ಬಿಜೆಪಿಯಲ್ಲಿ ಮೂಲೆ ಗುಂಪಾದರೇ ಫೈರ್‌ ಬ್ರ್ಯಾಂಡ್‌ ಈಶ್ವರಪ್ಪ…?

ಬೆಂಗಳೂರು

     ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ. ಡಿ.ಎಚ್. ಶಂಕರಮೂರ್ತಿ ಹಾಗೂ ಕೆ.ಎಸ್. ಈಶ್ವರಪ್ಪ ಮೂರು ಜನ ತ್ರಿಮೂರ್ತಿಗಳಂತೆ ಕಾರ್ಯನಿರ್ವಹಿಸಿ ಪಕ್ಷ ಸಂಘಟಿಸಿದ್ದರು. ಶಂಕರಮೂರ್ತಿ ವಯೋ ಸಹಜ ಕಾರಣಗಳಿಂದ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದಾರೆ. ಬಿ.ಎಸ್.ಯಡಿಯೂಪ್ಪ ಇನ್ನೂ ಕಿಂಗ್ ಮೇಯಕರ್ ಆಗಿಯೇ ಮುಂದುವರೆದಿದ್ದಾರೆ. ಆದರೆ ಈಶ್ವರಪ್ಪ ಇದೀಗ ಅಕ್ಷರಶಃ ಏಕಾಂಗಿ.

    ಒಂದು ಕಾಲದಲ್ಲಿ ಕಟ್ಟಾ ಹಿಂದುತ್ವವಾದಿಯಾಗಿ ನಾಡಿನೆಲ್ಲೆಡೆ ಖ್ಯಾತರಾಗಿದ್ದ ಈಶ್ವರಪ್ಪ ಅವರ ಪಕ್ಷದ ಪ್ರಮುಖರ ಒಡನಾಟವೂ ಕಡಿಮೆಯಾಗಿದೆ. ಎಲ್ಲಾ ಸಭೆ ಸಮಾರಂಭಗಳಲ್ಲಿ ಮಂಚೂಣಿಯಲ್ಲಿರುತ್ತಿದ್ದ ಅವರನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಲಕ್ಷ್ಯ  ಮಾಡಲಾಗಿದೆ. ಪಕ್ಷದ ಕಚೇರಿಯತ್ತಲೂ ಈಶ್ವರಪ್ಪ ಸುಳಿಯುತ್ತಿಲ್ಲ. ತವರು ಜಿಲ್ಲೆ ಶಿವಮೊಗ್ಗದಲ್ಲೂ ಅವರ ಕಾರುಬಾರು ಅಷ್ಟೇನು ಕಂಡು ಬಂದಿಲ್ಲ. ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ದೊರೆಯುವ ಸಾಧ್ಯತೆಗಳು ಕ್ಷೀಣಿಸಿವೆ.

    ಅವರ ಏಕೈಕ ಗುರಿ ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಕಾಂತೇಶ್ ಅವರನ್ನು ಕರೆ ತರುವುದಾಗಿದೆ. ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ವರಿಷ್ಠರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಎರಡು ಮನಸ್ಸಿನಲ್ಲಿದೆ. ಈಶ್ವರಪ್ಪ ಮತ್ತವರ ಪುತ್ರನಿಗೆ ಟಿಕೆಟ್ ನೀಡದೇ ಹೊಸಬರಿಗೆ ಅವಕಾಶ ಕಲ್ಪಿಸುವುದು ಸೂಕ್ತ ಎನ್ನುವ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

    ಈಶ್ವರಪ್ಪ ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕಟ್ಟಾ ಹಿಂದುತ್ವವಾದಿಯೂ ಹೌದು. ಕೆಂಪು ಕೋಟೆಯ ಮೇಲೆ ?ಭಗವಾಧ್ವಜಾರೋಹಣ, ಆಜಾನ್ ಮತ್ತು ಅಲ್ಪಸಂಖ್ಯಾತರ ವಿರೋಧಿ, ವಿಶೇಷವಾಗಿ ಮುಸ್ಲಿಂ ಮೂಲಭೂತವಾದದ ವಿರುದ್ಧ ಅವರ ಹೇಳಿಕೆಗಳು ರಾಷ್ಟ್ರ  ಮಟ್ಟದಲ್ಲಿ ಸುದ್ದಿಯಾಗಿವೆ. ಯಡಿಯೂರಪ್ಪ ಅವರಿಗೆ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಲು ಅವಕಾಶ ನಿರಾಕರಿಸಿರುವಾಗ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ

    ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ಗಾಗಿ ಟಿಕೆಟ್‌ಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಈಶ್ವರಪ್ಪ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ.

    ಗುತ್ತಿಗೆದಾರ ಹಾಗೂ ಬಿಜೆಪಿ ಮುಖಂಡ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ತಮ್ಮ ಪರಿಸ್ಥಿತಿಗೆ ಈಶ್ವರಪ್ಪ ಅವರೇ ಕಾರಣ ಎಂದು ಸಂತೋಷ್ ಪಾಟೀಲ್ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದರು. ಆದಾಗ್ಯೂ, ತದನಂತರ ನಡೆದ ತನಿಖೆಯಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

     ಕ್ಲೀನ್ ಚಿಟ್ ಇದ್ದರೂ ಈಶ್ವರಪ್ಪ ಮತ್ತೆ ಸಂಪುಟ ಸೇರಲು ಸಾಧ್ಯವಾಗಲಿಲ್ಲ. ಅವರ ಸೇವೆಯನ್ನು ಸಂಘಟನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಉದ್ದೇಶಿಸಿತ್ತು. ಅದೂ ಕೂಡ ಸಾಕಾರಗೊಂಡಿಲ್ಲ. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸ್ಥಳೀಯ ಮುಖಂಡ ಆಯನೂರು ಮಂಜುನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಂಘ ಪರಿವಾರದ ನಿಕಟವರ್ತಿ, ಸಾಮಾಜಿಕ ಕಾರ್ಯಕರ್ತ, ಚಾಣಾಕ್ಷ ವ್ಯಕ್ತಿ ಧನಂಜಯ ಅವರಿಗೆ ಟಿಕೆಟ್ ಸಿಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap