ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಸೇರಿದೆ. ಜೂನ್ 4ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಆದರೆ ಫಲಿತಾಂಶ ತಡೆ ಹಿಡಿಯಿರಿ ಎಂದು ಕೆ. ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಅಪಪ್ರಚಾರ ನಡೆಸಿರುವ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು, ಫಲಿತಾಂಶ ತಡೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಈಶ್ವರಪ್ಪ, “ಮತದಾನಕ್ಕೆ ಎರಡು ದಿನ ಇರುವಾಗ ನಾನು ಕಣದಿಂದ ಹಿಂದೆ ಸರಿದು, ರಾಘವೇಂದ್ರ ಅವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದೇನೆ ಎಂಬ ನಕಲಿ ವಿಡಿಯೋ ಹರಿಬಿಡಲಾಯಿತು” ಎಂದರು.
“ಇದನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗವೇ ಹರಿಬಿಟ್ಟಿದ್ದು, ಇದು ಮತದಾರರಲ್ಲಿ ಗೊಂದಲವನ್ನು ಸೃಷ್ಟಿ ಮಾಡಿತು. ಇದರ ಹಿಂದೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಕೈವಾಡವಿದೆ. 2019ರ ಚುನಾವಣೆಯಲ್ಲಿ ಮಾಡಿದ್ದ ಪ್ರಚಾರ ಭಾಷಣವನ್ನು ತಿರುಚಿ ವಿಡಿಯೋ ಬಿಡುಗಡೆ ಮಾಡಿದರು” ಎಂದು ಆರೋಪಿಸಿದರು.
“ಚುನಾವಣೆಯಲ್ಲಿ ಸೋಲುವ ಭಯದಿಂದ ಈ ಕೆಲಸ ಮಾಡಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಮಾದರಿ ತುಣುಕೊಂದನ್ನು ಅವರು ಹರಿಬಿಟ್ಟಿದ್ದಾರೆ. ಹಿಂದುತ್ವ ಪ್ರತಿಪಾದಿಸಿದ ಈಶ್ವರಪ್ಪ ತಮ್ಮನ್ನು ಬೆಂಬಲಿಸಿದ್ದಾರೆ ಎಂಬುದಾಗಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದರು” ಎಂದು ಕೆ. ಎಸ್. ಈಶ್ವರಪ್ಪ ದೂರಿದರು.
“ನಾನು ಕಣದಿಂದ ಹಿಂದೆ ಸರಿದಿರುವುದಾಗಿ ಎಲ್ಲೂ ಸಹ ಹೇಳಿಲ್ಲ ಮತ್ತು ಮಾಧ್ಯಮಗಳಿಗೆ ಹೇಳಿಕೆಯನ್ನು ಸಹ ನೀಡಿಲ್ಲ. ಈ ತಿರುಚಿದ ವಿಡಿಯೋ ಕುರಿತು ನಾನು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿದ್ದೇನೆ. ಇದರ ತನಿಖೆ ಪೂರ್ಣಗೊಳ್ಳುವ ತನಕ ಫಲಿತಾಂಶ ತಡೆ ಹಿಡಿಯಬೇಕು” ಎಂದು ಈಶ್ವರಪ್ಪ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಈಶ್ವರಪ್ಪ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಹಾಕಿದ್ದು, ‘ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಶ್ರೀಯುತ ಬಿ. ವೈ. ರಾಘವೇಂದ್ರ ಅವರು ಮತದಾನದ ಹಿಂದಿನ ದಿನ ನನ್ನ ಹಳೆಯ ವಿಡಿಯೋವನ್ನು ತಿರುಚಿ ಹಾಗು ನಕಲಿ ಪತ್ರಿಕಾ ವರದಿಯನ್ನು ಸೃಷ್ಠಿಸಿ ಸಾಮಾಜಿಕ ಮಾದ್ಯಮಗಳಲ್ಲಿ ಹರಿಬಿಟ್ಟು ಮತದಾರರಲ್ಲಿ ಗೊಂದಲವನ್ನುಂಟುಮಾಡಿದ್ದು ಈ ವಿಷಯವಾಗಿ ಇಂದು ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದೂರು ಸಲ್ಲಿಸಿದ್ದೇನೆ’ ಎಂದು ಹೇಳಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿ. ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಕೆ. ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿ.
ಕೆ. ಎಸ್. ಈಶ್ವರಪ್ಪ ಪುತ್ರ ಕೆ. ಇ. ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೇಳಿದ್ದರು. ಆದರೆ ಪಕ್ಷ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಿತು. ಪುತ್ರನಿಗೆ ಟಿಕೆಟ್ ಕೈ ತಪ್ಪಲು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಕಾರಣ ಎಂದು ಈಶ್ವರಪ್ಪ ಅಸಮಾಧಾನಗೊಂಡರು.
ರಾಷ್ಟ್ರ ಭಕ್ತರ ಬಳಗ ಹೆಸರಿನಲ್ಲಿ ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ 6 ವರ್ಷ ಬಿಜೆಪಿಯಿಂದ ಉಚ್ಛಾಟನೆಗೊಂಡರು.