ರಿಯಾಯಿತಿ ಕೇಳಬೇಡಿ, ಮಾನದಂಡದಡಿ ಪರೀಕ್ಷೆ ಎದುರಿಸಿ – ಶಿಕ್ಷಣ ಸಚಿವ

 ತುಮಕೂರು : 

      ಶಿಕ್ಷಣ ಇಲಾಖೆ ದೇಶಕಟ್ಟುವ ಇಲಾಖೆಯಾಗಿದ್ದು, ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ರೂಪಿಸಲು ಮಾನದಂಡಗಳು ಅನಿವಾರ್ಯವಾಗಿದೆ. ಹಾಗಾಗಿ ಸಿಇಟಿ ಪರೀಕ್ಷೆಗೆ ರಿಯಾಯಿತಿ ಕೇಳದೆ ಮಾನದಂಡದಡಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭಾವಿ ಶಿಕ್ಷಕರು, ಬಡ್ತಿ ನಿರೀಕ್ಷೆಯಲ್ಲಿರುವ ಹಾಲಿ ಶಿಕ್ಷಕರಿಗೆ ಸ್ಪಷ್ಟವಾಗಿ ಹೇಳಿದರು.

     ಪ್ರಜಾಪ್ರಗತಿ -ಪ್ರಗತಿ ಟಿವಿಯಿಂದ ಶನಿವಾರ ನಡೆದ ರಾಜ್ಯದ ಶೈಕ್ಷಣಿಕ ಸಮಸ್ಯೆಗಳ ಕುರಿತು ನೇರ ಫೋನ್ ಇನ್ ಕಾರ್ಯಕ್ರಮ ಹಾಗೂ ಚರ್ಚೆಯಲ್ಲಿ ಪಾಲ್ಗೊಂಡು ಶಿಕ್ಷಕರ ನೇಮಕಾತಿ, ಬಡ್ತಿಗೆ ಸಿಇಟಿ ಪರೀಕ್ಷೆ ಕಡ್ಡಾಯ, ಶೇ.50ರ ಮಾನದಂಡಗಳ ಕುರಿತು ಶಿಕ್ಷಕರು ಎತ್ತಿದ ಪ್ರಶ್ನೆಗಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕಾದರೆ ಮಾನದಂಡಗಳಲ್ಲಿ ರಿಯಾಯಿತಿಗೆ ಆಸ್ಪದವಿರಬಾರದು. ನಮ್ಮ ಸರಕಾರದ ನಿಲುವು ಇದೇ ಆಗಿದೆ. ಮಾನದಂಡದ ಅಂಕವನ್ನು ಇಳಿಸುತ್ತಾ ಹೋದರೆ ಶಾಲೆಯಲ್ಲಿ ಬೋಧನಾ ಗುಣಮಟ್ಟವೇ ಕುಸಿಯುತ್ತದೆ. ಸಿಇಟಿ ಪರೀಕ್ಷೆ ಬರೆಯಲು ಪೂರಕ ತರಬೇತಿಯ ವ್ಯವಸ್ಥೆಯೂ ಇದ್ದು, ಪರೀಕ್ಷೆ ಎದುರಿಸಲು ಸಿದ್ದರಾಗಿ. ಈ ವಿಷಯವಾಗಿ ಕರ್ನಾಟಕವೇ ಇತರೆ ರಾಜ್ಯಗಳಿಗೆ ಮಾದರಿಯಾಗಲಿ ಎಂದು ನುಡಿದರು.

ಮುಂದಿನ ವರ್ಷದಿಂದ ಎನ್‍ಇಪಿ:

      ಶಾಲಾ, ಅಂಗನವಾಡಿ ಹಂತದಲ್ಲಿ ಈ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಿಲ್ಲ. ಮುಂದಿನ ಶೈಕ್ಷಣಿಕ ಸಾಲಿನಿಂದ ಹಂತ ಹಂತವಾಗಿ ಚಾಲೂಗೊಳಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಏಕಾಏಕಿ ಜಾರಿಗೊಳಿಸುವುದಿಲ್ಲ. ಮೊದಲ ಹಂತದಲ್ಲಿ ಮುಂದಿನ ವರ್ಷ 0, 3 ಹಾಗೂ 9ನೇ ತರಗತಿಯಲ್ಲಿ ಅಳವಡಿಸಲಾಗುವುದು. ಪೂರ್ಣ ಪ್ರಮಾಣದ ಜಾರಿಗೆ 2030-2040ರವರೆಗೆ ಕಾಲಾವಕಾಶವನ್ನು ಕೇಂದ್ರ ನೀಡಿದೆ. ಮಾತನಾಡಿ ಅಂಗನವಾಡಿ ಶಿಕ್ಷಕರನ್ನು ಎನ್‍ಇಪಿಗೆ ತರಬೇತಿ ಮೂಲಕ ಅಣಿಗೊಳಿಸಿಯೇ ಅಂಗನವಾಡಿಗಳಲ್ಲಿ ಜಾರಿಗೊಳಿಸಲಾಗುತ್ತದೆ ಹೊರತು ಅಂಗನವಾಡಿ ರದ್ದುಗೊಳಿಸುವುದಿಲ್ಲ. ಈ ತಪ್ಪು ಕಲ್ಪನೆ ಬೇಡ. ಸರಕಾರ ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ ಎಂದರು.

ಶಿಕ್ಷಕರ ನೇಮಕ, ಸಿ ಅಂಡ್ ಆರ್ ನಿಯಮ ತಿದ್ದುಪಡಿ:

      ಸರಕಾರಿ ಶಾಲೆಗಳಲ್ಲಿ ಸು.20 ಸಾವಿರ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸಲು ಶೀಘ್ರವೇ 5 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಕೈ ಬಿಟ್ಟಿರುವ ಕೆಲವು ಕಾಂಬಿನೇಷನ್‍ಗಳನ್ನು ಸೇರಿಸಿ ನೇಮಕ ಪ್ರಕ್ರಿಯೆ ಮಾಡಿಕೊಳ್ಳಲು ಸೇವಾ ವೃಂದ ನಿಯಮಕ್ಕೆ(ಸಿ ಅಂಡ್ ಆರ್) ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗಿದೆ. ಈ ತಿದ್ದುಪಡಿ ಇಲಾಖೆ ಹಂತದಲ್ಲೇ ಮಾಡಬೇಕೋ? ಸಂಪುಟದ ಮುಂದೆ ಬರಬೇಕೋ ಎಂಬ ಕುರಿತು ಚಿಂತನೆ ನಡೆಯುತ್ತಿದ್ದು, ಶೀಘ್ರ ತಿದ್ದುಪಡಿ ತಂದು ಹೊಸ ನೇಮಕ ಪ್ರಕ್ರಿಯೆಗೆ ಚಾಲನೆ ಕೊಡಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷ ಆರಂಭದೊಳಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

 6 ರಿಂದ 8ನೇ ತರಗತಿಗೆ ಶಿಕ್ಷಕರ ಕೊರತೆ:

     ಕೋವಿಡ್‍ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಿಕ್ಷಕರ ಹುದ್ದೆಗೆ ಹೊಸ ನೇಮಕಾತಿ ನಡೆದಿಲ್ಲ. ಈ ಹಿಂದೆ 10 ಸಾವಿರ ಮಂದಿ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಆಗ 3,800 ಮಂದಿಯಷ್ಟೇ ಅರ್ಹತೆ ಗಳಿಸಿದರು. ಸರಕಾರಿ ಪ್ರಾಥಮಿಕ ಶಾಲೆಗಳಲಿ ಶಿಕ್ಷಕರ ಕೊರತೆ ಇಲ್ಲ ಆದರೆ 6 ರಿಂದ 8ನೇ ತರಗತಿಗೆ ಶಿಕ್ಷಕರ ಕೊರತೆ ಹೆಚ್ಚಿದೆ. ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಬಡ್ತಿ ನೀಡಿ ಈ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಲಾಗಿದೆ. ಆದರೆ ಬಡ್ತಿಯನ್ನು ಅರ್ಹತಾ ಪರೀಕ್ಷೆಯ ಆಧಾರದಲ್ಲೇ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ನೇಮಕಾತಿಯಲ್ಲಿ ಕ್ರೀಡಾ ಶಿಕ್ಷಕರಿಗೂ ಒತ್ತು:

     ಕೆಸ್ತೂರಿನ ಚೇತನ್ ಎಂಬುವರು ಕರೆ ಮಾಡಿ ನಮ್ಮೂರಿನ ಶಾಲೆಗೆ ವಿಶಾಲ ಮೈದಾನವಿದ್ದು, 150 ಮಕ್ಕಳು ದಾಖಲಾತಿಯಿದ್ದರೂ ದೈಹಿಕ ಶಿಕ್ಷಕರಿಲ್ಲ. ಯಾರನ್ನಾದರೂ ಕೂಡಲೇ ನಿಯೋಜಿಸಬೇಕು. ಕೋವಿಡ್ ನಂತರ ದೈಹಿಕ ಶಿಕ್ಷಕರ ಅವಶ್ಯಕತೆ ಹೆಚ್ಚಿದೆ ಎಂದರು. ಉತ್ತರಿಸಿದ ಸಚಿವರು ನೂತನ ನೇಮಕಾತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೂ ಆದ್ಯತೆ ನೀಡಲು ಚಿಂತಿಸಲಾಗುತ್ತಿದೆ ಎಂದರು.

      100 ಅಂಕದ ವಿವರಣಾತ್ಮಕ ಪ್ರಶ್ನೆಗಳುಳ್ಳ ಪತ್ರಿಕೆಗೆ ಉತ್ತರಿಸಲು 2ಗಂಟೆ ಸಾಲುವುದಿಲ್ಲ ಎಂಬ ಯಾದಗಿರಿ ಅಭ್ಯರ್ಥಿಯೊಬ್ಬರ ಕರೆಗೆ, ಹೆಚ್ಚಿನ ಸಮಯಕೊಡಲಾಗುವುದೆಂದರು.

      95ರನಂತರ ತೆರೆದ ಕನ್ನಡಶಾಲೆಗಳನ್ನು ಅನುದಾನಕ್ಕೊಳಪಡಿಸುವ ಬಗ್ಗೆ ಸಿಎಂ, ಹಣಕಾಸು ಇಲಾಖೆ ಜತೆ ಚರ್ಚಿಸುವುದಾಗಿ ಶಿವಮೊಗ್ಗದಿಂದ ಬಂದ ಕರೆಗೆ ಸಚಿವರು ಪ್ರತಿಕ್ರಿಯಿಸಿದರು.

ಅನುಕಂಪದ ಉದ್ಯೋಗ ಕಡತ ವಿಳಂಬವಿಲ್ಲ:

      ಅನುಕಂಪದ ಆಧಾರದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಕುಟುಂಬದವರಿಗೆ ಉದ್ಯೋಗ ಕೊಡುವ ಕಡತಗಳು ಶಿಕ್ಷಣ ಇಲಾಖೆಯಲ್ಲಿ ಕೊಳೆಯುತ್ತಿವೆ ಎಂಬ ದೂರಿಗೆ ಸಂಬಂಧಿಸಿದಂತೆ ನಾನು ಶಿಕ್ಷಣ ಸಚಿವನಾದ ಮೇಲೆ 2-3ವರ್ಷಗಳ ಬಾಕಿಯಿದ್ದ ಎಲ್ಲಾ ಕಡತಗಳನ್ನು ವಿಲೇವಾರಿ ಗೊಳಿಸಿದ್ದು, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಶಿಕ್ಷಕರ ನೂರಕ್ಕೂ ಅಧಿಕ ಮಕ್ಕಳು ಅವರ ಪತ್ನಿಯರಿಗೆ ಅನುಕಂಪದ ಆಧಾರದ ಉದ್ಯೋಗವಕಾಶ ಕಲ್ಪಿಸಲಾಗಿದೆ. ಕೆಲವು ಮೃತ ಶಿಕ್ಷಕರಿಗೆ ಇಬ್ಬರು ಪತ್ನಿಯರಿದ್ದು, ಅವರಲ್ಲಿ ಯಾರಿಗೆ ಕೊಡಬೇಕೆಂಬ ಪ್ರಕರಣಗಳಲ್ಲಿ ಮಾತ್ರ ವಿಳಂಬವಾಗಿದೆ ಎಂದು ಸಚಿವ ಬಿ.ಸಿ.ನಾಗೇಶ್ ನುಡಿದರು.

      ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆಗೆ ಸಂಬಂಧಿಸಿದಂತೆ ಬಾಗಲಕೋಟೆ, ಚಿಕ್ಕಮಗಳೂರು ಮತ್ತಿತರೆಡೆಯಿಂದ ಎದುರಾದ ಕರೆಗಳಿಗೆ ಉತ್ತರಿಸಿದ ಸಚಿವರು ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ ಎಂದರು.
ಸರಕಾರಿ ಶಾಲೆಗೆ ಟಿಸಿ ಕಡ್ಡಾಯವಲ್ಲ: ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ಸೇರಲು ಸೇರ್ಪಡೆಯಾಗಲು ಟಿಸಿ ಕಡ್ಡಾಯವಲ್ಲ. ಈ ವಿಷಯವಾಗಿ ಬಂದ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ. ಖಾಸಗಿ ಶಾಲೆಗಳ ಶುಲ್ಕದಲ್ಲಿ ಸರಕಾರ ಶೇ.30 ಕಡಿತಗೊಳಿಸಿತ್ತು.ಕೋರ್ಟ್ 15 ಪ್ರತಿಶತಕ್ಕೆಮಾತ್ರ ಆದೇಶಿಸಿದೆ. ಈ ವಿಷಯವಾಗಿ ಜಿಜ್ಞಾಸೆ ಇದ್ದು, ಸಮಸ್ಯೆಗೆ ಮತ್ತೆ ಕೋರ್ಟ್‍ನಲ್ಲಿ ಪರಿಹಾರ ಕಂಡುಹಿಡಿಯುವ ಯತ್ನ ಮಾಡಲಾಗಿದೆ. ಇನ್ನೂ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಮಾತ್ರ ಅವಕಾಶವಿದ್ದು, ಸರಕಾರ ಕೊಟ್ಟ ಅವಕಾಶಗಳಿಗೇ ಶಿಕ್ಷಕರೇ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆಗಳನ್ನು ತಂದಿದ್ದು, ಅದರ ತೆರವು ವಿಚಾರದಲ್ಲಿ ವಿಳಂಬವಾಯಿತು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ರಾಜ್ಯದ ವಿವಿಧೆಡೆಯಿಂದ ಬಂದ ಕರೆ:

     ರಾಜ್ಯದ ಯಾದಗಿರಿ, ಗದಗ, ರಾಯಚೂರು, ಬಳ್ಳಾರಿ, ಕೊಪ್ಪಳ, ತುಮಕೂರು, ತಿಪಟೂರು, ಶಿರಾ, ಕೋಲಾರ, ಶ್ರೀನಿವಾಸಪುರ ಸೇರಿದಂತೆ ವಿವಿಧ ಭಾಗದಿಂದ 50ಕ್ಕೂ ಅಧಿಕ ಕರೆಗಳು ಬಂದಿದ್ದು, ಸಚಿವರು ಎಲ್ಲಾ ಕರೆಗಳಿಗೂ ಸರಕಾರದ ನಿಯಮಾನುಸಾರವೇ ಉತ್ತರಿಸಿದರು. ಶೈಕ್ಷಣಿಕ ಸಮಸ್ಯೆ ಅರಿಯಲು ಪ್ರಜಾಪ್ರಗತಿ -ಪ್ರಗತಿ ಟಿವಿ ಫೋನ್ ಇನ್ ವೇದಿಕೆ ಉಪಯುಕ್ತವೆನಿಸಿತು ಎಂದು ಸಚಿವರು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

10 ಮಕ್ಕಳಿಗೂ ಕಡಿಮೆಯಿರುವ ಶಾಲೆ ರಾಜ್ಯದಲ್ಲಿ 3880 ಸಂಖ್ಯೆಯಲ್ಲಿದೆ.!

      ರಾಜ್ಯದಲ್ಲಿ 48ಸಾವಿರ ಸರಕಾರಿ ಶಾಲೆಗಳಿದ್ದು 10 ಮಕ್ಕಳಿಗೂ ಕಡಿಮೆಯಿರುವ ಶಾಲೆಗಳ ಸಂಖ್ಯೆಯೇ 3880ರಷ್ಟಿದೆ. ಶಿಕ್ಷಕರ ನಿಯೋಜನೆ, ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತವನ್ನು ಸಮಾನವಾಗಿ ಕಾಪಾಡಲು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಅ.25ರ ಶಾಲೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭದ ಹೊತ್ತಿಗೆ ಕೊರತೆಯಿರುವ ಶಾಲೆಗಳಿಗೆ ಶಿಕ್ಷಕರ ಡೆಪ್ಯೂಟೇಷನ್, ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಆಗಲೇ ಚಾಲ್ತಿಯಲ್ಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಒತ್ತು:

      ಪ್ರಾಥಮಿಕ ಶಾಲೆಗೆ ಯಾವಾಗ ನೇಮಕ ಮಾಡ್ತಿರಾ ಎಂದು ಬಳ್ಳಾರಿಯಿಂದ ಎದುರಾದ ಪ್ರಶ್ನೆಗೆ ಅವಶ್ಯಕತೆ ಇರುವವರ ನೇಮಕಾತಿಗೆ ಒತ್ತುಕೊಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.25ರಷ್ಟು ಶಿಕ್ಷಕರ ಕೊರತೆ ಇದ್ದು ಆ ಭಾಗಕ್ಕೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದರು.

ಹೆಚ್ಚು ರಿಂಗಣಿಸಿದ ಶಿಕ್ಷಕರ ಬಡ್ತಿಗೆ ಸಿಇಟಿ ಪರೀಕ್ಷೆ ಸಮಸ್ಯೆ!

      ಹಿಂದೆ 1 ರಿಂದ 7ನೇ ತರಗತಿವರೆಗೆ ನೇಮಕವಾದ ಸರಕಾರಿ ಶಿಕ್ಷಕರು 6 ರಿಂದ 8 ನೇತರಗತಿಗೆ ಪಾಠ ಮಾಡಬೇಕಾದರೆ ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕೆಂದು ಕಡ್ಡಾಯ ಮಾಡಿರುವುದಕ್ಕೆ ಪೋನ್ ಇನ್‍ನಲ್ಲಿ ರಾಜ್ಯದ ವಿವಿಧ ಭಾಗದಿಂದ ಹೆಚ್ಚು ಆಕ್ಷೇಪಗಳು ಕೇಳಿ ಬಂದವು. ಈ ನಿಯಮ ವಿರೋಧಿಸಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರೀಕ್ಷೆ ಇಲ್ಲದೆ ಬಡ್ತಿ ನೀಡಿ. ಸಿ ಅಂಡ್ ರೂಲ್ಸ್‍ನಲ್ಲಿ ಇಂತಹ ನಿಯಮವಿಲ್ಲ. ಬೇರೆ ರಾಜ್ಯದಲ್ಲೂ ಗೋವಿಂದೇಗೌಡರ ಕಾಲದಲ್ಲೂ ಶಿಕ್ಷಕರ ಕೊರತೆ ನೀಗಿಸಲು ಪರೀಕ್ಷೆ ಇಲ್ಲದೆ ಬಡ್ತಿ ನೀಡಲಾಯಿತು ಎಂಬೆಲ್ಲ ಅಂಶ ಮುಂದಿಟ್ಟ್ನು ಕರೆಮಾಡಿದ ಶಿಕ್ಷಕರು ಸಚಿವರೊಡನೆ ವಾದಿಸಿದರು. ರಾಯಚೂರಿನ ವಿಷ್ಣುವರ್ಧನ್ ಎಂಬುವರ ಕರೆ ಮಾಡಿ ಸಿಇಟಿ ಪರೀಕ್ಷೆಯನ್ನೇ ಆಧರಿಸಿ ಬಡ್ತಿ ನೀಡಬೇಕು. ಆಗಲೇ ಗುಣಮಟ್ಟದ ಶಿಕ್ಷಣವೆಂಬ ಸಿಎಂ, ಪ್ರಧಾನಿಗಳ ಹೇಳಿಕೆಗೆ ಅರ್ಥ ಬರಲಿದೆ ಎಂದು ಸಚಿವರ ನಡೆಯನ್ನು ಬೆಂಬಲಿಸಿದರು.

ಪ್ರಶ್ನೆಪತ್ರಿಕೆ ತಯಾರು ಮಾಡಿದವರನ್ನೇ ಕೂರಿಸಿ ಪಾಸಾಗ್ತಾರ ನೋಡಿ!

      ಶಿಕ್ಷಕರಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳು ಅದರಲ್ಲೂ ಗಣಿತ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕಬ್ಬಿಣದ ಕಡಲೆಯಂತಾಗಿದ್ದು, ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಹತ್ತು ಮಂದಿಯನ್ನೇ ಕೂರಿಸಿ ಪರೀಕ್ಷೆ ಬರೆಸಿ ಎಷ್ಟು ಜನ ಪಾಸಾಗ್ರಾರೆ ನೋಡಿ ಎಂದು ಗದಗದಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಅಸಮಾಧಾನಿತರಾದ ಸಚಿವರು ಮುಂದೆ ಶಿಕ್ಷಕರಾಗುವವರು ಆಡುವ ಮಾತು ಇದಲ್ಲ. ಹಾಗಾದರೆ ಆಯ್ಕೆಯಾದ ಇತರರು ಹೇಗೆ ಪರೀಕ್ಷೆ ಪಾಸು ಮಾಡಿದರು. ಕಷ್ಟಪಟ್ಟು ತಯಾರಿ ನಡೆಸಿ ಸಿಇಟಿ ಪಾಸಾಗಿ, ರಿಪಿಟೆಡ್ ಸಿಇಟಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

“ನಮ್ಮ ಶಾಲೆ ನಮ್ಮ ಕೊಡುಗೆ’ ಆ್ಯಪ್

      ಶಿಕ್ಷಣವು ಕೇವಲ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ. ಇದರಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕು ಎನ್ನುವ ಕಾರಣಕ್ಕೆ “ನಮ್ಮಶಾಲೆ ನಮ್ಮ ಕೊಡುಗೆ’ ಎಂಬ ಹೊಸ ಕಾರ್ಯಕ್ರಮ ರೂಪಿಸಿ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳು ಈ ಆ್ಯುಪ್‍ನಲ್ಲಿ ತಾನೂ ಓದಿದ ಶಾಲೆಗೆ ಏನು ಅಗತ್ಯವಿದೆ ಎಂಬುದನ್ನು ಮೊಬೈಲ್‍ನಲ್ಲೇ ಪರಿಶೀಲಿಸಿ ಸಂಬಂಧಿಸಿದ ಕೊಡುಗೆ ಕೊಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ದೇಶ-ವಿದೇಶದಲ್ಲಿ ನೆಲೆಸಿರುವ ಎಲ್ಲಾ ಹಳೇ ವಿದ್ಯಾರ್ಥಿಗಳು ತನಗೆ ಅಕ್ಷರ ಕಲಿಸಿದ ಶಾಲೆಗೆ ತಾವಿದ್ದಲ್ಲಿಂದಲೇ ಕೊಡುಗೆ ಕೊಡಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ.

-ಬಿ.ಸಿ.ನಾಗೇಶ್ ಶಿಕ್ಷಣ ಸಚಿವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap