ಗಾಂಧೀಜಿಯ-ಶಾಸ್ತ್ರೀಜಿಯ ಆದರ್ಶದ ಅನುಷ್ಠಾನವು ಇಂದಿನ ತುರ್ತಾಗಬೇಕಿದೆ..!

    ಈ ನೆಲ ಕಂಡ ಅಪ್ರತಿಮ ಚೇತನಗಳು ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ಜನ್ಮದಿನವಾದ ಇಂದು ಇಬ್ಬರೂ ನಾಯಕರು ಈ ಭಾರತಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಳು, ಆದರ್ಶಗಳು ಮತ್ತು ತತ್ವಗಳನ್ನು ಮೆಲುಕು ಹಾಕುತ್ತೇವೆ. ಗಾಂಧೀಜಿಯವರ ಅಹಿಂಸೆ, ಶಾಸ್ತ್ರೀಜಿಯವರ ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯಗಳು ಮೊಳಗುತ್ತವೆ.
     ಇದನ್ನೆಲ್ಲ ಸ್ಮರಿಸಿಕೊಳ್ಳುವ ಇಂದಿನ ರಾಜಕಾರಣಿಗಳು, ಯುವಜನತೆ ಎಷ್ಟರ ಮಟ್ಟಿಗೆ ಈ ಸಿದ್ಧಾಂತಗಳನ್ನು ಪಾಲಿಸುತ್ತಿದ್ದಾರೆ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಅವಲೋಕಿಸಿದರೆ ಭ್ರಮನಿರಸನವಾಗುತ್ತದೆ. ನಾಳೆಯಿಂದ ಯಥಾ ಪ್ರಕಾರ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರ ಹಾಗೂ ಜನತೆ ಇದನ್ನೊಂದು ಸಾಂಪ್ರದಾಯಿಕ ಆಚರಣೆಯ ಪರಿಪಾಠ ಮಾಡಿಕೊಂಡಿರುವುದು ವಿಪರ್ಯಾಸವೆ ಸರಿ.
      ಗಾಂಧೀಜಿ ತತ್ವ ಒಂದು ಅಧ್ಯಯನದ ವಿಷಯವಾಗಿ ಉಳಿಯಿತೆ ಹೊರತು, ಬಹುತೇಕರಲ್ಲಿ ಇಂದಿಗೂ ಆ ತತ್ವವೇನೆಂಬುದರ ಅರಿವೆ ಇಲ್ಲದ ಪರಿಸ್ಥಿತಿ ಇದೆ. ರಾಜಕೀಯ ನಾಯಕರು ಮತ್ತು ಪಕ್ಷಗಳು ಸಾಂಕೇತಿಕವಾಗಿ ಈ ದಿನಗಳನ್ನು ಆಚರಿಸುವಷ್ಟರ ಮಟ್ಟಿಗೆ ಅವರನ್ನು ಉಳಿಸಿಕೊಂಡಿದ್ದರೆ ಯುವಕರಂತೂ ಮಹಾನ್ ನಾಯಕರ ಆದರ್ಶಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಹಿಂಸೆಯ ಬದಲಾಗಿ ಹಿಂಸಾತ್ಮಕ ಚಟುವಟಿಕೆಗಳು ವಿಜೃಂಭಿಸದಂತೆ ಅಲ್ಲಲ್ಲಿ ಕಾಣಬರುತ್ತವೆ. ಅಷ್ಟೇ ಏಕೆ ಮಹಾತ್ಮಗಾಂಧೀಯನ್ನೆ ಹೀಯಾಳಿಸಿ ಮಾತನಾಡುವ ಮಟ್ಟಕ್ಕೆ ಕೆಲವರು ಇಳಿದು ಬಿಟ್ಟಿದ್ದಾರೆ. ತಮ್ಮ ಎದುರಾಳಿಯನ್ನು ಮಣಿಸಲು ಇದೊಂದು ಅಪ್ರಯೋಜಕ ತತ್ವ, ಹಳೆಯ ಕಾಲದ ಥಿಯರಿ ಎಂದೆ ಯುವಕರು ಭಾವಿಸಿದಂತಿದೆ. 
     ಕೆಲವರಂತೂ ಗಾಂಧಿಯಿಂದಲೆ ನಮ್ಮ ದೇಶ ಹಾಳಾಗಿದೆ ಎಂಬಂತೆ ಮಾತನಾಡುತ್ತಾರೆ. ಗಾಂಧಿ ಚಿತ್ರವಿರುವ ನೋಟುಗಳನ್ನೆ ಅವಮಾನಿಸಿ ಅವರ ಚಿತ್ರ ಇರುವುದರಿಂದಲೆ ಅಪಮೌಲ್ಯವಾಗುತ್ತಿದೆ ಎಂದು ಹೇಳಿರುವ ಉದಾಹರಣೆಗಳಿವೆ. ದೇಶದಲ್ಲಿ ಇಂತಹ ಪರಿಸ್ಥಿತಿ ಏಕೆ ಉಂಟಾಗುತ್ತಿದೆ ಎಂದು ಅವಲೋಕಿಸುವ ಜವಾಬ್ದಾರಿ, ಹೊಣೆಗಾರಿಕೆ ಗಾಂಧೀಜಿ ಅಧ್ಯಯನ ಕೇಂದ್ರದಲ್ಲಿ, ಪ್ರತಿಷ್ಠಾನದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಈ ಚಿಂತನೆಗಳು ಇತರೆ ನಾಗರಿಕ ವರ್ಗದಲ್ಲಿ ನೋಡಲು, ಕೇಳಲು ಸಿಗದೆ ಇರುವುದು ಆತಂಕವೆ ಸರಿ. 
     ಮಹಾತ್ಮ ಗಾಂಧೀಜಿಯವರ ಬಗ್ಗೆ ನಮ್ಮ ದೇಶದಲ್ಲಿ ಈ ರೀತಿಯ ಮನೋಭಾವ ಕಂಡು ಬರುತ್ತಿದ್ದರೆ ಮುಂದುವರೆದಿರುವ ರಾಷ್ಟ್ರಗಳಲ್ಲಿ ಕಂಡು ಬರುವ ಚಿತ್ರಣªೀ ಬೇರೆ. ಇಲ್ಲಿ ಗಾಂಧೀಜಿ ತತ್ವಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದರೆ, ಅಲ್ಲಿ ಇದೇ ತತ್ವಗಳನ್ನು ಆರಾಧಿಸಿ ಅನುಸರಿಸಲಾಗುತ್ತಿದೆ. ನಮ್ಮ ದೇಶ ಹೊರತುಪಡಿಸಿ ಅತಿ ಹೆಚ್ಚು ಗಾಂಧೀಜಿ ಪ್ರತಿಮೆಗಳನ್ನು ಸ್ಥಾಪಿಸಿರುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಅಮೆರಿಕಾ ಗಾಂಧೀಜಿ ತತ್ವದ ಬಗ್ಗೆ ಅಪಾರ ಗೌರವ ಹೊಂದಿದೆ. ಅಮೆರಿಕಾ ಸೇರಿದಂತೆ ಇತರೆ ರಾಷ್ಟ್ರಗಳು ಒಪ್ಪುವಂತಹ ಸಿದ್ಧಾಂತಗಳನ್ನು ನೀಡಿದ ಮಹಾನ್ ವಿಶ್ವನಾಯಕರಿಗೆ ನಮ್ಮ ದೇಶದಲ್ಲಿಯೂ ಅಭಿಮಾನ ಇರಬೇಕಲ್ಲವೆ? ಇಂತಹವರಿಗೆ ನೀಡುವ ಗೌರವ ಇದೇನಾ?
      ರಾಜಕೀಯ ನಾಯಕರು ಮತ್ತು ಯುವಜನತೆ ಗಾಂಧೀಜಿ ತತ್ವದಿಂದ ಆದ ಅನುಕೂಲತೆಗಳನ್ನು ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಈ ವೇಳೆಗಾಗಲೆ ಮುಂದಿನ ಪೀಳಿಗೆಗೆ ಆದರ್ಶಗಳನ್ನು ಕೊಂಡೊಯ್ಯುವ ಸಮರೋಪಾದಿಯ ಕೆಲಸ ಆಗಬೇಕಿತ್ತು. ಆದರೆ ತತ್ವಗಳಿಗೆ ತದ್ವಿರುದ್ಧವಾದ ಚಟುವಟಿಕೆಗಳೆ ಹೆಚ್ಚು ನಡೆಯುತ್ತಿವೆ.  ಅವುಗಳೇ ವಿಜೃಂಭಿಸುತ್ತಿರುವುದರಿಂದ ಈ ದೇಶದ ಭವಿಷ್ಯದ ಬಗ್ಗೆ ಆತಂಕವೂ ಎದುರಾಗುತ್ತದೆ.
     ಗಾಂಧೀಜಿ ತತ್ವಗಳಿಗೆ ವಿರುದ್ಧವಾದ ತತ್ವ ಸಿದ್ಧಾಂತಗಳು ಇರುವ ರಾಷ್ಟ್ರಗಳ ಇತಿಹಾಸವನ್ನು ಅವಲೋಕಿಸಿದಾಗ ಆ ದೇಶಗಳ ಪರಿಸ್ಥಿತಿ ಏನೆಂಬುದು ತಿಳಿಯುತ್ತದೆ. ಇದನ್ನು ಅವಲೋಕಿಸುವ ಮತ್ತು ತಿಳಿದುಕೊಳ್ಳುವ ಕಾರ್ಯ ಇಂದು ಅತಿ ಜರೂರಿದೆ.ಗಾಂಧೀಜಿ ಹೇಳಿದಂತೆ ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ಹಿತವಚನ ಇಂದಿನ ಪೀಳಿಗೆಗೆ ರುಚಿಸಿದಂತೆ ಕಾಣುತ್ತಿಲ್ಲ.
      ಕೆಟದ್ದನ್ನೇ ನೋಡುತ್ತೇವೆ, ಕೆಟ್ಟದ್ದನ್ನೇ ಕೇಳುತ್ತೇವೆ, ಅದನ್ನೇ ಮಾಡುತ್ತೇವೆ ಎಂಬ ಪ್ರವೃತ್ತಿಯತ್ತ ಯುವಜನತೆ ಹೆಜ್ಜೆ ಹಾಕುತ್ತಿದೆ. ಇದಕ್ಕೊಂದು ಉದಾಹರಣೆ ಎಂದರೆ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ಹತ್ತಾರು ಮಂದಿ ಒಬ್ಬ ವ್ಯಕ್ತಿಯನ್ನು ನಡುರಸ್ತೆಯಲ್ಲೇ ಹೊಡೆದು ಹಿಂಸಿಸುವ ದೃಶ್ಯ. ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಅದನ್ನು ಒಬ್ಬರಿಂದ ಒಬ್ಬರಿಗೆ ಹರಡುವ, ಆ ಮೂಲಕ ಅದನ್ನು ನೋಡಿಕೊಂಡು ಆನಂದಿಸುವ ಪೈಶಾಚಿಕ ಮನಸ್ಥಿತಿ.
 
      ಹೊಡೆದು ಹಿಂಸಿಸುವುದು ನಮ್ಮ ಧರ್ಮವೇ? ಕ್ಷುಲ್ಲಕ ಕಾರಣಕ್ಕೆ ಗುಂಪುಗೂಡಿ ಹಲ್ಲೆ ಮಾಡುವಂತಹ ಮನಸ್ಥಿತಿಗೆ ಬರಲು ಕಾರಣವಾದರೂ ಏನು? ಇದೊಂದು ಉದಾಹರಣೆಯಷ್ಟೆ.ಇದೆಲ್ಲವನ್ನೂ ನೋಡಿದರೆ ಗಾಂಧೀಜಿ ಕೊಟ್ಟಂತಹ ಕೊಡುಗೆಗಳನ್ನು ನಾವು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಿದ್ದೇವೆ ಅಥವಾ ಸ್ವೀಕರಿಸಲು ನಾವು ಯೋಗ್ಯರೆ? ಇಂದಿನ ಯುವಕರಲ್ಲಿ ಇಂತಹ ಮಹಾನ್ ನಾಯಕರೆ ಆದರ್ಶವಾಗಬೇಕಿತ್ತು. ದುರಂತವೆಂದರೆ ಆ ಸ್ಥಾನವನ್ನು ಯಾರ್ಯಾರೋ ತುಂಬಿಕೊಂಡಿದ್ದಾರೆ. ನಮ್ಮ ನಾಯಕರು ಹೇಗಿರಬೇಕು ಎನ್ನುವ ಆಯ್ಕೆಗಳೆ ಯುವ ಜನತೆಯಲ್ಲಿ ಇಲ್ಲವಾಗಿದೆ. ತದ್ವಿರುದ್ಧ ಗುಣಗಳನ್ನು ಹೊಂದಿರುವವರು ನಾಯಕರಾಗಿ ಬೆಳೆಯುತ್ತಿದ್ದು, ಇದು ನಮ್ಮ ಅಭಿರುಚಿ ಆಗಿರಬೇಕೆ? ನಮ್ಮ ಕುಟುಂಬ, ನಮ್ಮ ಪೀಳಿಗೆಗೆ ಯಾವ ಸಿದ್ಧಾಂತಗಳನ್ನು ಕೊಡುತ್ತಿದ್ದೇವೆ ಎಂಬ ಕಿಂಚಿತ್ ಜವಾಬ್ದಾರಿಯಾದರೂ ಇರಬೇಡವೆ? 
    ಯುವ ಜನತೆಯಲ್ಲಿ ಕಾನೂನಿನ ಸದುಪಯೋಗದ ಬಗ್ಗೆ ಇರಬೇಕಾದ ಜ್ಞಾನಕ್ಕಿಂತ ಅದರ ದುರ್ಬಳಕೆಯ ಜ್ಞಾನವೆ ಹೆಚ್ಚಾಗುತ್ತಿದೆ. ಕಾನೂನಿನ ಬಲ, ಸಂವಿಧಾನವನ್ನು ಅವರವರ ಸ್ವಾರ್ಥಕ್ಕೆ, ಸ್ವಹಿತಾಸಕ್ತಿಗೆ ಬಳಸಿಕೊಳ್ಳಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಅರಿಯದ ರಾಜಕೀಯ ನಾಯಕರು ತಮಗಿಷ್ಟ ಬಂದಂತೆ ಸಂವಿಧಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರೊಳಗಿರುವ ನ್ಯೂನತೆಗಳನ್ನೆ ಬಲವಾಗಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
     ಅದರಿಂದಲೆ ನಮ್ಮ ರಕ್ಷಣೆ ಎನ್ನುವಷ್ಟರ ಮಟ್ಟಿಗೆ ಈಗ ಸಿದ್ಧಾಂತಗಳು ಮೂಡತೊಡಗಿವೆ. ಕಾನೂನಿಗೆ ವಿರುದ್ಧವಾದರೂ ಸರಿ ತಮ್ಮ ಕೆಲಸ ಆದರೆ ಸಾಕು ಎಂಬ ಮನೋಭಾವ ನಾಗರಿಕರಲ್ಲಿಯೂ ಬಂದಿರುವ ಕಾರಣ ಗಾಂಧೀಜಿಯ ತತ್ವಗಳು, ಕಾನೂನಿನ ನಿಯಮಗಳಿಗೆ ವಿರುದ್ಧ ನಡೆ ಕಂಡುಬರುತ್ತಿದೆ. ಇಂತಹ ನಿರ್ಧಾರಗಳಿಂದಲೆ ತಮ್ಮ ಕೈಯ್ಯಾರೆ ಆಯ್ಕೆ ಮಾಡಿ ಕಳುಹಿಸಿದ ನಾಯಕರನ್ನು ಭ್ರಷ್ಟರನ್ನಾಗಿ ಮಾಡಲಾಗುತ್ತಿದೆ.
     ಇಲ್ಲಿ ನಿಜಾರ್ಥದಲ್ಲಿ ಭ್ರಷ್ಟರು ಯಾರು ಎಂದು ಅವಲೋಕನ ಮಾಡಿಕೊಂಡರೆ ಸಾಕು. ಅಂತಹ ಆತ್ಮಾವಲೋಕನ ಪ್ರತಿ ನಾಗರಿಕರಲ್ಲೂ ಮೂಡದೆ ಕೇವಲ ಮಹಾನ್ ನಾಯಕರ ದಿನಾಚರಣೆಗಳನ್ನು ಆಚರಿಸಿದರೆ ಅದರಿಂದ ಯಾವ ಪ್ರಯೋಜನವೂ ಆಗದು. ನೆಪ ಮಾತ್ರದ, ಕಾಟಾಚಾರದ ಆಚರಣೆಗಳಾಗಿ ಮುಗಿದು ಹೋಗುತ್ತವೆ. ಮಹಾತ್ಮಾಜಿ ಮತ್ತು ಶಾಸ್ತ್ರೀಜಿ ಇಬ್ಬರು ಮಹಾನ್ ನಾಯಕರ ಆದರ್ಶಗಳನ್ನು ಅರ್ಥ ಮಾಡಿಕೊಂಡು ನಡೆದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತೆ. 
-ಟಿ.ಎನ್.ಮಧುಕರ್, ಉಪ ಸಂಪಾದಕ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link