ಡಲ್ಲಾಸ್:
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 21 ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಎಂಐ ನ್ಯೂಯಾರ್ಕ್ ತಂಡಗಳು ಮುಖಾಮುಖಿಯಾದವು. ಜೂನ್ 29 ರಂದು ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಈ ಶತಕದ ಮೂಲಕ ರೋಹಿತ್ ಶರ್ಮ ಮತ್ತು ಜಾಸ್ ಬಟ್ಲರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿರುವ ಫಾಫ್ ಡು ಪ್ಲೆಸಿಸ್ ಆರಂಭದಿಂದಲೇ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಡು ಪ್ಲೆಸಿಸ್ 53 ಎಸೆತಗಳಲ್ಲಿ 103* ರನ್ ಗಳಿಸಿದರು. ಅವರ ಈ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಸೂಪರ್ ಕಿಂಗ್ಸ್ ಒಟ್ಟು 223 ರನ್ ಗಳಿಸಲು ಸಹಾಯ ಮಾಡಿತು. ಡು ಪ್ಲೆಸಿಸ್ ಅವರ ಈ ಶತಕ ಅವರ ಟಿ20 ವೃತ್ತಿಜೀವನದ 8ನೇ ಶತಕವಾಗಿದೆ.
ಈ ಶತಕದ ಮೂಲಕ ಅವರು ಟಿ20 ಕ್ರಿಕೆಟ್ನಲ್ಲಿ ಜಂಟಿಯಾಗಿ ನಾಲ್ಕನೇ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರಾದರು. ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ (22) ಅತಿ ಹೆಚ್ಚು ಟಿ20 ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ (11) ಎರಡನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ರಿಲೀ ರುಸೌ ಮತ್ತು ವಿರಾಟ್ ಕೊಹ್ಲಿ ತಲಾ 9 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ನಾಲ್ಕನೇ ಸ್ಥಾನವನ್ನು ತಲಾ 8 ಶತಕಗಳೊಂದಿಗೆ ಮೈಕೆಲ್ ಕ್ಲಿಂಗರ್, ಆರನ್ ಫಿಂಚ್, ಜೋಸ್ ಬಟ್ಲರ್, ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಈಗ ಫಾಫ್ ಡು ಪ್ಲೆಸಿಸ್ ಕೂಡ ಹಂಚಿಕೊಂಡಿದ್ದಾರೆ.
ಸೂಪರ್ ಕಿಂಗ್ಸ್ ನೀಡಿದ 224 ರನ್ ಬೆನ್ನಟ್ಟಿದ ಎಂಐ ತಂಡ 9 ವಿಕೆಟ್ಗೆ 184 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಚೇಸಿಂಗ್ ವೇಳೆ ಕೈರಾನ್ ಪೊಲಾರ್ಡ್(70) ಮತ್ತು ಆರಂಭಕಾರ ಡಿ ಕಾಕ್(35) ಹೊರತುಪಡಿಸಿ ಉಳಿದ ಬ್ಯಾಟರ್ಗಳು ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲವಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಚೆನ್ನೈ ತಂಡದ ಪರ ಅಕೀಲ್ ಹೊಸೈನ್(3) ಮತ್ತು ನಾಂದ್ರೆ ಬರ್ಗರ್(2), ಮಾರ್ಕಸ್ ಸ್ಟೋಯಿನಿಸ್ (2) ವಿಕೆಟ್ ಕಿತ್ತರು.








