಿಕ ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಆಮೂಲಕ ಬೆಂಗಳೂರಿನ ಇತಿಹಾಸದಲ್ಲಿ ಈ ಡಿ.ಕೆ. ಶಿವಕುಮಾರ್ ಹೊಸ ಅಧ್ಯಾಯ ಬರೆದಿದ್ದಾನೆ. ಬಿಜೆಪಿ ಹಾಗೂ ದಳದ ಸರ್ಕಾರಗಳು ಈ ತೀರ್ಮಾನ ಮಾಡಿರಲಿಲ್ಲ.

  ನಿಂತುಹೋಗಿದ್ದ 5ನೇ ಹಂತದ ಯೋಜನೆಗೆ ಮತ್ತೆ ಚಾಲನೆ ನೀಡಿ ತೊರೆಕಾಡನಹಳ್ಳಿಯಿಂದ ನೀರು ತರಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಎತ್ತಿನಹೊಳೆಯಿಂದ ನೀರನ್ನು ಆಚೆಗೆ ತಂದಿದ್ದೇನೆ. ಈ ವರ್ಷದ ಕೊನೆ ವೇಳೆಗೆ ತುಮಕೂರಿನವರೆಗೂ ಎತ್ತಿನಹೊಳೆ ನೀರನ್ನು ಹರಿಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಟೀಕೆ ಟಿಪ್ಪಣಿ ಮಾಡಿದರು. ಮೋದಿ ಅವರ ಕೈ ಹಿಡಿದು ಈ ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು, ಆದರೂ ಈವರೆಗೂ ಯಾಕೆ ಸಹಿ ಹಾಕಿಸಿಲ್ಲ? ಕೇವಲ ಪ್ರಚಾರಕ್ಕೆ ಮಾತನಾಡುವುದಲ್ಲ, ರಾಜಕೀಯ ಬದ್ಧತೆ ಇರಬೇಕು. ಅವರ ಅನುಭವ ಹಾಗೂ ಹಿರಿತನಕ್ಕೆ ನಾವು ಗೌರವಿಸುತ್ತೇವೆ. ಆ ಗೌರವವನ್ನು ಅವರು ಉಳಿಸಿಕೊಳ್ಳಬೇಕು ಎಂದು ಹೇಳಿದರು.

  ಗ್ಯಾರಂಟಿ ಯೋಜನೆ ಕುರಿತ ಟೀಕೆಗಳಿಗೆ ಉತ್ತರಿಸಿ, ಗ್ಯಾರಂಟಿ ಯೋಜನೆಗಳು ಆರ್ಥಿಕ ಹೊರೆ ಎಂದು ಹೇಳಿದ್ದು ಯಾರು? ಇದು ಜನರ ಬದುಕಿಗೆ ಸರ್ಕಾರ ಕೊಟ್ಟಿರುವ ಶಕ್ತಿ. ಜನರ ಆರ್ಥಿಕ ಹೊರೆ ತಪ್ಪಿಸಲು ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲಾ ವರ್ಗದವರಿಗೂ ಆರ್ಥಿಕ ಶಕ್ತಿ ತುಂಬಲು ಪ್ರತಿ ಕ್ಷೇತ್ರಕ್ಕೆ ರೂ. 250 ಕೋಟಿಯಷ್ಟು ಹಣ ನೀಡಲಾಗುತ್ತಿದೆ. ಈ ಯೋಜನೆಗಳಿಗಾಗಿ ರೂ.56 ಸಾವಿರ ಕೋಟಿ ಹಣ ನೀಡಲಾಗಿದ್ದು, ಈ ಯೋಜನೆ ಜನರಿಗಾಗಿ ಮಾಡಲಾಗಿದೆ.

   ಜೀವ ಇದ್ದರೆ ಜೀವನ. ನಮ್ಮ ಸರ್ಕಾರ ಹಸಿದವರು, ಬಡವರ ಬಗ್ಗೆ ಆಲೋಚಿಸಿ ಈ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2-3 ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು. ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಪಾಲಿಗೆ ಖಾಲಿ ಬುಟ್ಟಿ. ದೇವೇಗೌಡರು, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಮಂತ್ರಿಗಳು, ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚಕಾರ ಎತ್ತಲಿಲ್ಲ. ನಮ್ಮ ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಆದರೂ ಮಾತು ಮಾತ್ರ ದೊಡ್ಡದಾಗಿ ಆಡುತ್ತಾರೆ. ನಮ್ಮನ್ನು ಟೀಕಿಸಿದರೆ ಅವರಿಗೆ ಆನಂದ. ನಮ್ಮನ್ನು ಟೀಕಿಸಿಯಾದರೂ ಅವರು ಸಂತೋಷ ಪಡುತ್ತಾರಲ್ಲಾ ಅದೇ ನಮಗೆ ತೃಪ್ತಿ ಎಂದು ತಿಳಿಸಿದರು.

Recent Articles

spot_img

Related Stories

Share via
Copy link