ಕೋಲ್ಕತ್ತ:
ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಟ್ರೈನಿ ಮಹಿಳಾ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರತಿಭಟನಾನಿರತ ವೈದ್ಯರೊಂದಿಗೆ ಎರಡು ಬಾರಿ ಮಾತುಕತೆ ವಿಫಲವಾದ ನಂತರ ಪಶ್ಚಿಮ ಬಂಗಾಳ ಸರ್ಕಾರ ಮತ್ತೊಮ್ಮೆ ವೈದ್ಯರ ಸಭೆಯನ್ನು ಕರೆದಿದೆ.
ಈ ಸಂಬಂಧ ಕಿರಿಯ ವೈದ್ಯರಿಗೆ ಇಮೇಲ್ ಕಳುಹಿಸಿರುವ ಮುಖ್ಯ ಕಾರ್ಯದರ್ಶಿ ಮನೋಜ್ ಪಂಥ್, ಇದು ಸರ್ಕಾರದ ಕಡೆಯಿಂದ ಅಂತಿಮ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ. ಕಾಳಿಘಾಟ್‌ನಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಸಂಜೆ 5 ಗಂಟೆಗೆ ಸಭೆ ನಿಗದಿಯಾಗಿದೆ.
ಸಭೆಯನ್ನು ವೀಡಿಯೊಗ್ರಾಫ್ ಅಥವಾ ಅಥವಾ ಲೈವ್-ಸ್ಟ್ರೀಮ್ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಸೂಚಿಸಿದ್ದಾರೆ. ಲೈವ್ ಸ್ಟ್ರೀಮ್ ಮಾಡಲು ಒಪ್ಪದ ಕಾರಣ ಹಿಂದಿನ ಸಭೆಯನ್ನು ರದ್ದುಪಡಿಸಲಾಗಿತ್ತು. ಇದು 5ನೇ ಮತ್ತು ಕೊನೆಯ ಬಾರಿಗೆ ಮುಖ್ಯಮಂತ್ರಿ ಮತ್ತು ನಿಮ್ಮ ಪ್ರತಿನಿಧಿಗಳ ನಡುವಿನ ಸಭೆಗಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಹಿಂದಿನ ದಿನ ನಡೆದ ಚರ್ಚೆಗೆ ಅನುಗುಣವಾಗಿ ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗಿನ ಸಭೆಗೆ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ನಡೆಯಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿನ ಕಿರಿಯ ವೈದ್ಯರು ಸೋಮವಾರವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಸ್ವಾಸ್ಥ್ಯ ಭವನ ಬಳಿ ಎಂಟನೇ ದಿನವೂ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟಾರೇ ಕಿರಿಯ ವೈದ್ಯರು ಮುಷ್ಕರ ಆರಂಭಿಸಿ ಇಂದಿಗೆ 36ನೇ ದಿನವಾಗಿದೆ. ಕೋಲ್ಕತ್ತ ಪೊಲೀಸ್ ಆಯುಕ್ತರು ಮತ್ತು ಹಿರಿಯ ಆರೋಗ್ಯ ಅಧಿಕಾರಿಯನ್ನು ವಜಾಗೊಳಿಸುವ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಸರ್ಕಾರ ಬಿಕ್ಕಟ್ಟುವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾನಿರತ ಕಿರಿಯ ವೈದ್ಯರು ಹೇಳಿದ್ದಾರೆ.