ಬೆಂಗಳೂರು :
ನೆರೆಯ ತೆಲಂಗಾಣದ ರೀತಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆ ಎಂಬ ಬಗ್ಗೆ ಚಿತ್ರರಂಗದ ನಿರ್ಮಾಪಕರು, ಪ್ರದರ್ಶಕರ ಸಂಘ ಫಿಲಂ ಚೇಂಬರ್ ನೇತೃತ್ವದಲ್ಲಿ ಇಂದು (ಮೇ 23) ಸುದೀರ್ಘ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಿದೆ
ಐಪಿಎಲ್, ಲೋಕಸಭೆ ಚುನಾವಣೆ, ಸ್ಟಾರ್ ಸಿನಿಮಾಗಳ ಕೊರತೆ ಇನ್ನಿತರೆ ಕಾರಣಗಳಿಂದ ಚಿತ್ರಮಂದಿರಗಳಿಗೆ ಜನ ಬರುವುದು ತೀವ್ರವಾಗಿ ತಗ್ಗಿದ್ದು ಇದರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ.
ಜನರಿಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗುತ್ತಿರುವ ಕಾರಣದಿಂದ ನೆರೆಯ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳು ಅನುಭವಿಸುತ್ತಿರುವ ನಷ್ಟದಿಂದ ಪಾರಾಗಲು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಜೋರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ತೀರ್ಮಾನ ಪ್ರಕಟವಾಗಿದೆ.
ಫಿಲಂ ಚೇಂಬರ್ ಕರೆದಿದ್ದ ಸಭೆಯಲ್ಲಿ ಚಿತ್ರರಂಗದ ಸಕ್ರಿಯ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಸಭೆಗೆ ಕರೆಯಲಾಗಿತ್ತು. ಸಭೆಯಲ್ಲಿ ನಿರ್ಮಾಪಕ, ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ನಿರ್ಮಾಪಕ ತರುಣ್ ಶಿವಪ್ಪ, ಲಹರಿ ವೇಲು, ಕೆಪಿ ಶ್ರೀಕಾಂತ್ ಇನ್ನೂ ಕೆಲವರು ಭಾಗಿಯಾಗಿದ್ದರು. ಫಿಲಂ ಚೇಂಬರ್ನ ಅಧ್ಯಕ್ಷ ಎನ್.ಎಮ್.ಸುರೇಶ್ ಸೇರಿದಂತೆ ಇನ್ನೂ ಕೆಲವರು ಭಾಗಿಯಾಗಿದ್ದರು.
ಸಭೆಯ ಬಳಿಕ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ‘ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರಗಳ ಬಂದ್ ಮಾಡುವುದಿಲ್ಲ’ ಎಂದರು. ಮುಂದುವರೆದು ಮಾತನಾಡಿ, ‘ಚಿತ್ರಮಂದಿರಗಳ ಸಮಸ್ಯೆ ಹಾಗೂ ಚಿತ್ರರಂಗದ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಯಿತು. ಹಲವು ನಿರ್ಮಾಪಕರು ಸಭೆಯಲ್ಲಿ ಭಾಗಿಯಾಗಿದ್ದರು.
ಚಿತ್ರಮಂದಿರಗಳನ್ನು ಬಂದ್ ಮಾಡುತ್ತೀವಿ ಎಂದು ಈ ಹಿಂದೆಯೂ ನಾವು ಹೇಳಿರಲಿಲ್ಲ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು, ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಚರ್ಚೆಯಾಯಿತು. ಈ ಸೂಕ್ಷ್ಮ ವಿಚಾರದ ಬಗ್ಗೆ ಬಗ್ಗೆ ಸರ್ಕಾರದ ಜೊತೆ ಚರ್ಚೆ ಮಾಡ್ತಿವಿ’ ಎಂದರು.