3 ತಿಂಗಳಲ್ಲಿ ಸಂಸ್ಥೆಗೆ ಹೆಚ್ಚುವರಿ ಬಸ್‌ : ರಾಮಲಿಂಗಾರೆಡ್ಡಿ

ಬೆಳಗಾವಿ:

     ಮುಂದಿನ ಮೂರು ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್‌ಗಳನ್ನು ಮಂಜೂರು ಮಾಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

    ಭಾನುವಾರ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ನೂತನ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರು ಯಾವುದೇ ಅಪಘಾತ ಮಾಡದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿದರು. ಅಂತೆಯೇ ಹಾರೂಗೇರಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಮಾಡಿದರು.

    ಬಳಿಕ ಮಾತನಾಡಿದ ಅವರು, ‘ಜಿಲ್ಲೆಯ ಯಾವ ಗ್ರಾಮದಲ್ಲಿಯೂ ಬಸ್ ನಿಲ್ದಾಣಗಳ ಕೊರತೆ ಇಲ್ಲ. ಸರ್ಕಾರ ಸಾರಿಗೆ ಇಲಾಖೆಯನ್ನು ಇನ್ನಷ್ಟು ಬಲಪಡಿಸಿ ಗ್ರಾಮೀಣ ಪ್ರದೇಶದ ಸಾರಿಗೆ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಲಾಯಿತು. ಈ ಪರಿಹಾರ ಮೊತ್ತವನ್ನು 1 ಕೋಟಿ ರೂ.ಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆ ಯಶಸ್ವಿಯಾಗಿದೆ. ನಗರದ ಜತೆಗೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಬೇಡಿಕೆಗೆ ಅನುಗುಣವಾಗಿ ಹೊಸ ಬಸ್‌ಗಳನ್ನು ಒದಗಿಸಲಾಗುವುದು ಎಂದರು.

    ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ‘ಬೆಳಗಾವಿ ಜಿಲ್ಲೆಗೆ ಸುಮಾರು 50 ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಇನ್ನೂ 1,000 ಬಸ್‌ಗಳನ್ನು ಖರೀದಿಸಲು ಮತ್ತು 2,000 ಹುದ್ದೆಗಳಿಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅನುಕಂಪದ ಆಧಾರದ ಮೇಲೆ 145 ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಅವರು ಹೇಳಿದರು.

    ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಮಾತನಾಡಿ, ಪ್ರತಿದಿನ ಸರಾಸರಿ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ 60% ಮಹಿಳೆಯರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಕರ್ಯವಿಲ್ಲ. ಮುಂದಿನ ದಿನಗಳಲ್ಲಿ ಬಸ್ ಗಳ ಕೊರತೆ ನೀಗಿಸಲು ಸರ್ಕಾರ ಶ್ರಮಿಸಲಿದೆ. ಅದೇ ರೀತಿ ಬಸ್ ನಿಲ್ದಾಣಗಳಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap