ಬೆಂಗಳೂರು:
ಬಿಟ್‌ಕಾಯಿನ್ ಹಗರಣ, ಕೋವಿಡ್ ನಿರ್ವಹಣೆಯಲ್ಲಿ ಅವ್ಯವಹಾರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಸೇರಿದಂತೆ ಪ್ರಮುಖ ಪ್ರಕರಣಗಳ ಪರಿಶೀಲಿಸಲು ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಈ ಪ್ರಕರಣಗಳನ್ನು ವಿಶೇಷ ತನಿಖಾ ತಂಡಗಳು (ಎಸ್‌ಐಟಿ) ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸುತ್ತಿದ್ದು, ತನಿಖೆಗಳು ಪೂರ್ಣಗೊಳ್ಳುವ ವಿವಿಧ ಹಂತಗಳಲ್ಲಿವೆ. ನಾನೂ ಕೂಡ ಈ ಪ್ರಕರಣಗಳ ಮೇಲ್ವಿಚಾರಣೆ ಮಾಡುತ್ತಿದ್ದು, ಪರಿಶೀಲನೆಗೆ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಖರ್ಗೆ ಕುಟುಂಬದ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಮಾತನಾಡಿ, ಸಿದ್ಧಾರ್ಥ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ಕೆಐಎಡಿಬಿ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ದೂರು ಬಂದರೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಾದವರು ರಾಜ್ಯಪಾಲರು. ಅನವಶ್ಯಕವಾಗಿ ಆಪಾದನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಸಾವಿರಾರು ಜನರು ರಾಜ್ಯಪಾಲರಿಗೆ ಮನವಿ ಪತ್ರಗಳನ್ನು ಸಲ್ಲಿಸುತ್ತಾರೆ. ಈ ಅರ್ಜಿಗಳನ್ನು ಪರಿಶೀಲಿಸಿದ ನಂತರವೇ ಸತ್ಯ ಹೊರಬರುತ್ತದೆ. ಸತ್ಯ ಹೊರಬರುವವರೆಗೆ ಯಾವುದೇ ಆರೋಪ ಮಾಡಬಾರದು ಎಂದರು.
ನವದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷದ ಸದಸ್ಯರು ದೆಹಲಿಗೆ ಭೇಟಿ ನೀಡಿದಾಗ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಸಹಜ ಎಂದು ಹೇಳಿದರು.
ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಕೂಡ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಕಾರ್ಯಗಳನ್ನು ನೀಡಲಾಗಿದೆ. ಇಂತಹ ಭೇಟಿಗಳಿಗೆ ರಾಜಕೀಯ ಆಯಾಮ ನೀಡುವುದು ಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ ಮತ್ತು ಗಾಂಧಿ ಕುಟುಂಬದ ಮೇಲೆ ನಕಾರಾತ್ಮಕ ಪ್ರತಿಕ್ರಿಯೆಗಳ ನಿಯಂತ್ರಿಸುವಂತೆ ನನಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.