ಬೆಂಗಳೂರು:
ಸ್ವಂತ ಕಾರು ತೆಗೆದುಕೊಳ್ಳಬೇಕೆಂಬ ಆಸೆ ಪ್ರಯೋರ್ವರಿಗೂ ಇರುತ್ತದೆ.. ಅದರಲ್ಲೂ ಈ ಮಧ್ಯಮವರ್ಗದವರಿಗೆ ಇಂತಹ ಆಸೆಗಳು, ಕನಸುಗಳು ಜಾಸ್ತಿ. ಅದನ್ನು ಈಡೇರಿಸಿಕೊಳ್ಳಲು ಹಗಲು ರಾತ್ರಿಯನ್ನದೇ ದುಡಿಯುತ್ತಾರೆ ಕೂಡ. ಲಕ್ಷ ಕೊಟ್ಟು ಕಾರು ತೆಗೆದುಕೊಳ್ಳಲು ಏನೇನೂ ತ್ಯಾಗ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ಉದ್ಯಮಿ ಕೇವಲ ಕಾರಿನ ನೋಂದಣಿ ಸಂಖ್ಯೆಗೆ ಕೊಟ್ಟಿಗಟ್ಟಲೇ ಹಣ ಸುರಿದಿದ್ದಾನೆ.
ಭಾರತದಲ್ಲಿ ಕಾರು ಕೊಳ್ಳುವುದು ಒಂದು ಕನಸು ಮತ್ತು ಒಂದು ಪ್ರಯತ್ನ ಹೇಗೋ, ಹಾಗೆಯೇ ಅದಕ್ಕೆ ಅದೃಷ್ಟದ ನಂಬರ್ ಪಡೆಯಲು ಹಲವಾರು ಜನ ನಾನಾ ಸರ್ಕಸ್ ಮಾಡ್ತಾರೆ. ಕೆಲವರು ಜ್ಯೋತಿಷಿಗಳಿಂದ ಕೇಳಿ ತಿಳಿದ ತಮ್ಮ ಅದೃಷ್ಟದ ನಂಬರ್‌ನ್ನು ಪಡೆಯಲು ಪ್ರಯತ್ನಿಸಿದರೆ ಮತ್ತೆ ಕೆಲವರು ನಂಬರ್‌ಗಳ ಮೇಲಿನ ಕ್ರೇಜ್‌ಗೆ ಹೀಗೆ ವಿವಿಧ ಕಾರಣಗಳಿಗಾಗಿ, ತಮ್ಮ ಕಾರಿಗೆ ಅದೃಷ್ಟದ ನಂಬರ್ ಅಥವಾ ವಿಐಪಿ ನಂಬರ್ ಪ್ಲೇಟ್ ಬಯಸುತ್ತಾರೆ.
ಇದೀಗ ಇಂತದೇ ಆಸೆಯನ್ನು ಇಟ್ಟುಕೊಂಡಿದ್ದ ಹರಿಯಾಣದ ಚಾರ್ಕಿ ದಾದ್ರಿಯ ಉದ್ಯಮಿಯೊಬ್ಬರು ತಮ್ಮ ಕಾರಿನ ನೋಂದಣಿ ಸಂಖ್ಯೆಗಾಗಿ 1.17 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.ವಿಚಿತ್ರ ಅನ್ನಿಸಿದರೂ ಇದು ನೈಜ ಸಂಗತಿಯಾಗಿದೆ. 1 ಸಾವಿರ ರೂ. ಪ್ರವೇಶ ಶುಲ್ಕ ಪಾವತಿಸಿ ಮತ್ತು 10 ಸಾವಿರ ಭದ್ರತಾ ಠೇವಣಿಯನ್ನೂ ಇಟ್ಟು, ಹರಿಯಾಣದ ಈ ಉದ್ಯಮಿ ತನ್ನ ವಾಹನಕ್ಕೆ HR 88 B 8888 ಎಂಬ ಸಂಖ್ಯೆಗೆ ಕೋಟಿ ರೂಪಾಯಿ ಬಿಡ್ ಮಾಡಿದ್ದಾರೆ. ಹರಿಯಾಣ ಸರ್ಕಾರವು ವಿಐಪಿ ಹಾಗೂ ಫ್ಯಾನ್ಸಿ ನಂಬರ್‌ಪ್ಲೇಟ್‌ಗಳಿಗಾಗಿ ವಾರಕ್ಕೊಂದು ಆನ್‌ಲೈನ್ ಹರಾಜು ಪ್ರಕ್ರಿಯೆ ನಡೆಸುತ್ತದೆ.
ಶುಕ್ರವಾರ ಸಂಜೆ 5 ಗಂಟೆಯಿಂದ ಸೋಮವಾರ ಬೆಳಿಗ್ಗೆ 9 ಗಂಟೆಯವರೆಗೆ ಆಸಕ್ತರು ತಮ್ಮ ಇಷ್ಟದ ಸಂಖ್ಯೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಬಳಿಕ, ಬುಧವಾರ ಸಂಜೆ 5 ಗಂಟೆವರೆಗೆ ಹರಾಜು ಮುಂದುವರಿದು, ನಂತರವೇ ಅಂತಿಮ ಫಲಿತಾಂಶ ಹೊರಬೀಳುತ್ತದೆ. ಈ ಸಂಪೂರ್ಣ ಕಾರ್ಯಪದ್ಧತಿ fancy.parivahan.gov.in ಎಂಬ ಅಧಿಕೃತ ವೆಬ್‌ಪೋರ್ಟಲ್ ಮೂಲಕ ನಡೆಯುತ್ತದೆ. ಈ ವಾರದ ಹರಾಜಿನಲ್ಲಿ ‘HR88B8888’ ಎಂಬ ನಂಬರ್‌ಪ್ಲೇಟ್ ಅತ್ಯಧಿಕನ್ ಜನರ ಗಮನ ಸೆಳೆದಿದ್ದು, 45ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಇದರ ಪ್ರಾರಂಭಿಕ ಬೆಲೆ ಕೇವಲ 50,000 ಇದ್ದರೂ, ಬಿಡ್ಡಿಂಗ್ ಹೆಚ್ಚಾಗುತ್ತಿದ್ದಂತೆ ದರ ಹಂತ ಹಂತವಾಗಿ ಏರಿ ಕೊನೆಗೆ 1.17 ಕೋಟಿ ರೂಪಾಯಿಗಳಷ್ಟು ದಾಖಲೆ ಮಟ್ಟಕ್ಕೆ ತಲುಪಿತ್ತು.
ನೀವು ಫ್ಯಾನ್ಸಿ ನಂಬರ್ ಪ್ಲೇಟ್ ಗಳ ಪ್ರೇಮಿಗಲಾಗಿದ್ದು, ನಿಮಗೂ ಇಂತಹ ವಿಚಿತ್ರ ಆಸೆ ಇದ್ದರೆ ಅದನ್ನು ಈಡೇರಿಸಲೆಂದೇ ಸಾರಿಗೆ ಇಲಾಖೆ (ಆರ್‌ಟಿಓ)ಗಳು ವಿಐಪಿ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್ ಆಯ್ಕೆಯನ್ನು ನೀಡಿದೆ. ಕಾರು, ಬೈಕ್ ಮತ್ತು ಇತರ ವಾಹನಗಳ ಮಾಲೀಕರು ಹೆಚ್ಚುವರಿ ಹಣ ನೀಡಿ ತಮಗೆ ಬೇಕಾದ ಅದೃಷ್ಟದ ನಂಬರ್‌ಗಳನ್ನು ತಮ್ಮ ವಾಹನಗಳಿಗೆ ನೋಂದಾಯಿಸಿಕೊಳ್ಳಬಹುದು.
ಹಾಗಿದ್ದರೆ, ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ಆರ್‌ಟಿಒ ಕಲ್ಪಿಸಿರುವ ಅವಕಾಶಗಳೇನು? ಪ್ರಕ್ರಿಯೆ ಹೇಗೆ? ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ ಬನ್ನಿ.
ವಿಐಪಿ ಸಂಖ್ಯೆ ಪಡೆಯುವುದು ಹೇಗೆ?
ನೀವು ಕಾರನ್ನು ಖರೀದಿಸಿ ಆರ್‌ಟಿಒ ಶುಲ್ಕ ಪಾವತಿಸಿದ ಮೇಲೆ, ಒಂದು ನಿರ್ದಿಷ್ಟ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ನಿಮ್ಮ ವಾಹನಕ್ಕೆ ನೀಡಲಾಗುತ್ತದೆ. ನಿಮ್ಮ ಲಕ್ ಚೆನ್ನಾಗಿದ್ದರೆ ನೀವು ಹೆಚ್ಚುವರಿ ಹಣವನ್ನು ಪಾವತಿಸದೆಯೇ ಫ್ಯಾನ್ಸಿ ನಂಬರ್‌ಗಳನ್ನು ಪಡೆಯಬಹುದಾಗಿದ್ದು, ನಿಮಗೆ ಒಂದು ವೇಳೆ ನೀವು ನಿರ್ದಿಷ್ಟ ವಿಐಪಿ ಸಂಖ್ಯೆಯನ್ನು ಪಡೆಯಬೇಕೆಂಬ ಇಚ್ಛೆ ಇದ್ದರೆ, ನೀವು ಅದಕ್ಕೆ ನಿಗದಿತ ಬೆಲೆಯನ್ನು ಪಾವತಿಸಬೇಕಗುತ್ತದೆ.
ಭಾರತದ ಪ್ರತಿಯೊಂದು ರಾಜ್ಯದಲ್ಲೂ ಕಾರು ಅಥವಾ ಬೈಕ್‌ಗೆ ಫ್ಯಾನ್ಸಿ ನಂಬರ್‌ಪ್ಲೇಟ್ ಗೆ ವಿಭಿನ್ನ ಬೆಲೆ ಇರುತ್ತದೆ. ಉದಾಹರಣೆಗೆ, ದೆಹಲಿಯಲ್ಲಿ ವಾಹನ ನೋಂದಣಿಗೆ 1,000 ರೂ. ಶುಲ್ಕ ವಿಧಿಸಲಾಗುತ್ತದೆ. ಇದಕ್ಕೆ ಸೇರಿ, ಆಯ್ಕೆಮಾಡಿದ ವಿಶೇಷ ನಂಬರ್‌ಗಾಗಿ ಬೇಕಾದ ಬುಕ್ಕಿಂಗ್ ಮೊತ್ತವನ್ನು ಅಥವಾ ಹರಾಜಿನಲ್ಲಿ ಪಡೆಯಲು ಪಾವತಿಸಬೇಕಾದ ಬೆಲೆಯನ್ನು ಕೂಡ ನೀಡಬೇಕು. ಫ್ಯಾನ್ಸಿ ನಂಬರ್‌ಗಳ ಈ ಹರಾಜು ಪ್ರಕ್ರಿಯೆಯಿಂದ ಆರ್‌ಟಿಓಗಳು ಲಕ್ಷಾಂತರ ರೂಪಾಯಿಗಳ ಆದಾಯ ಗಳಿಸುತ್ತವೆ.
0001 ಎಂಬುದು ಸಾಮಾನ್ಯವಾಗಿ ‘ಸೂಪರ್ ಎಲೈಟ್’ ನಂಬರ್ ಎಂದು ಪರಿಗಣಿಸಲ್ಪಟ್ಟಿದ್ದು, ಇದರ ಬೆಲೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಸುಮಾರು 5 ಲಕ್ಷ ರೂ.ಗಳಿಗೆ ತಲುಪುತ್ತದೆ. ಇದರ ನಂತರ 0002 ರಿಂದ 0009ರವರೆಗಿನ ಏಕಾಂಕ ಸಂಖ್ಯೆಗಳು ಪ್ರೀಮಿಯಂ ಫ್ಯಾನ್ಸಿ ನಂಬರ್‌ಗಳ ಪಟ್ಟಿಯಲ್ಲಿ ಸೇರಿದ್ದು, ಇವುಗಳಿಗೂ ಸರಾಸರಿ 3 ಲಕ್ಷ ರೂ.ಗೂ ಹೆಚ್ಚು ಬೆಲೆ ನಿಗದಿಯಾಗಿದೆ.
ಇನ್ನು ಕಳೆದ ಏಪ್ರಿಲ್‌ನಲ್ಲಿ, ಕೇರಳದ ಟೆಕ್ ಬಿಲಿಯನೇರ್ ವೆಂಕಟೇಶನ್ ಗೋಪಾಲಕೃಷ್ಣನ್ ಕೂಡ ತಮ್ಮ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ ಕಾರನ್ನು ಖರೀದಿಸಿದ್ದು, ಅದಕ್ಕೆ 45.99 ಲಕ್ಷ ರೂ ಪಾವತಿಸಿ ‘KL 07 DG 0007’ ಎಂಬ ವಿಐಪಿ ನಂಬರ್‌ಪ್ಲೇಟ್ ತೆಗೆದುಕೊಂಡಿದ್ದರು. ಈ ಫ್ಯಾನ್ಸಿ ನಂಬರ್‌ನ ಹರಾಜು ಕೇವಲ 25,000 ರಿಂದ ಆರಂಭವಾಗಿತ್ತು, ಆದರೆ ಹರಾಜಿನ ಕೊನೆಯಲ್ಲಿ ದಾಖಲೆ ಮಟ್ಟದ ಬೆಲೆಗೆ ಏರಿತು. ಇನ್ನು ಅವರು ಆಯ್ಕೆ ಮಾಡಿಕೊಂಡಿದ್ದ ‘0007’ ಎಂಬ ಸಂಖ್ಯೆ ಜೇಮ್ಸ್ ಬಾಂಡ್‌ನ ಐಕಾನಿಕ್ ಕೋಡ್ ಆಗಿದ್ದು, ಈ ಸಂಖ್ಯೆಗೆ ವಿಪರೀತವಾದ ಬೇಡಿಕೆ ಇದೆ. ಸದ್ಯ , ಕೇರಳದ ಟೆಕ್ ಬಿಲಿಯನೇರ್ ದಾಖಲೆಯನ್ನು ಹರಿಯಾಣ ಉದ್ಯಮಿ ಮುರಿದಿದ್ದಾರೆ.








