ದೇಶದ ಅಭಿವೃದ್ಧಿಗೆ ಶಿಕ್ಷಣವೆ ಪೂರಕ ಸಾಧನ

ಶಿರಾ :

     ಜೀವನದಲ್ಲಿ ಗುರಿ ಎಂಬುದು ಅತಿ ಮುಖ್ಯವಾಗಿದ್ದು ಗುರಿ ಮುಟ್ಟುವ ದಾರಿಯೂ ಕೂಡ ಬಹುಮುಖ್ಯವಾಗಿದೆ. ದೇಶದ ಅಭಿವೃದ್ಧಿಗೆ ಶಿಕ್ಷಣವೊಂದೇ ಪೂರಕ ಸಾಧನ ಎಂದು ರಾಮಕೃಷ್ಣ ಮಠದ ಪೀಠಾಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

     ಪ.ನಾ.ಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಪ್ರೇರಣಾ ನುಡಿ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಕ್ಕಳು ಏಕಾಗ್ರತೆಯನ್ನು ಬೆಳೆಸಿಕೊಂಡು ಸಾಧನೆಯತ್ತ ಹೆಜ್ಜೆ ಇಡಬೇಕು. ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿನ ಉತ್ತಮ ಗುಣಗಳನ್ನು ಶಿಕ್ಷಕರು ಗೌರವಿಸುವಂತಿರಬೇಕು ಎಂದರು.

     ವ್ಯಕ್ತಿತ್ವ ಬೆಳೆಯಬೇಕಾದರೆ ಸ್ವಾರ್ಥ ಬಿಡಬೇಕು. ಹಾಗೆಯೇ ಅನ್ಯರ ಮೇಲೆ ದ್ವೇಷ ಅಸೂಯೆಗಳನ್ನು ಬಿಟ್ಟು, ತನಗೆ ತಾನೆ ಪ್ರೇರಕರಾದಾಗ ಯಾವುದೇ ರೀತಿಯ ಗುರಿಯನ್ನು ಸಾಧಿಸಲು ಸಾಧ್ಯ. ಪ್ರತಿ ವಿದ್ಯಾರ್ಥಿ ಅತ್ಯುನ್ನತ ಗುರಿ ಇಟ್ಟುಕೊಂಡು ವ್ಯಾಸಂಗ ನಡೆಸಿದರೆ ಮಾತ್ರ ಏನನ್ನಾದರೂ ಸಾಧಿಸಬಹುದೆಂದು ಸ್ವಾಮೀಜಿ ಹೇಳಿದರು.

   ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಹಾಗೂ ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪಾಂಡುರಂಗಯ್ಯ ಮಾತನಾಡಿ, ಶ್ರೀ ವಿರೇಶಾನಂದ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ಸ್ಥಾಪನೆಗೊಂಡ ಶಾಂತಿನಿಕೇತನ ಶಾಲೆಯಿಂದ ಇಂದು ಪ್ರತಿಭಾವಂತ ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದಾರೆ ಎಂದು ತಿಳಿಸಿದರು.

  ರಾಜಯೋಗಿ ಪಿಎಚ್ ಮಹೇಂದ್ರಪ್ಪ ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಧ್ಯಾನದ ಬಗ್ಗೆ ಅರಿವು ಮೂಡಿಸಿದರು. ಸಮಾಜ ಸೇವಕಿ ರೇಣುಕಮ್ಮ, ಮುಖ್ಯ ಶಿಕ್ಷಕಿ ಪ್ರಿಯಾಂಕ ಕೃಷ್ಣಮೂರ್ತಿ, ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಪಾಂಡುರAಗಯ್ಯ, ಪ್ರಜ್ವಲ್, ಪ್ರತಿಭಾ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ