ಸ್ಪರ್ಧಾ ಜಗತ್ತಿಗೆ ಅಣಿಗೊಳಿಸುತ್ತಿರುವ ಎಜುಕ್ಯಾನ್- 2021

ತುಮಕೂರು:

     
ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀಕನಕಶ್ರೀ ಸೇವಾ ಸಮಿತಿ ವತಿಯಿಂದ 5 ದಿನಗಳ ಕಾಲ ಆಯೋಜಿಸಿರುವ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರ ಎಜುಕ್ಯಾನ್-2021 (KAN-2021) ಗೆ ಚಾಲನೆ ನೀಡಿದ ಸಂದರ್ಭ

ಐಎಎಸ್, ಕೆಎಎಸ್ ತರಬೇತಿ ಕಾರ್ಯಗಾರದಲ್ಲಿ ಮುಂದಿನ ಗುರಿ ತೆರೆದಿಟ್ಟ ಯುವ ಜನರು

ಹಿಂದುಳಿದ ವರ್ಗಗಳ ಯುವಜನರು ಐಎಎಸ್, ಕೆಎಎಸ್, ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚೆಚ್ಚು ಯಶಸ್ಸು ಗಳಿಸಲಿ ಎಂಬ ಆಶಯದೊಂದಿಗೆ, ನಗರದ ಶ್ರೀಕನಕಶ್ರೀ ಸೇವಾ ಸಮಿತಿಯು ನ.22 ರಿಂದ ನ.26 ರವರೆಗೆ 5 ದಿನಗಳ ಕಾಲ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿರುವ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರ ಎಜುಕ್ಯಾನ್-2021 (KAN -2021) ಬುಧವಾರಕ್ಕೆ ಯಶಸ್ವಿ 3 ದಿನಗಳನ್ನು ಪೂರೈಸಿ 4 ನೇ ದಿನದತ್ತ ದಾಪುಗಾಲು ಹಾಕುತ್ತಿದೆ.

ಇದುವರೆಗೆ ನಡೆದಿರುವ 3 ದಿನಗಳ ಈ ಕಾರ್ಯಗಾರದಲ್ಲಿ ರಾಷ್ಟ್ರ ಹಾಗೂ ರಾಜ್ಯದ ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಾದ ಇನ್ಸೈಟ್ಸ್, ಜೈಸ್, ಸ್ಪರ್ಧಾಚೇತನ ಸಂಸ್ಥೆಗಳ ಬೋಧಕರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಗಳ ಪ್ರಾಧ್ಯಾಪಕರುಗಳು, ಯೋಗ ತರಬೇತುದಾರರು, ಮನಶಾಸ್ತ್ರಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸ್ಪರ್ಧಾರ್ಥಿಗಳಿಗೆ ಪರೀಕ್ಷೆಯ ಓದುವ ವಿಧಾನ, ಸ್ಮಾರ್ಟ್‍ವರ್ಕ್, ಹಾರ್ಡ್‍ವರ್ಕ್, ಯಶಸ್ಸಿನ ಮೆಟ್ಟಿಲುಗಳೇನು? ಎಲ್ಲಿ ತಪ್ಪಾಗುತ್ತದೆ? ಅದನ್ನು ಮೀರುವುದು ಹೇಗೆ? ಒತ್ತಡ ನಿರ್ವಹಣೆ ಹೇಗೆ? ಪರೀಕ್ಷೆಗೆ ಮಾನಸಿಕ ತಯಾರಿಯ ಅಗತ್ಯತೆ ಹೇಗೆ? ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳ ಮಹತ್ವವೇನು ಎಂಬ ಮೊದಲಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಸ್ಪರ್ಧಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿರುವ ರಾಜ್ಯದ 25 ಜಿಲ್ಲೆಗಳ ಸ್ಪರ್ಧಾರ್ಥಿಗಳು ಎಜುಕ್ಯಾನ್-2021 ಶಿಬಿರ ಕುರಿತ ತಮ್ಮ ಅಭಿಪ್ರಾಯಗಳನ್ನು ಪ್ರಜಾಪ್ರಗತಿಯೊಂದಿಗೆ ಹಂಚಿಕೊಂಡಿದ್ದು, ಅವುಗಳ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.

 

ನಾನು ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಮುಂದೆ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಲು ಸಿದ್ಧತೆ ಆರಂಭಿಸಿದ್ದೆ. ಈ ಪರೀಕ್ಷೆ ಕುರಿತು ನನಗೆ ಯಾವುದೆ ಜ್ಞಾನವಿರಲಿಲ್ಲ. ಕಾರ್ಯಗಾರದಲ್ಲಿ ನನಗೆ ಪರೀಕ್ಷೆ ಕುರಿತು ಸಮಗ್ರ ಮಾಹಿತಿ ದೊರೆಯುತ್ತಿದ್ದು ನನ್ನ ಆತ್ಮ ವಿಶ್ವಾಸ ವೃದ್ಧಿಸಿದೆ.

-ಭೀಮವ್ವ ಸಿದ್ದಪ್ಪ ಮುದೆನಗುಡಿ, ಗದಗ ಜಿಲ್ಲೆ

 

ಪದವಿ ಓದಿಗೆ ಸೇರಿದ ನಂತರದಲ್ಲಿ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ, ಆದರೇ ಪರೀಕ್ಷೆ ಕುರಿತು ಕೆಲವು ಗೊಂದಲಗಳಿದ್ದವು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಬಳಿ ಸಂವಾದ ಮಾಡಿದಾಗ ನನಗಿದ್ದ ಗೊಂದಲಗಳು ಬಗೆ ಹರಿದಿವೆ. ಈ ಕುರಿತು ನನಗೆ ಸಂತಸವಾಗುತ್ತಿದೆ.

ಸಿ.ಕೆ.ಕಾವ್ಯ, ತುಮಕೂರು ಜಿಲ್ಲೆ

 

ನಾನು ಪದವಿ ಓದು ಮುಗಿಸಿದ್ದು, ಸ್ಪರ್ಧಾತ್ಮಕ ಪರೀಕೆಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಈ ಕಾರ್ಯಗಾರಕ್ಕೆ ಬಂದಿದ್ದೇನೆ. ಶಿಬಿರಕ್ಕೆ ಬರುವ ಮೊದಲು 5 ದಿನಗಳಲ್ಲಿ ಎಷ್ಟು ಹೇಳಿ ಕೊಡಲು ಸಾಧ್ಯ ಎಂಬ ಅನುಮಾನವಿತ್ತು. ಆದರೆ ತುಂಬಾ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ಆಯೋಜಕರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ

ಲಿಖಿತ, ಶಿವಮೊಗ್ಗ ಜಿಲ್ಲೆ

ನಮ್ಮದು ಬಡ ಕೃಷಿ ಕುಟುಂಬ, ಕೃಷಿಯಲ್ಲಿ ಬಿಟೆಕ್ ಪದವಿ ಓದಿದ್ದೇನೆ. ಕನಕಶ್ರೀ ಸಮಿತಿಯವರು ಬಡ ಸ್ಪರ್ಧಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ತರಬೇತಿ ನೀಡುತ್ತಿರುವುದು ಅಭಿನಂದನಾರ್ಹ ವಿಚಾರ. ಮುಂದೆ ಐಎಎಸ್ ಅಧಿಕಾರಿಯಾಗಿ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಗುರಿ.

ಬೀರಪ್ಪ ಎಸ್ ವಾಲೆಕರ್, ವಿಜಯಪುರ ಜಿಲ್ಲೆ

 

ಇದು 5 ದಿನಗಳ ಕಾಲಮಿತಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಗಾರವಾಗಿದ್ದರೂ, ಪರೀಕ್ಷೆಗಳಿಗೆ ಹೇಗೆ ಓದಬೇಕು, ಯಾವೆಲ್ಲಾ ತಪ್ಪುಗಳನ್ನು ಸ್ಪರ್ಧಾರ್ಥಿಗಳು ಮಾಡಬಾರದು, ಯಾವ ಪುಸ್ತಕ ಓದಬೇಕು, ಹೇಗೆ ಓದಬೇಕು ಮೊದಲಾದ ವಿಚಾರಗಳನ್ನು ಕಲಿತಿದ್ದೇನೆ. ನನ್ನ ಗುರಿ ಐಎಎಸ್ ಅಧಿಕಾರಿಯಾಗಿ ನಾಡಿನ ಜನರ ಸೇವೆ ಮಾಡುವುದು.

ಬಿ.ಜಿ.ಲಿಖಿತ್‍ಕುಮಾರ್, ಬೆಂಗಳೂರು ನಗರ ಜಿಲ್ಲೆ

 

ಬಿಎ, ಎಲ್‍ಎಲ್‍ಬಿ ಓದುತ್ತಿದ್ದೇನೆ. ಕಾರ್ಯಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಎಲ್ಲಾ ಹಂತ, ಆಯಾಮಗಳ ಬಗ್ಗೆ ಸಮಗ್ರವಾಗಿ ಹೇಳಿಕೊಡುತ್ತಿದ್ದಾರೆ. ಓದಿನ ವೇಳಾಪಟ್ಟಿ ತಯಾರಿಸುವ ಕುರಿತು ಹೇಳಿಕೊಟ್ಟ ಅಂಶಗಳು ನಿಜಕ್ಕೂ ಉತ್ತಮವಾಗಿವೆ. ಐಎಎಸ್ ಪರೀಕ್ಷೆಗೆ ಗಂಭೀರವಾಗಿ ಸಿದ್ಧತೆ ನಡೆಸುತ್ತೇನೆ.

ಸಿ.ಎಲ್.ಸಂತೋಷ್ ಕುಮಾರ್, ತುಮಕೂರು ಜಿಲ್ಲೆ

 

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ಈ ಕಾರ್ಯಗಾರಕ್ಕೆ ಬಂದಿದ್ದೇನೆ. ಐಎಎಸ್ ಕೋಚಿಂಗ್‍ಗೆಂದು ಬೆಂಗಳೂರಿಗೆ ಹೋಗಬೇಕೆಂದು ಕೊಂಡಿದ್ದ ನನಗೆ ಈ ಕಾರ್ಯಗಾರ ಬುನಾದಿ ಹಾಕಿದೆ. ಇಲ್ಲಿನ ಊಟ, ವಸತಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ. ಶ್ರೀಕನಕಶ್ರೀ ಸೇವಾ ಸಮಿತಿಯವರಿಗೆ ಆಭಾರಿಯಾಗಿದ್ದೇನೆ.

ಹೆಚ್.ಎಸ್.ದೀಪಕ್‍ಗೌಡ, ದಾವಣಗೆರೆ ಜಿಲ್ಲೆ

 

ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಬಳ್ಳಾರಿ ಜಿಲ್ಲೆಯವನಾದ ನನಗೆ ಈ ಕಾರ್ಯಗಾರ ಒಂದು ವರದಾನದಂತಿದೆ. ಹಿಂದುಳಿದಿರುವ ನಮ್ಮ ಜಿಲ್ಲೆಗಳಲ್ಲಿ ಈ ರೀತಿಯ ಶಿಬಿರಗಳು ಆಯೋಜನೆ ಆಗಲ್ಲ. ಶ್ರೀಕನಕಶ್ರೀ ಸೇವಾ ಸಮಿತಿಯವರು ಬಡ ಸ್ವರ್ಧಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಪೂರ್ವ ತರಬೇತಿ ನೀಡುತ್ತಿರುವುದಕ್ಕೆ ಅವರಿಗೆ ಅಭಿನಂದಿಸುತ್ತೇನೆ.

ದೇವಪ್ಪ ಪರಮೇಶ್ವರ, ಬಳ್ಳಾರಿ ಜಿಲ್ಲೆ

 

ಸ್ನಾತಕ ಪದವಿ ಮುಗಿಸಿದ್ದು, ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಒಂದು ಮನೆಗೆ ಬುನಾದಿ ಹೇಗೆ ಮುಖ್ಯವೊ ಆ ರೀತಿಯಲ್ಲಿ ಕನಕಶ್ರೀ ಸೇವಾ ಸಮಿತಿಯವರು ನಮ್ಮಗಳ ಉನ್ನತಿಗೆ ಪರಿಶ್ರಮ ಹಾಕುತ್ತಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಹೇಳ ಬಯಸುತ್ತೇನೆ.

ಚನ್ನಮಲ್ಲ, ಪಾವಗಡ, ತುಮಕೂರು ಜಿಲ್ಲೆ

      ಸ್ಪರ್ಧಾರ್ಥಿಗಳು ಆಯೋಜಕರ ಆಶಯ ಈಡೇರಿಸಬೇಕು : ನಿಜವಾಗಿಯೂ ಇಂತದ್ದೊಂದು ಕಾರ್ಯಗಾರ ತುಮಕೂರು ನಗರದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಇಲ್ಲಿ ಆಯೋಜಕರು ಮಾಡಿಕೊಂಡಿರುವ ಗುಣಮಟ್ಟದ ತಯಾರಿಯು ಅವರ ಸಮರ್ಪಣಾ ಮನೋಭಾವ, ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ಇದು 5 ದಿನಗಳ ಕಾರ್ಯಗಾರವಾದರೂ ಇಂತಹ ಚಿಕ್ಕ ಹೆಜ್ಜೆಗಳೆ ಮುಂದಿನ ದೊಡ್ಡ ಸಾಧನೆಗೆ ಸ್ಫೂರ್ಥಿಯಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಬೆಂಗಳೂರುಮ ಧಾರವಾಡ, ಬಿಜಾಪುರಗಳಿಗೆ ಹೋಗಿ ತರಬೇತಿ ಪಡೆಯುವ ಈ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತದ್ದೊಂದು ಕಾರ್ಯಗಾರ ನಡೆಯುವ ಅವಶ್ಯಕತೆ ಇತ್ತು. ಅದೀಗ ನಡೆದಿದೆ. ಇಲ್ಲಿ ವಿವಿಧ 25 ಜಿಲ್ಲೆಗಳ ಸುಮಾರು 150 ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಒದಗಿಸಿರುವುದು ನಿಜಕ್ಕೂ ಶ್ಲಾಘನಾರ್ಹವಾದ ಕೆಲಸ.

ಕಾರ್ಯಗಾರದಲ್ಲಿ ಒಳ್ಳೆ ಬುದ್ದಿಮತ್ತೆಯ ಯುವಜನರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಆಯೋಜಕರ ಆಶಯವನ್ನು ಈಡೇರಿಸುವಲ್ಲಿ ಎರಡು ಮಾತಿಲ್ಲ ಎಂಬುದು ನನ್ನ ಅಭಿಮತ. ಈ ಕಾರ್ಯಗಾರಕ್ಕೆ ನನ್ನನ್ನು ಕರೆಸಿ ಸ್ಪರ್ಧಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದಷ್ಟು ಮಾಹಿತಿ ತಿಳಿಸಿಕೊಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಶ್ರೀಕನಕಶ್ರೀ ಸೇವಾ ಸಮಿತಿಯವಗೆ ಅಭಿನಂದಿಸುತ್ತೇನೆ.

-ಮಂಜುನಾಥ್, ಮೆಂಟರ್, ಸ್ಪರ್ಧಾಚೇತನ ಕೋಚಿಂಗ್ ಸೆಂಟರ್, ತುಮಕೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

Recent Articles

spot_img

Related Stories

Share via
Copy link
Powered by Social Snap