ಮುಂಬಯಿ:
ಮೊದಲ ಬಾರಿಗೆ ಎಲಿಮಿನೇಟರ್ ಪ್ರವೇಶಿಸಿದ ಗುಜರಾತ್ ಜೈಂಟ್ಸ್ ಇಂದು(ಗುರುವಾರ) ನಡೆಯುವ ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಗೆದ್ದವರು ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದ್ದಾರೆ. ಗುಜರಾತ್ ತಂಡವು ಲೀಗ್ ಹಂತದ ಆರಂಭದಲ್ಲಿ ಸತತ ಸೋಲುಗಳಿಂದ ಹೊರಬೀಳುವ ಆತಂಕ ಎದುರಿಸಿತ್ತು. ಆದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಜಯಿಸುವ ಮೂಲಕ ಪುಟಿದೆದ್ದ ಗಾರ್ಡನರ್ ಬಳಗವು ಈಗ ಪ್ರಶಸ್ತಿ ಸನಿಹ ಬಂದು ನಿಂತಿದೆ.
ತವರಿನಲ್ಲಿ ಮುಂಬೈ ತಂಡ ಬಲಿಷ್ಠವಾಗಿದೆ. ನಾಯಕಿ ಹರ್ಮನ್‌ಪ್ರೀತ್, ಆಲ್‌ರೌಂಡರ್ ನಾಟ್ ಸ್ಕಿವರ್ ಬ್ರಂಟ್, ಹೀಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್ ಅವರನ್ನು ನಿಯಂತ್ರಿಸುವುದು ಎದುರಾಳಿಗಳಿಗೆ ದೊಡ್ಡ ಸವಾಲಾಗಲಿದೆ. 2023ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಪಿಎಲ್‌ನಲ್ಲಿಯೂ ಮುಂಬೈ ಚಾಂಪಿಯನ್ ಆಗಿತ್ತು. ಅಂದು ಮುಂಬೈನಲ್ಲೇ ಪಂದ್ಯಗಳು ನಡೆದಿತ್ತು. ಈ ಬಾರಿಯೂ ಎಲಿಮಿನೇಟರ್ ಮತ್ತು ಫೈನಲ್ ಮುಂಬೈನಲ್ಲೇ ನಡೆಯುವ ಕಾರಣ ತವರಿನ ಲಾಭವಂತು ಇದೆ.
ಗುಜರಾತ್ ತಂಡದ ಬಲವೆಂದರೆ ಅದು ಬ್ಯಾಟಿಂಗ್ ಮಾತ್ರ. ಬೌಲಿಂಗ್ ತೀರಾ ಕಳಪೆ. ಇದುವರೆಗಿನ ಪಂದ್ಯಗಳು ಗೆದ್ದದ್ದು ಕೇಲವ ಬ್ಯಾಟಿಂಗ್ ಬಲದಿಂದ ಮಾತ್ರ. 200 ರನ್ ಬಾರಿಸಿದರೂ ಇದನ್ನು ಉಳಿಸಿಕೊಳ್ಳುವ ಬೌಲಿಂಗ್ ಪಡೆ ಗುಜರಾತ್ ತಂಡದಲ್ಲಿಲ್ಲ. ಬೆತ್ ಮೂನಿ, ಹರ್ಲಿನ್ ಡಿಯೊಲ್, ದಿಯಾಂದ್ರ ಡಾಟಿನ್, ಭಾರತಿ ಫೂಲ್‌ಮಾಲಿ, ಫೋಬಿ ಲಿಚ್‌ಫೀಲ್ಡ್, ಗಾರ್ಡನರ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಪೇರಿಸುವಲ್ಲಿ ಸಮರ್ಥರಿದ್ದಾರೆ. ಗುಜರಾತ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮುಂಬೈ ವಿರುದ್ಧವೇ ಆಡಿತ್ತು. ಅಲ್ಲಿ 9 ರನ್ ಸೋಲು ಕಂಡಿತ್ತು. ಇದೀಗ ಈ ಸೋಲನ್ನು ಎಲಿಮಿನೇಟರ್ ಪಂದ್ಯದಲ್ಲಿ ತೀರಿಸುವ ಇರಾದೆಯಲ್ಲಿದೆ.
ಸಂಭಾವ್ಯ ತಂಡಗಳು
ಗುಜರಾತ್ ಜೈಂಟ್ಸ್: ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಡಿಯಾಂಡ್ರಾ ಡಾಟಿನ್, ಫೋಬೆ ಲಿಚ್‌ಫೀಲ್ಡ್, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ಮೇಘನಾ ಸಿಂಗ್, ತನುಜಾ ಕನ್ವರ್, ಪ್ರಿಯಾ ಮಿಶ್ರಾ.
ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜನಾ, ಜಿ ಕಮಲಿನಿ, ಅಮನ್‌ಜೋತ್ ಕೌರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಪರುಣಿಕಾ ಸಿಸೋಡಿಯಾ.
