ಚಾರ್ಜ್​ಶೀಟ್​​ನಲ್ಲಿ ‌ಅಮಾಯಕರ ಹೆಸರು ಕೈಬಿಡಲು ಸೂಚನೆ: ಚಲುವರಾಯಸ್ವಾಮಿ

ಮಂಡ್ಯ

    ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಭೆ ಕೇಸ್​​ನಲ್ಲಿ ಅಮಾಯಕರನ್ನು ಬಂಧಿಸಿರುವುದು‌ ನಿಜ. ಚಾರ್ಜ್​ಶೀಟ್​​ನಲ್ಲಿ ‌ಅವರ ಹೆಸರು ಕೈಬಿಡಲು ಸೂಚನೆ ‌ನೀಡಿದ್ದೇನೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

   ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಹೆಸರು ಕೈಬಿಟ್ಟಿರುವ ವಿಚಾರವಾಗಿ ಮಾತನಾಡಿದ್ದು, ಗಲಭೆಯಲ್ಲಿ ರಾಜೇಶ್ ಭಾಗವಹಿಸಿರಲಿಲ್ಲ. ಸಿಸಿಟಿವಿ ಆಧರಿಸಿ ಅರೆಸ್ಟ್ ಮಾಡಿದರೆ 500 ಜನರು ಆಗುತ್ತಾರೆ. ಮೆರವಣಿಗೆ ‌ಟೀಂನಲ್ಲಿ ರಾಜೇಶ್ ಪುತ್ರ ಇದ್ದಿದ್ದಕ್ಕೆ ಬಂಧಿಸಿದ್ದಾರೆ. ಯಾರನ್ನೂ‌ ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಆ ಮೂಲಕ ತಮ್ಮ ಆಪ್ತನನ್ನು ಚಲುವರಾಯಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

   ರಾಜ್ಯಕ್ಕೆ ನಾಗಮಂಗಲ ಯಥಾಸ್ಥಿತಿಗೆ ತಲುಪಿದ ಬಗ್ಗೆ ಸಂದೇಶ ಕೊಡಬೇಕು. ಒಂದು ಬಾರಿ ಅರೆಸ್ಟ್ ಆದರೆ ಜಾಮೀನು ಪಡೆಯಲೇಬೇಕು. ಅಮಾಯಕರೆಂದು ಖಚಿತವಾದರೆ ಜಾರ್ಜ್‌ಶೀಟ್ ವೇಳೆ ಕೈಬಿಡುತ್ತೇವೆ. ಗುಂಪು ಘರ್ಷಣೆಗಳಾದ ಕೆಲವೊಮ್ಮೆ ಕೆಲವರನ್ನ ವಶಕ್ಕೆ ಪಡೆಲಾಗುತ್ತದೆ. ಸಿಸಿಟವಿ ನೋಡಿಯೋ, ಗುಂಪಲ್ಲಿದ್ದರು ಅನ್ನೋ‌ ಕಾರಣಕ್ಕೋ ಬಂಧಿಸಿರುತ್ತಾರೆ. ಅಮಾಯಕರಿದ್ದರೆ ಖಂಡಿತವಾಗಿ ಜಾರ್ಜ್‌ಶೀಟ್ ವೇಳೆ ಕೈಬಿಡುತ್ತೇವೆ ಎಂದಿದ್ದಾರೆ.

    ನಾಗಮಂಗಲದಲ್ಲಿ ಮತ್ತೆ ಶಾಂತಿ ಸ್ಥಾಪನೆ ಕುರಿತು ಚರ್ಚೆ ಮಾಡಿದ್ದೇವೆ. ನಾಳೆಯಿಂದ ನಾಗಮಂಗಲದಲ್ಲಿ ಗಣಪತಿ ಉತ್ಸವ ನಡೆಯಲಿದೆ. ಶಾಂತಿ ಸ್ಥಾಪನೆಗೆ ಎಲ್ಲ ಪಕ್ಷ, ಸಂಸ್ಥೆ, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

   ಸೋಮವಾರ ಮುಸ್ಲಿಂರ ಹಬ್ಬವಿರುವುದರಿಂದ ಗಣಪತಿ ವಿಸರ್ಜನೆ ಬೇಡ ಎಂದಿದ್ದೇವೆ. ನಾಗಮಂಗಲದಲ್ಲಿ ನಡೆದ ಘಟನೆ ಕೆಟ್ಟ ಘಳಿಗೆ, ಯಾರ ಕಣ್ಣು ಬಿದ್ದಿತ್ತೊ ಗೊತ್ತಿಲ್ಲ. ನಂಬಲು ಸಾಧ್ಯವಾಗದ ಘಟನೆ ನಡೆದು ಹೋಗಿದೆ. ರಾಜಕಾರಣಿಗಳು, ಸಂಘಟನೆಗಳು ಈ ವಿಚಾರ ಇನ್ಮುಂದೆ ಪ್ರಸ್ತಾಪ ಮಾಡುವುದನ್ನ ನಿಲ್ಲಿಸಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ ಸ್ನೇಹಿತರಿದ್ದಾರೆ. ನಮ್ಮೆಲ್ಲರ ಉದ್ದೇಶ ಕರ್ನಾಟಕ ಶಾಂತಿ ಆಗಿರಬೇಕು. ಜನರು ನೆಮ್ಮದಿ ಬದುಕು ಬದುಕಬೇಕು. ನಾಗಮಂಗಲ ಯಥಾಸ್ಥಿತಿಗೆ ಬಂದಿದೆ ಎಂದರು. 

   ಈ ಘಟನೆ ಹಿಂದೆ ಯಾರ ಕೈವಾಡವಿದೆ ತಿಳಿಯಲು ವಿಶೇಷ ತನಿಖೆ ನಡೆಸಲಾಗುವುದು. ನಷ್ಟ ಪ್ರಮಾಣ ವರದಿ ಸಿದ್ದವಾಗಲಿದೆ. ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಕುಮಾರಸ್ವಾಮಿ ಹೇಳಿಕೆ ಏನೇ ಇದ್ದರು ನೊಂದವರಿಗೆ ಪರಿಹಾರ ಕೊಟ್ಟಿದ್ದಾರೆ, ಅಭಿನಂದನೆ ಸಲ್ಲಿಸುತ್ತೇನೆ. ಈ ಸಮಯದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡುತ್ತೇನೆ. ಈ ಘಟನೆ ಇಲ್ಲಿಗೆ ನಿಲ್ಲಲು ಮಾಧ್ಯಮದವರ ಸಹಕಾರಬೇಕು ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap