ಕೋಟಿ ಕೋಟಿ ಸುರಿದ್ರೂ ತುಮಕೂರು ಜನರಿಗೆ ತಪ್ಪದ ಸಂಕಷ್ಟ…..!

 ತುಮಕೂರು :-

     ಕಲ್ಪತರು ನಾಡು  ತುಮಕೂರು ಜಿಲ್ಲೆಯಲ್ಲಿ  ಕೋಟಿ  ಕೋಟಿ ಹಣ ಸುರಿದು ಕಾಮಗಾರಿ ಮಾಡಿದರೂ ಜನರಿಗೆ ಮಾತ್ರ ಸಂಕಷ್ಟ ತಪ್ಪಿಲ್ಲ.

    ಹೌದು, ಅಭಿವೃದ್ಧಿ ಕಾಮಗಾರಿಗಳಿಂದಲೇ ತುಮಕೂರು ಜನ ಹೈರಾಣಾಗಿದ್ದಾರೆ.‌ ವಾಹನ ಸಂಚಾರ ನಿತ್ಯ ಸಂಕಷ್ಟವಾಗಿ ಪರಿಣಮಿಸಿದೆ. ವಾಹನ ಸವಾರರು ನಿಜಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ. ವಾಹನಗಳ ಬಿಡಿಭಾಗಗಳು ಕಳಚಿಕೊಳ್ಳುತ್ತವೆ. ಇದರಿಂದ ನಗರದ ರಸ್ತೆ ಸಂಚಾರ ಅಯೋಮಯವಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಂದಾದ ಸಮಸ್ಯೆಗಳಿಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

   ತುಮಕೂರು ನಗರದ ಅಮಾನಿಕೆರೆ ಕೋಡಿ ಬಳಿ ನಡೆಯುತ್ತಿರುವ ಸೇತುವೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಊರುಕೆರೆ ಸಮೀಪ ನಡೆಯುತ್ತಿರುವ ಬ್ರಿಡ್ಜ್, ಗುಬ್ಬಿ ಗೇಟ್ ರಿಂಗ್ ರಸ್ತೆಯಲ್ಲಿಯೂ ನಿರ್ಮಾಣವಾಗುತ್ತಿರುವ ಸೇತುವೆ ಕಾಮಕಾರಿ ಸೇರಿದಂತೆ ಇನ್ನಿತರೆ ಭಾಗಗಳಲ್ಲಿ ನಡೆಯುತ್ತಿರುವ ಸಣ್ಣಪುಟ್ಟ ಕಾಮಗಾರಿಗಳಿಂದಾಗಿ ವಾಹನ ಸವಾರರು ಹಲವು ಸಮಸ್ಯೆ ಅನುಭವಿಸುವಂತಾಗಿದೆ.

ಮತ್ತೆ ಬಂದ್ ಆಯ್ತು ಶಿರಾಗೇಟ್ ರಸ್ತೆ :

    ನಗರದ ಅಮಾನಿಕೆರೆ ಕೋಡಿ ಬಳಿ ಆರಂಭವಾಗಿರುವ ಸೇತುವೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಆರಂಭದಲ್ಲಿ ಒಂದು ತಿಂಗಳು ಶಿರಾಗೇಟ್ ರಸ್ತೆಯನ್ನು ಬಂದ್ ಮಾಡಿ ಬದಲಿ ಮಾರ್ಗ ಮಾಡಲಾಗಿತ್ತು. ಇದರಿಂದ ವಾಹನ ಸವಾರರು ಸುತ್ತಿಬಳಸಿಕೊಂಡು ಸಂಚಾರ ಮಾಡಬೇಕಿತ್ತು. ಜನರಿಂದ ಆಕ್ರೋಶ ವ್ಯಕ್ತವಾದ ಪರಿಣಾಮ ಮತ್ತೆ ಸೇತುವೆ ಕಾಮಗಾರಿ ನಡೆಯುತ್ತಿರುವ ಪಕ್ಕದಲ್ಲೇ ಭಾರಿ ಗಾತ್ರದ ವಾಹನ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ರಸ್ತೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಯಿತು.

   ಇದರಿಂದ ಸವಾರರು ನಿಟ್ಟುಸಿರು ಬಿಟ್ಟಿರು. ಬಂದ್ ಆಗಿದ್ದ ಸಿರಾಗೇಟ್ ರಸ್ತೆ ಸಂಚಾರಕ್ಕೆ ಮುಕ್ತವಾಗಿ ಒಂದೆರಡು ವಾರಗಳು ಕಳೆಯುವಷ್ಟರಲ್ಲೇ ಮತ್ತೆ ಬಂದ್ ಆಗಿದೆ. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಾತ್ಕಾಲಿಕವಾಗಿ ನಿರ್ಮಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದ ರಸ್ತೆ ಕುಸಿತವಾಯಿತು. ಹೀಗಾಗಿ ಈ ರಸ್ತೆಯನ್ನು ಮತ್ತೆ ಬಂದ್ ಮಾಡಲಾಗಿದೆ. ಈಗ ಮತ್ತೆ ವಾಹನ ಸವಾರರು ಸುತ್ತಿಬಳಸಿಕೊಂಡೇ ಸಂಚಾರ ಮಾಡಬೇಕಾದ ಸ್ಥಿತಿ ಬಂದೊದಗಿದೆ.

 

ರಾಷ್ಟ್ರೀಯ ಹೆದ್ದಾರಿಯಲ್ಲೇ ಟ್ರಾಫಿಕ್:

    ರಾಷ್ಟ್ರೀಯ ಹೆದ್ದಾರಿ ಊರುಕೆರೆ ಬಳಿ ನಡೆಯುತ್ತಿರುವ ಬ್ರಿಡ್ಜ್ ಕಾಮಗಾರಿಯಿಂದಾಗಿ ಶಿರಾ ಭಾಗದಿಂದ ತುಮಕೂರಿಗೆ ಬರುವ ವಾಹನ ಸವಾರರು ನಿತ್ಯ ಟ್ರಾಫಿಕ್ ನಲ್ಲಿ ಸಿಲುಕಿ ನರಳುವಂತಾಗಿದೆ. ನಿತ್ಯ ಇಲ್ಲಿ ಟ್ರಾಫಿಕ್ ಸಮಸ್ಯೆ‌ ಕಾಡುತ್ತಿದೆ. ಸುಮಾರು 2 ಕಿ ಮೀ ವರೆಗೂ ರಾಷ್ಟ್ರೀಯ ಹೆದ್ದಾರಿ ವಾಹನ‌ ಸೇರಿದಂತೆ  ತುಮಕೂರು ನಗರಕ್ಕೆ ಬರುವ ಎಲ್ಲಾ ವಾಹನಗಳು ಟ್ರಾಫಿಕ್ ನಲ್ಲಿ ಸಿಲುಕುತ್ತವೆ.

   ಈ ಟ್ರಾಫಿಕ್ ಬಲೆಯನ್ನು ಭೇದಿಸಿ ಬರಬೇಕಾದರೆ ಸವಾರರು ಸುಸ್ತಾಗಿ ಹೋಗುತ್ತಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕುತ್ತಿದ್ದಾರೆ ಸವಾರರು. ಅದರಲ್ಲೂ ನಗರಕ್ಕೆ ಬರುವ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹೈರಾಣಾಗುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂಬ ಒತ್ತಾಯವಿದ್ದರೂ ಒಂದೆರಡು ದಿನ ಸಿಬ್ಬತ ಇರುತ್ತಾರೆ. ಮತ್ತೆ ಕಾಣಿಸೋದೆ ಇಲ್ಲ. ಇದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಇಡಿ ಶಾಪ ಹಾಕುತ್ತಿದ್ದಾರೆ.

 

ಗುಬ್ಬಿ ಗೇಟ್ ರಿಂಗ್ ರಸ್ತೆ ಬಳಿಯೂ ರಸ್ತೆ ಬಂದ್:

      ನಗರದ ಶಿರಾಗೇಟ್ ರಸ್ತೆ ಬಂದ್ ಆದ ಪರಿಣಾಮ ಗುಬ್ಬಿ ಗೇಟ್ ರಿಂಗ್ ರಸ್ತೆ ಮೂಲಕ ವಾಹನ ಸವಾರರು ಸಂಚರಿಸುತ್ತಿದ್ದರು. ಆದರೆ ಮಳೆ ಸುರಿಯುತ್ತಿರುವ ಪರಿಣಾಮ ಸೇತುವೆ ಕಾಮಗಾರಿ ಬಳಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಹೀಗಾಗಿ ಈ ರಸ್ತೆಯೂ ಸಹ ಬಂದ್ ಆಗಿದೆ. ಇದರಿಂದ ನಗರದ ಜನತೆ ಒಂದಿಲ್ಲೊಂದು ಕಡೆ ಕಾಮಗಾರಿಗಳಿಂದಾಗಿ ಆಗಿರುವ ಸಮಸ್ಯೆಗೆ ಸಿಲುಕಿ ನರಳುವಂತಾಗಿದೆ.

ಅವೈಜ್ಞಾನಿಕ, ವಿಳಂಬ ಕಾಮಗಾರಿ ಆರೋಪ:-

  ನಗರದಲ್ಲಿ ನಡೆಯುತ್ತಿರುವ‌ ಕಾಮಗಾರಿಗಳಿಗೆ ಅಡ್ಡಿಯಿಲ್ಲ. ಆದರೆ, ಆ ಕಾಮಗಾರಿಗಳನ್ನು ಜನರಿಗೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಮಾಡಲಿಲ್ಲ. ಇದರ ಜೊತೆಗೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕಾಮಗಾರಿಗಳು ವಿಳಂಬವಾಗಿದೆ. ಇನ್ನಷ್ಟು ದಿನ ನಾವು ಈ ಸಮಸ್ಯೆಗಳಿಂದ ಬಳಲಬೇಕು ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

ತಗ್ಗು ಪ್ರದೇಶಗಳ ಮನೆಗೆ ನುಗ್ಗಿದ ನೀರು:–

    ಅಮಾನಿಕೆರೆ ಕೋಡಿ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿದ್ದವು. ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕೆರೆ ಹಿಂಭಾಗದ ಶಿರಾಗೇಟ್ ನ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ಇಡೀ ರಾತ್ರಿ ನೀರು ತುಂಬಿದ್ದ ಮನೆಗಳಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.

Recent Articles

spot_img

Related Stories

Share via
Copy link
Powered by Social Snap