ಥಾಣೆ:
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ತನ್ನ ಒಂಬತ್ತು ವರ್ಷದ ಮಗನ ಬಾಯಿಗೆ ಕಾಗದದ ಚೆಂಡನ್ನು ತುರುಕಿ ಉಸಿರುಗಟ್ಟಿಸಿ ಕೊಂದ ಆರೋಪದ ಮೇಲೆ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಸೋಮವಾರ ತಾಯಿ ಮನೆಯಿಂದ ಬಾಲಕ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಾಲಕ ತನ್ನ ತಂದೆಯ ಮನೆಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಬಾಲಕನ ಬಾಯಿಯಲ್ಲಿ ಕಾಗದದ ಚೆಂಡು ಪತ್ತೆಯಾಗಿದೆ ಮತ್ತು ಆತನ ಮೂಗಿನಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ.
ಪತ್ನಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ ನಂತರ ವ್ಯಕ್ತಿ ಅತಿಯಾದ ಮದ್ಯಪಾನ ಮಾಡುತ್ತಿದ್ದನು ಎಂದು ತನಿಖೆ ಸೂಚಿಸಿದೆ. ಆತ ಸೋಮವಾರ-ಮಂಗಳವಾರ ಮಧ್ಯರಾತ್ರಿ ಮದ್ಯ ಸೇವಿಸಿ, ನೋಟ್‌ಬುಕ್‌ನಿಂದ ಹರಿದ ಪೇಪರ್‌ಗಳಿಂದ ತಯಾರಿಸಿದ ಚೆಂಡನ್ನು ಬಾಲಕನ ಬಾಯಿಗೆ ತುರುಕಿ, ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಾಲಕನ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
