ನವದೆಹಲಿ:
ದೇಶದಲ್ಲಿ ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ವಾಹನಗಳ ತಯಾರಿಕೆ ಮತ್ತು ಬಳಕೆಗೆ ಉತ್ತೇಜನ ನೀಡುವ ಸಂಬಂಧ 3ನೇ ಹಂತದ ‘ಫೇಮ್’ ಯೋಜನೆಯನ್ನು ಸರ್ಕಾರ ಒಂದೆರಡು ತಿಂಗಳಲ್ಲಿ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್. ಡಿ. ಕುಮಾರಸ್ವಾಮಿ ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಚಾಲಿತ, ಹೈಬ್ರಿಡ್ ವಾಹನಗಳ ತಯಾರಿಕೆ ಯೋಜನೆಯ ಜಾರಿಗೆ ಸಲಹೆ ಪಡೆಯುತ್ತಿದ್ದು, ಮೊದಲ ಎರಡು ಯೋಜನೆಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಂತರ-ಸಚಿವಾಲಯದ ಗುಂಪು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ತಾತ್ಕಾಲಿಕ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (EMPS) 2024ರ ಬದಲಾಗಿ ಫೇಮ್ 3 ಯೋಜನೆ ಜಾರಿಗೆ ತರಲಾಗುತ್ತಿದೆ. ಇವಿ ಫೇಮ್-2 ಯೋಜನೆಯನ್ನು ಪ್ರಸಕ್ತ ವರ್ಷದ ಮಾರ್ಚ್ ವರೆಗೂ ವಿಸ್ತರಿಸಲಾಗಿದ್ದು, ಅನುದಾನವನ್ನು 10,000 ಕೋಟಿಯಿಂದ ರೂ.11,500 ಕೋಟಿಗೆ ಹೆಚ್ಚಿಸಲಾಗಿದೆ.
“ಫೇಮ್ 3 ಯೋಜನೆ ಸಮರ್ಪಕ ಅನುಷ್ಟಾನಕ್ಕೆ ಹಲವು ಸಲಹೆಗಳು ಬರುತ್ತಿವೆ. FAME 1, FAME 2 ನಲ್ಲಿನ ಲೋಪವನ್ನು ರದ್ದುಪಡಿಸಲು ಸಲಹೆ ಬಂದಿದೆ. PMO ಕೂಡ ಕೆಲವು ಸಲಹೆಗಳನ್ನು ನೀಡಿದೆ. ಆ ನಿಟ್ಟಿನಲ್ಲಿ ನಮ್ಮ ಅಂತರ ಸಚಿವಾಲಯದ ಗುಂಪು ಕಾರ್ಯನಿರ್ವಹಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
FAME 3 ಯೋಜನೆ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಒಂದು ಅಥವಾ ಎರಡು ತಿಂಗಳಲ್ಲಿ ಅನುಮೋದನೆ ಪಡೆಯಲು ಕಳುಹಿಸಲಾಗುವುದು. ಈಗಲೂ ಹಲವಾರು ಸಲಹೆಗಳು ಬರುತ್ತಿದ್ದು, ಯಾವ ವಿಷಯಗಳನ್ನು ಅಳವಡಿಸಿಕೊಳ್ಳಬೇಕು, ಯಾವುದು ಉತ್ತಮ, ಧನಾತ್ಮಕ ಮಾರ್ಗವಾಗಿದೆ ಎಂಬುದನ್ನು ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಆಟೋಮೊಬೈಲ್ ಉದ್ಯಮದಿಂದ ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. ಅವರು ಉದ್ಯಮ ಬಲಪಡಿಸಲು ನಿಟ್ಟಿನಲ್ಲಿ ಅತ್ಯುತ್ತಮ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.