ನವದೆಹಲಿ:
ಮಧುಮೇಹಿಯಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇನ್ಸುಲಿನ್ ಅಗತ್ಯತೆ ಕುರಿತು ಬಗ್ಗೆ ಏಮ್ಸ್‌ನ ತಜ್ಞರಿಂದ ಸಲಹೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ “ಸುಳ್ಳು” ಹೇಳುತ್ತಿದೆ ಎಂದು ಎಎಪಿ ಸಚಿವೆ ಅತಿಶಿ ಅವರು ಸೋಮವಾರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡಿ ನ್ಯಾಯಾಲಯದಲ್ಲಿ ಸುಳ್ಳು ಹೇಳಿದೆ. ಇನ್ಸುಲಿನ್ ಬಗ್ಗೆ ಏಮ್ಸ್‌ನ ತಜ್ಞರನ್ನು ಸಂಪರ್ಕಿಸಲಾಗಿದ್ದು, ಇನ್ಸುಲಿನ್ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ ಮತ್ತು ಕೇಜ್ರಿವಾಲ್‌ಗಾಗಿ ಡಯಟ್ ಚಾರ್ಟ್ ನ್ನೂ ಕೂಡ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಇದೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ಈ ಡಯಟ್ ಚಾರ್ಟ್ ಅನ್ನು ಎಂಡೋಕ್ರೈನಾಲಜಿಸ್ಟ್ ಅಥವಾ ಡಯಾಬಿಟಾಲಜಿಸ್ಟ್ ಸಿದ್ಧಪಡಿಸಿಲ್ಲ, ಆದರೆ ಡಯಟಿಶಿಯನ್ ಸಿದ್ಧಪಡಿಸಿದ್ದಾರೆ. ಡಯಟಿಶಿಯನ್ ಎಂಬಿಬಿಎಸ್ ವೈದ್ಯರಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆ ಡಯಟ್ ಚಾರ್ಟ್ ಆಧಾರದ ಮೇಲೆ ಕೇಜ್ರಿವಾಲ್‌ಗೆ ಇನ್ಸುಲಿನ್ ಅಗತ್ಯವಿಲ್ಲ ಎಂದು ಇಡಿ ನ್ಯಾಯಾಲಯದಲ್ಲಿ ಹೇಳಿದೆ ಎಂದು ತಿಳಿಸಿದ್ದಾರೆ.
ಕಾರಾಗೃಹದ ಅಧಿಕಾರಿಗಳು ಮಾತನಾಡಿ, ಶನಿವಾರ AIIMS ನ ತಜ್ಞರು ಹಾಗೂ ಕೇಜ್ರಿವಾಲ್ ಅವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಅನ್ನು ಏರ್ಪಡಿಸಿತ್ತು, ಈ ಸಮಯದಲ್ಲಿ “ಇನ್ಸುಲಿನ್ ಬಗ್ಗೆ ಕೇಜ್ರಿವಾಲ್ ಪ್ರಸ್ತಾಪಿಸಲಿಲ್ಲ ಅಥವಾ ವೈದ್ಯರು ಸೂಚಿಸಲಿಲ್ಲ ಎಂದು ಹೇಳಿದ್ದಾರೆ.
40 ನಿಮಿಷಗಳ ಸಮಾಲೋಚನೆಯ ನಂತರ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯಿಲ್ಲ ಎಂದು ಕೇಜ್ರಿವಾಲ್ ಅವರಿಗೆ ಭರವಸೆ ನೀಡಲಾಯಿತು. ಔಷಧಿಗಳನ್ನು ಮುಂದುವರಿಸಲು ಸಲಹೆ ನೀಡಲಾಯಿತು, ಇದನ್ನು ನಿಯಮಿತವಾಗಿ ಮೌಲ್ಯಮಾಪನ ಮತ್ತು ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿದಿನ 15 ನಿಮಿಷಗಳ ಕಾಲ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ಮತ್ತು ಜೈಲಿನಲ್ಲಿ ಇನ್ಸುಲಿನ್ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ಶುಕ್ರವಾರ ನ್ಯಾಯಲಯಕ್ಕೆ ಮನವಿ ಸಲ್ಲಿಸಿದ್ದರು.