ನವದೆಹಲಿ:
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಿಚಾರಣೆಗೆ ಕರೆದಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ ಸಮನ್ಸ್ ಕಳುಹಿಸಿದೆ. ಜೆಕೆಸಿಎಯಲ್ಲಿ ಆಪಾದಿತ ಹಣಕಾಸು ಅಕ್ರಮಗಳ ಬಗ್ಗೆ ಇಡಿ 2022ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.ಈ ಪ್ರಕರಣವು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ನ ನಿಧಿಯ ದುರ್ಬಳಕೆಗೆ ಸಂಬಂಧಿಸಿದೆ. ಈ ನಿಧಿಯನ್ನು ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು ಸೇರಿದಂತೆ ಅನೇಕ ಜನರು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಜೆಕೆಸಿಎ ಅಧಿಕಾರಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದ ಮೇಲೆ ಇಡಿ ಮನಿ ಲಾಂಡರಿಂಗ್ ತನಿಖೆ ಆರಂಭಿಸಿದೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಜೆಕೆಸಿಎ ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಫಾರೂಕ್ ಅಬ್ದುಲ್ಲಾ ಅವರು 2001ರಿಂದ 2012ರವರೆಗೆ ಜೆಕೆಸಿಎ ಅಧ್ಯಕ್ಷರಾಗಿದ್ದರು. ಅವರ ಮೇಲಿನ ಆರೋಪಗಳ ಕುರಿತು ಇಡಿ ಮತ್ತು ಸಿಬಿಐ ಎರಡೂ ತನಿಖೆ ನಡೆಸುತ್ತಿವೆ. ಈ ಹಿಂದೆ, ಜೆಕೆಸಿಎಯಲ್ಲಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2022ರಲ್ಲಿ ದೆಹಲಿಗೆ ಹಾಜರಾಗುವಂತೆ ಇಡಿ ಫಾರೂಕ್ ಅಬ್ದುಲ್ಲಾಗೆ ಸಮನ್ಸ್ ಜಾರಿ ಮಾಡಿತ್ತು.