ಬೆಂಗಳೂರು:
ಗುರುವಾರ ಹುಬ್ಬಳ್ಳಿಯ ಬಿಬಿವಿ ಕಾಲೇಜು ಆವರಣದಲ್ಲಿ ಅಮಾನುಷವಾಗಿ ಹತ್ಯೆಗೀಡಾದ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಾಗೂ ಪಾತಕಿ ಫಯಾಜ್ ಪ್ರೀತಿ ಮಾಡ್ತಿದ್ರು ಎಂಬಂತಹ ಚರ್ಚೆಗಳು ಇದೀಗ ನಡೆಯುತ್ತಿವೆ.
ನೇಹಾ- ಫಯಾಜ್ ನಡುವಿನ ಸ್ನೇಹ, ಸಲುಗೆ ಹಾಗೂ ಪ್ರೀತಿಯ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷರಾದ ರೇಖಾ ಶ್ರೀನಿವಾಸ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ತಪಿತಸ್ಥ ನೀಚ ಮನಸ್ಥಿತಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಪ್ರೀತಿ ಮಾಡುವುದು ಮತ್ತು ನಿರಾಕರಿಸುವುದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಅದೇನೆ ಇರಲಿ ಈಕೆಯ ಹತ್ಯೆ ಅಮಾನವೀಯವಾದದ್ದು. ತಪ್ಪಿತಸ್ಥ ನೀಚ ಮನಸ್ಥಿತಿಗೆ ಕಠಿಣ ಶಿಕ್ಷೆಯಾಗಲೇಬೇಕು
😞😱😓 pic.twitter.com/yvjA6UmhmG— Rekha Srinivas (@RekhaSri590) April 20, 2024
ಮತ್ತೊಂದೆಡೆ ಮಾತನಾಡಿರುವ ಪಾತಕಿ ತಾಯಿ ಮುಮ್ತಾಜ್, ನನ್ನ ಮಗ ಹಾಗೂ ನೇಹಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನೇಹಾಳೇ ಫಯಾಜ್‌ಗೆ ಮೊದಲು ಪ್ರಪೋಸ್ ಮಾಡಿದ್ದಳು. ನನಗೆ ಒಂದು ವರ್ಷದ ಹಿಂದೆಯೇ ಈ ವಿಷಯ ಗೊತ್ತಾಗಿತ್ತು. ಫಯಾಜ್ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆದಾಗ ನೇಹಾ ಪರಿಚಯ ಆಗಿ, ಅದು ಪ್ರೀತಿಗೆ ತಿರುಗಿತ್ತು. ಅದನ್ನು ನನಗೆ ಹೇಳಿದ್ದ. ಆಗ ನಾನು ಈ ಪ್ರೀತಿ, ಗೀತಿ ಬೇಡ ಎಂದು ಹೇಳಿದ್ದೆ. ಆದರೆ, ಈ ರೀತಿ ಆಯ್ತು ಎಂದು ತಿಳಿಸಿದರು.
ನೇಹಾಳ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ನನಗೂ ಆಗಿದೆ. ಯಾರು ಮಾಡಿದ್ರೂ ತಪ್ಪೇ ತಪ್ಪು, ನನ್ನ ಮಗ ಮಾಡಿರೋದು ತಪ್ಪೇ. ಈ ನೆಲದ ಕಾನೂನು ಏನು ಶಿಕ್ಷೆ ಕೊಡುತ್ತೋ ಅದನ್ನು ಕೊಡಬೇಕು. ಅವನು ಮಾಡಿರೋ ಕೆಲಸದಿಂದ ನಾನು ಎಲ್ಲರ ಮುಂದೆ ತಲೆ ತಗ್ಗಿಸುವ ರೀತಿ ಆಗಿದೆ. ನಾನು ಇಡೀ ರಾಜ್ಯದ ಜನತೆಗೆ ಕ್ಷಮೆ ಕೇಳ್ತೀನಿ ಎಂದು ಅವರು ಹೇಳಿದರು.
ಆದರೆ, ಮದುವೆ ಮಾಡಿಕೊಡುವಂತೆ ನೇಹಾಳ ಪೋಷಕರಿಗೆ ಫಯಾಜ್ ಪೀಡಿಸುತ್ತಿದ್ದ ಎನ್ನುವುದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ಖುದ್ದು ಪೋಷಕರು ನೀಡಿರುವ ದೂರಿನಲ್ಲಿ ಈ ವಿಷಯ ಬಹಿರಂಗವಾಗಿದ್ದು, ನೇಹಾಳನ್ನು ಪ್ರೀತಿ ಮಾಡ್ತಿದ್ದೇನೆ. ಮದುವೆ ಮಾಡಿ ಕೊಡುವಂತೆ ಬೆನ್ನು ಬಿದ್ದಿದ್ದ ಎನ್ನಲಾಗಿದೆ. ಸುಮಾರು ನಾಲ್ಕೈದು ತಿಂಗಳಿನಿಂದ ಮದುವೆಗಾಗಿ ಪೀಡಿಸುತ್ತಿದ್ದನಂತೆ. ಆದರೆ ನೇಹಾ ಪೋಷಕರು ನಮ್ಮ ಮಗಳು ನಿನ್ನನ್ನು ಇಷ್ಟಪಟ್ಟಿಲ್ಲ, ಹೆಚ್ಚಿನ ವ್ಯಾಸಂಗ ಮಾಡುವುದಿದೆ ಎಂದು ಫಯಾಜ್ ಕುಟುಂಬಕ್ಕೆ ಪೋಷಕರು ಹೇಳಿದ್ದರಂತೆ. ಈ ಕುರಿತಂತೆ ಫಯಾಜ್ ತಂದೆ-ತಾಯಿಗೂ ದೂರವಾಣಿ ಕರೆ ಮಾಡಿ ನೇಹಾ ಪೋಷಕರು ಹೇಳಿದ್ದರಂತೆ.
ನಾಲ್ಕೈದು ಬಾರಿ ನೇಹಾಗೆ ಬೆದರಿಕೆ ಹಾಕಿದ್ದನಂತೆ. ಮದುವೆಯಾಗದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕ್ತಿದ್ದನಂತೆ, ಈ ಬಗ್ಗೆ ಖುದ್ದು ನೇಹಾ ತನ್ನ ಪೋಷಕರ ಗಮನಕ್ಕೆ ತಂದಿದ್ದಳಂತೆ. ಇಷ್ಟಾದರೂ ಮೇಲೆ ಪೋಷಕರು ಪೊಲೀಸರ ಗಮನಕ್ಕೆ ತಂದಿದ್ದರೆ ಇಂದು ನೇಹಾ ಜೀವ ಉಳಿಯುತ್ತಿತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಕುರಿತ ಮಾಹಿತಿ ಎಫ್ಐಆರ್ನಲ್ಲಿ ನೇಹಾ ತಾಯಿ ಗೀತಾ ಅವರು ವಿವರವಾಗಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.