ತಂತ್ರಜ್ಞಾನ:
5ಜಿ ತಂತ್ರಜ್ಞಾನ ಸೌಲಭ್ಯವಿನ್ನೂ ಹಲವಾರು ಕಡೆ ಲಭ್ಯವಾಗಿಲ್ಲ. ಹೀಗಿರುವಾಗ 6ಜಿ ತಂತ್ರಜ್ಞಾನ ಸೌಲಭ್ಯಗಳನ್ನು ಕುರಿತು ಚರ್ಚೆ ನೆಡೆದಿರುವುದೇಕೆ ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಾರೆ.
ಆದರೆ 6ಜಿ ಚರ್ಚೆಗೆ ಸೀಮಿತವಾಗಿಲ್ಲ, ಹಲವಾರು ದೇಶಗಳು ಈ ತಂತ್ರಜ್ಞಾನ ಅಭಿವೃದ್ಧಿಗೆಂದು ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದಾಗುತ್ತಿವೆ; ತಂತ್ರಜ್ಞಾನ ಕುರಿತು ಸಂಶೋಧನೆ, ಅಭಿವೃದ್ಧಿ ಮತ್ತು ಕಾರ್ಯಯೋಜನೆ ರೂಪಿಸಲು ತಜ್ಞರ ಸಮಿತಿಗಳ ನೇಮಕ ಮತ್ತು ವಿಜ್ಞಾನಿಗಳು, ಸಂಶೋಧಕರು ಹಾಗೂ ಉದ್ಯಮಗಳಿಗೆ ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿವೆ.
ಅಮೆರಿಕದಲ್ಲಿ ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ 6ಜಿ ತಂತ್ರಜ್ಞಾನ ಅಭಿವೃದ್ಧಿಗಾಗಿ ಅಗತ್ಯವಾಗುವ 95 ಗಿಗಾ ಹರ್ಟ್ಸ್ದಿಂದ 3 ಟೆರಾ ಹರ್ಟ್ಸ್ ಸ್ಪೆಕ್ಟರ್ಮ್ನಲ್ಲಿ 21.2 ಗಿಗಾ ಹರ್ಟ್ಸ್ ತರಾಂಗಾಂತರವನ್ನು ಅಲ್ಲಿಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ನೀಡಿದೆ.
5ಜಿ-6ಜಿ: ಕೆಲವು ಪ್ರಮುಖ ವ್ಯತ್ಯಾಸಗಳು
5ಜಿ(ಎನ್ಆರ್) ಸೌಲಭ್ಯ ಬಳಸಿದಾಗ ಸೆಕೆಂಡಿಗೆ 1ರಿಂದ 20 ಗಿಗಾಬೈಟ್ಗಳವರೆಗೆ ಡೇಟಾ ಸಂವಹನ (ಅಪ್ಲೋಡ್ ಮತ್ತು ಡೌನ್ಲೋಡ್) ಮಾಡಬಹುದಾಗಿದೆ.
6ಜಿ ಸೌಲಭ್ಯ ಬಳಕೆಗೆ ಬಂದಾಗ ಸೆಕೆಂಡಿಗೆ 1 ಟೆರ್ರಾಬೈಟ್ ಅಂದರೆ 1000ಗಿಗಾಬೈಟ್ ಮತ್ತು ಅದಕ್ಕಿಂತ ಹೆಚ್ಚಿನವರೆಗೆ ಡೇಟಾ ಸಂವಹನ ಮಾಡಲು ಸಾಧ್ಯವಾಗುತ್ತದೆ.
(ಈಗ ಅಮೆರಿಕದಲ್ಲಿ ಲಭ್ಯವಿರುವ ಅತಿವೇಗದ 4ಜಿ ಸೌಲಭ್ಯದಲ್ಲಿ ಸೆಕೆಂಡಿಗೆ 35 ಮೆಗಾಬೈಟ್ಗಳವರೆಗೆ ಡೇಟಾ ಸಂವಹನ ಮಾಡಲು ಸಾಧ್ಯವಾಗುತ್ತಿದೆ. (1 ಗಿಗಾಬೈಟ್ ಅಂದರೆ ಸುಮಾರು 1000 ಮೆಗಾಬೈಟ್ಗಳಷ್ಟಾಗುತ್ತದೆ ಮತ್ತು 1 ಟೆರ್ರಾಬೈಟ್ ಅಂದರೆ 10 ಲಕ್ಷ ಮೆಗಾಬೈಟ್ಗಳಷ್ಟಾಗುತ್ತದೆ).
5ಜಿ ಸೌಲಭ್ಯವನ್ನು ಬಳಸುವಾಗ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಾಹಿತಿ ವಿನಿಮಯ (ಉದಾಹರಣೆಗೆ ಟೆಲಿಫೋನ್ ಕರೆ) ಮಾಡುವಾಗ, ಸುಮಾರು 1ರಿಂದ 5 ಮಿಲಿಸೆಕೆಂಡ್ಗಳ ವಿಳಂಬವಾಗಬಹುದು. ಆದರೆ 6ಜಿ ಸೌಲಭ್ಯದಲ್ಲಿ 0.1 ಮಿಲಿಸೆಕೆಂಡ್ಗಳ ವಿಳಂಬವಾಗುವ ನಿರೀಕ್ಷೆಯಿದೆ.
5ಜಿ ಸೌಲಭ್ಯವನ್ನು ಸ್ಮಾರ್ಟ್ಫೋನ್ಗಳು, ಐಓಟಿ ಸೆನ್ಸರ್ಗಳು ಮತ್ತು ಡ್ರೋನ್ಗಳಲ್ಲಿ ಬಳಸಬಹುದಾದರೆ, 6ಜಿ ಸೌಲಭ್ಯವನ್ನು ಇವೆಲ್ಲದರ ಜೊತೆಯಲ್ಲಿ ಐಓಟಿ, ರೋಬೋಟಿಕ್ಸ್ಗೆ ಅಗತ್ಯವಾದ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನ, ಕ್ಲೌಡ್, ಸ್ಮಾರ್ಟ್ ವಿಡಿಯೊ ಹಾಗೂ ವೈದಕೀಯ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಸುರಕ್ಷತೆಗೆ ಅಗತ್ಯವಾದ ಸಿ.ಆರ್.ಎ.ಎಸ್. ತಂತ್ರಜ್ಞಾನ, ಮೆದುಳು ಮತ್ತು ಕಂಪ್ಯೂಟರ್ ಸಂವಹನ ವ್ಯವಸ್ಥೆ (ಬಿ.ಸಿ.ಐ.),
ವಿಸ್ತರಿಸಲಾದ ರಿಯಾಲ್ಟಿ (ಇ.ಆರ್.) ತಂತ್ರಜ್ಞಾನ, ಮಾನವದೇಹದಲ್ಲಿ ಬಳಸಲಾಗುವ ಸ್ಮಾರ್ಟ್ ಹಾಗೂ 3-ಡಿ ಮುದ್ರಣ ತಂತ್ರಜ್ಞಾನದಿಂದ ತಯಾರಿಸಲಾದ ಹೃದಯ, ಮೂತ್ರಪಿಂಡ, ಯಕೃತ್ತು ಮೊದಲಾದ ಅಂಗಾಂಗಳ ನಿರ್ವಹಣೆ – ಹೀಗೆ ಹಲವು ಕಡೆಯಲ್ಲಿ ಬಳಸಬಹುದಾಗಿದೆ.
5ಜಿ ತಂತ್ರಜ್ಞಾನ ಬಳಸಲು ಸೂಕ್ತವಾದ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆದರೆ 6ಜಿ ತಂತ್ರಜ್ಞಾನ ಬಳಕೆಗೆ ಬಂದಾಗ ಸ್ಮಾರ್ಟ್ಫೋನ್ಗಳ ಅಗತ್ಯವಿರುವುದಿಲ್ಲ. ಸ್ಮಾರ್ಟ್ಫೋನ್ಗಳ ಯುಗ ಅಂತ್ಯವಾಗಲಿದ್ದು,
ಈಗ ಲಭ್ಯವಿರುವ ದೂರವಾಣಿ, ಇಂಟರ್ನೆಟ್, ವಿಡಿಯೊ ಕಾಲ್ಗಳಿಗಿಂತ ಹಲವು ಪಟ್ಟು ಉತ್ತಮವಾದ ಮತ್ತು ಅಧುನಿಕವಾದ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿವೆ.
6ಜಿ ತಂತ್ರಜ್ಞಾನ ಬಳಕೆಗೆ ಬಂದಾಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸುಲಭವಾಗುತ್ತದೆ. ಇದರಿಂದಾಗಿ ಆರೋಗ್ಯಸೇವೆಗಳು, ದೂರವಾಣಿಸೇವೆಗಳು, ಮಾಧ್ಯಮ, ಶಿಕ್ಷಣ, ಸಾರಿಗೆ, ಸರ್ಕಾರದ ಸೇವೆಗಳು, ಉದ್ಯಮ, ವಾಣಿಜ್ಯ, ಕೃಷಿ – ಹೀಗೆ ಹಲವು ಕ್ಷೇತ್ರಗಳಲ್ಲಿ ಜನಸಾಮಾನ್ಯರಿಗೆ ಅನೇಕ ಮೌಲ್ಯಾಧಾರಿತ ಸೇವೆಗಳು, ಸುಲಭ ದರದಲ್ಲಿ ದೊರೆಯುವ ನಿರೀಕ್ಷೆ ಇದೆ.
ಈಗ ಲಭ್ಯವಿರುವ ಚಲನಚಿತ್ರಗಳು, ಟಿವಿ, ಮುದ್ರಿತ ಪತ್ರಿಕೆಗಳು ಮತ್ತು ಪ್ರಕಟಣೆಗಳ ಬದಲಾಗಿ ಗ್ರಾಹಕನ ಅಭಿರುಚಿಗೆ ಮತ್ತು ಅಗತ್ಯಕ್ಕೆ ತಕ್ಕಂತೆ ವಿಶ್ವದ ಮೂಲೆಮೂಲೆಯಿಂದ ಸುದ್ಧಿ ಸಮಾಚಾರ, ಸಿನಿಮಾ, ಮನೋರಂಜನೆ – ಹೀಗೆ ಹಲವಾರು ಸೌಲಭ್ಯಗಳು ಸುಲಭ ದರದಲ್ಲಿ ದೊರೆಯಲಿವೆ.
ನಾವು ಧರಿಸುವ ಕನ್ನಡಕಗಳು ಮುಂದೆ ಸ್ಮಾರ್ಟ್ ಕನ್ನಡಕಗಳಾಗಲಿದ್ದು, ಕನ್ನಡಕದಲ್ಲೇ ದೂರವಾಣಿ ಕರೆಗಳನ್ನು ಮಾಡಲು, ಸ್ವೀಕರಿಸಲು ವ್ಯವಸ್ಥೆಯ ಜೊತೆಗೆ, ಬೇಕೆಂದಾಗ ಸುದ್ದಿ ಸಮಾಚಾರದಂತಹ ವಿವಿಧ ಸೌಲಭ್ಯಗಳನ್ನು ಬಳಸುವ ಆಯ್ಕೆ ಇರಲಿದೆ.
6ಜಿ ತಂತ್ರಜ್ಞಾನ ಭಾರತಕ್ಕೆ ಹೇಗೆ ಉಪಯೋಗ?
ನಮ್ಮ ದೇಶದಲ್ಲಿರುವ ಅಪಾರವಾದ ಪ್ರಾಕೃತಿಕ ವೈವಿಧ್ಯ, ನೈಸರ್ಗಿಕ ಸಂಪನ್ಮೂಲಗಳು, ಕಲೆ, ಭಾಷೆಗಳು – ಹೀಗೆ ವಿವಿಧ ಕಡೆ ಲಭ್ಯವಿರುವ ಮಾಹಿತಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಲು, ಸಂಸ್ಕರಿಸಲು, ವಿತರಿಸಲು ಮತ್ತು ಬಳಸಲು 6ಜಿ ತಂತ್ರಜ್ಞಾನ ಸಹಾಯಕವಾಗುತ್ತದೆ.
ಒಂದು ಸೆಕೆಂಡಿಗೆ 10 ಲಕ್ಷ ಮೆಗಾಬೈಟ್ನಷ್ಟು ಡೇಟಾವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಕಳುಹಿಸಲು ಸಾಧ್ಯವಾಗುತ್ತದೆ ಅಂದಾಗ ನಮ್ಮ ದೇಶದ ಆಡಳಿತ, ದೈನಂದಿನ ಜೀವನಶೈಲಿ, ಸಾರ್ವಜನಿಕ ಸೇವೆಗಳು, ಶಿಕ್ಷಣ, ಆರೋಗ್ಯ ಸೇವೆಗಳು, ಹೀಗೆ ಹಲವು ಕ್ಷೇತ್ರಗಳಲ್ಲಿ ಆಗುವ ಬದಲಾವಣೆಯನ್ನು ನಾವು ಕಲ್ಪಿಸಿಕೊಳ್ಳಬಹುದಾಗಿದೆ.
ಹವಾಮಾನ ಮುನ್ಸೂಚನೆ, ವಾಯಮಾಲಿನ್ಯ, ಪ್ರಕೃತಿವಿಕೋಪಗಳು, ಸಾಂಕ್ರಾಮಿಕ ರೋಗಗಳನ್ನು ಕುರಿತ ಮಾಹಿತಿಯನ್ನು ಹೆಚ್ಚು ನಿಖರವಾಗಿ ಸಂಗ್ರಹಿಸಿ, ಸಂಸ್ಕರಿಸಿ ಮತ್ತು ಜನಸಾಮಾನ್ಯರಿಗೆ ನೀಡಲು ಸುಲಭವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ