ಬೆಂಗಳೂರು:
ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಸುಮಾರು 14,000 ಮೆ.ವ್ಯಾ ಮತ್ತು ನೀರಾವರಿ ಪಂಪ್‌ಸೆಟ್ ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಸುಮಾರು 4,500 ಮೆ.ವ್ಯಾ ಇದ್ದು, ಬೇಸಿಗೆ ಕಾಲಕ್ಕೆ ವಿದ್ಯುತ್ ಬೇಡಿಕೆ 16,500 ಮೆ.ವ್ಯಾ ಏರಿಕೆ ಸಾಧ್ಯತೆ ಇದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಮಂಗಳವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾ ನಿಂದ 16,500 ಮೆ.ವ್ಯಾ. ತಲುಪುವ ನಿರೀಕ್ಷೆಯಿದೆ. ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ಇಂಧನ ಇಲಾಖೆ ಸಜ್ಜಾಗಿದೆ. ಬೇಸಿಗೆಯಲ್ಲಿ ರೈತರ ನೀರಾವರಿ ಪಂಪ್ ಸೆಟ್‌ಗಳಿಗೆ (ಐಪಿ) ಏಳು ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು. ಇದರಂತೆ ಇಂಧನ ಮಾರುಕಟ್ಟೆಯಿಂದ ವಿದ್ಯುತ್ ಸಂಗ್ರಹಣೆ ಮತ್ತು ಪಂಜಾಬ್ (300ಮೆ.ವ್ಯಾ) ಉತ್ತರ ಪ್ರದೇಶದಿಂದ (100-600ಮೆ.ವ್ಯಾ.) ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದರೂ ವಿದ್ಯುತ್ ವ್ಯತ್ಯಯವಾಗಿಲ್ಲ. ವಿದ್ಯುತ್ ಬೇಡಿಕೆಯು 300 ಮಿಲಿಯನ್ ಯೂನಿಟ್‌ಗೆ ಏರುವ ನಿರೀಕ್ಷೆಯಿದೆ. ಈ ಬೇಡಿಕೆಯನ್ನು ಪೂರೈಸಲು ಅಧಿಕಾರಿಗಳು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು, ಮುಂದಿನ ಬೇಸಿಗೆಯ ಸಿದ್ಧತೆಯ ವಿವರಗಳನ್ನು ಹಂಚಿಕೊಂಡರು.
ವಿದ್ಯುತ್ ಕಾಯ್ದೆಯ ಸೆಕ್ಷನ್ 11 ರ ಅನುಷ್ಠಾನದೊಂದಿಗೆ 2,200MW ವಿದ್ಯುತ್ ನ್ನು ಪಡೆಯುತ್ತೇವೆ. ಖಾಸಗಿ ವಿದ್ಯುತ್ ಉತ್ಪಾದಕರಿಂದ 1,200MW, ಉತ್ತರ ಪ್ರದೇಶದಿಂದ 600MW, ಪಂಜಾಬ್‌ನಿಂದ 300MW ಮತ್ತು ವಿಜಯಪುರದ ಕುಡ್ಗಿ ವಿದ್ಯುತ್ ಸ್ಥಾವರದಿಂದ 150MW ಪಡೆದುಕೊಳ್ಳಲಾಗಿದೆ.
2.5 ಲಕ್ಷ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಪ್ರಯತ್ನಗಳ ನಡೆಸಲಾಗುತ್ತಿದೆ. ಈ ಹೆಚ್ಚುವರಿ ಪ್ರಮಾಣವು ಕರ್ನಾಟಕ ರಾಜ್ಯ ಜೆನ್‌ಕೋಸ್‌ಗೆ (ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ) ಲಭ್ಯವಾಗಲಿದೆ. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶೀಯ ಕಲ್ಲಿದ್ದಲಿನೊಂದಿಗೆ ಆಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು ಎಂದು ಹೇಳಿದರು.
ಇದಲ್ಲದೆ, 370MW ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರವು ಶೀಘ್ರದಲ್ಲೇ ಉತ್ಪಾದನೆಯನ್ನು ಪ್ರಾರಂಭಿಸಲಿದೆ. 600MW ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.