ವಾಷಿಂಗ್ಟನ್:
ತರಬೇತಿ ಕಾರ್ಯಾಚರಣೆ ವೇಳೆ ಕ್ಯಾಲಿಪೋರ್ನಿಯದ ಟ್ರೋನಾ ವಿಮಾನ ನಿಲ್ದಾಣದ ಬಳಿ ಅಮೆರಿಕಾ ವಾಯುಪಡೆಯ ಎಲೈಟ್ ಥಂಡರ್‌ಬರ್ಡ್ಸ್ ಸ್ಕ್ವಾಡ್ರನ್‌ನ ಎಫ್-16 ಫೈಟರ್ ಜೆಟ್ ಪತನಗೊಂಡಿದೆ. ಬ್ಲಾಸ್ಟ್ ಆಗುವ ಮುನ್ಸೂಚನೆ ಕಂಡ ಕೂಡಲೇ ಪೈಲೆಟ್ ಹೊರಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಪೈಲೆಟ್ ಹೊರಬಂದ ಕೆಲವೇ ಕ್ಷಣಗಳಲ್ಲಿ ವಿಮಾನ ಸ್ಪೋಟಗೊಂಡಿದ್ದು, ಬೆಂಕಿಯಿಂದ ಧಗಧಗ ಹೊತ್ತಿ ಹುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಮೆರಿಕಾ ಸೈನ್ಯ ಘಟನೆಯ ದೃಶ್ಯಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಡೆತ್ ವ್ಯಾಲಿಯ ದಕ್ಷಿಣಭಾಗದ ಮರಭೂಮಿಯ ಪ್ರದೇಶದಲ್ಲಿ ವಿಮಾನವು ಲ್ಯಾಂಡಿಂಗ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಜೆಟ್ ಸ್ಪೋಟಗೊಂಡ ವೇಳೆ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿರುವುದು ಕಂಡುಬಂದಿದೆ.
ಬುಧವಾರ ಬೆಳಿಗ್ಗೆ ಸರಿಸುಮಾರು 10:45ಕ್ಕೆ (ಅಲ್ಲಿನ ಸ್ಥಳೀಯ ಗಡಿಯಾರದ ಪ್ರಕಾರ) ಕ್ಯಾಲಿಪೋರ್ನಿಯಾದಲ್ಲಿ ನಿಯಂತ್ರಿತ ವಾಯುಪ್ರದೇಶದ ಮೇಲೆ ತರಬೇತಿ ಕಾರ್ಯಾಚರಣೆ ವೇಳೆ ಘಟನೆ ನಡೆದಿದೆ. ಪೈಲಟ್ ಎಫ್ 16 ಸಿ ಫೈಟಿಂಗ್ ಪಾಲ್ಕನ್ ವಿಮಾನದಿಂದ ಸುರಕ್ಷಿತವಾಗಿ ಹೊರಜಿಗಿದಿದ್ದಾರೆ ಎಂದು ಥಂಡರ್‌ಬರ್ಡ್ಸ್ ಧೃಡಪಡಿಸಿದೆ. ಇನ್ನು ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಯಾನ್ ಬರ್ನಾರ್ಡಿನೊ ಕೌಂಟಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವಿಮಾನದಲ್ಲಿ ಪೈಲಟ್ ಒಬ್ಬರೇ ಇದ್ದರು. ಅವರು ಹೊರಬಂದ ಕೂಡಲೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು. ಸದ್ಯ ಬೆಂಕಿಯಿಂದ ಸ್ಥಳದಲ್ಲಿ ಯಾವುದೇ ತೊಂದರೆಗಳಾಗಿಲ್ಲ ಎಂದು ಹೇಳಿದ್ದಾರೆ.
ಆರು ಥಂಡರ್‌ಬರ್ಡ್ಸ್ ಜೆಟ್‌ಗಳು ಮಂಗಳವಾರ ತರಬೇತಿಗೆಂದು ಹೊರಟಿದ್ದವು. ಆದರೆ, ಈ ಅವಘಡ ಸಂಭವಿಸಿದ ಕಾರಣ ಐದು ಜೆಟ್‌ಗಳು ಮಾತ್ರ ಹಿಂದಿರುಗಿ ಬಂದಿವೆ. ವರದಿಗಳ ಪ್ರಕಾರ ವಿಮಾನವು ಯುಎಸ್ ನೌಕಾಪಡೆಯ ಪ್ರಮುಖ ಪರೀಕ್ಷಾ ಮತ್ತು ಮೌಲ್ಯಮಾಪನ ಸ್ಥಳವಾದ ವೆಪನ್ಸ್ ಸ್ಟೇಷನ್ ಚೀನಾ ಲೇಕ್ ಬಳಿ ಪತನಗೊಂಡಿದೆ. ಈ ಸ್ಥಳವು ಮಿಲಿಟರಿ ವಿಮಾನಗಳ ಹಾರಾಟದ ತರಬೇತಿ ನೀಡಲು ಹೆಚ್ಚಾಗಿ ಬಳಸಲಾಗುತ್ತದೆ. ಏಕ-ಎಂಜಿನ್ ಬಹುಪಾತ್ರದ ವಿಮಾನವಾದ ಎಫ್-16 ಫೈಟಿಂಗ್ ಫಾಲ್ಕನ್, ಥಂಡರ್‌ಬರ್ಡ್ಸ್‌ನ ಏರೋಬ್ಯಾಟಿಕ್ ಪ್ರದರ್ಶನಗಳಿಗೆ ಈ ಸ್ಥಳ ಕೇಂದ್ರವಾಗಿದೆ. ಇದು ಯುಎಸ್ ವಾಯು ಶಕ್ತಿಯನ್ನು ಪ್ರದರ್ಶಿಸಲು ಮತ್ತು ವಾಯುಪಡೆಯ ನೇಮಕಾತಿ ಕಾರ್ಯಗಳನ್ನು ನಡೆಯುವ ಸ್ಥಳವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ
ವಾಯುಪಡೆಯ 57ನೇ ವಿಂಗ್ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಅಪಘಾತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ಬರಲಿವೆ. ಅವಘಡಕ್ಕೆ ಮುಖ್ಯ ಕಾರಣವೇನೆಂದು ತಿಳಿದು ಬಂದಿಲ್ಲ.








