ರಾಂಚಿ:
ತೀವ್ರ ಕುತೂಹಲ ಕೆರಳಿಸಿದ್ದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹೇಮಂತ್ ಸೊರೆನ್ ವಿಶ್ವಾಸಮತ ಗೆದ್ದಿದ್ದಾರೆ. ಹೇಮಂತ್ ಸೊರೇನ್ ಸರ್ಕಾರವು ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದು, 81 ಸಂಖ್ಯಾಬಲ ಇರುವ ವಿಧಾನಸಭೆಯಲ್ಲಿ 45 ಶಾಸಕರು ವಿಶ್ವಾಸಮತದ ಪರ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷೇತರ ಶಾಸಕ ಸರಯೂ ರಾಯ್ ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದು, ವಿಶ್ವಾಸಮತ ಸಾಬೀತಿಗೂ ಮುನ್ನವೇ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.
ಈ ಹಿಂದೆ ಅಕ್ರಮ ಹಣ ಸಿಕ್ಕ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಹೇಮಂತ್ ಸೊರೆನ್ ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಚಂಪೈ ಸೊರೆನ್ ರನ್ನು ಸಿಎಂಗೆ ಆಯ್ಕೆ ಮಾಡಿದ್ದರು.
ಇದೀಗ ಹೇಮಂತ್ ಸೊರೆನ್ ಜಾಮೀನಿನ ಮೇಲೆ ಹೊರಗೆಬಂದಿದ್ದು, ಬಂದ ಕೂಡಲೇ ಚಂಪೈ ಸೊರೆನ್ ರಾಜಿನಾಮೆ ನೀಡುವಂತೆ ಮಾಡಿ ತಾವು ಸಿಎಂ ಆಗಿ ಸರ್ಕಾರ ರಚನೆ ಮಾಡಿದ್ದರು. ಅದರಂತೆ ಇಂದು ವಿಶ್ವಾಸ ಮತ ಯಾಚನೆಯಲ್ಲೂ ಜಯಭೇರಿ ಭಾರಿಸಿದ್ದಾರೆ.