ಪುಣೆ:
ಪುಣೆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪುಣೆ ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ಶ್ರೇಣಿಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೂಜಾ ಖೇಡ್ಕರ್ ಅವರು ಸಹಾಯಕ ಕಲೆಕ್ಟರ್ ಆಗಿ ನೇಮಕಗೊಂಡ ಸಂದರ್ಭದಲ್ಲಿ, ದಿಲೀಪ್ ಖೇಡ್ಕರ್ ಅವರು ತಹಸೀಲ್ದಾರ್ ದೀಪಕ್ ಅಕಾಡೆ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ ಆಡಳಿತಾತ್ಮಕ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲದಿದ್ದರೂ ಸಹ ತಮ್ಮ ಮಗಳಿಗೆ ಕ್ಯಾಬಿನ್ ನೀಡುವಂತೆ ಕೇಳಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಇತ್ತೀಚೆಗೆ ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ರದ್ದುಗೊಳಿಸಿದೆ ಮತ್ತು ಭವಿಷ್ಯದ ಎಲ್ಲಾ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಿದೆ.
2022 ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಸಲ್ಲಿಸಿದ ಅರ್ಜಿಯಲ್ಲಿ ‘ತಪ್ಪು ಮಾಹಿತಿ ನೀಡಿದ’ ಆರೋಪದ ಮೇಲೆ ದೆಹಲಿಯಲ್ಲಿ ಆಕೆಯ ವಿರುದ್ಧ ಎಫ್‌ಐಆರ್ ದಾಖಲಾದ ನಂತರ ಅವರು ತಲೆಮರೆಸಿಕೊಂಡಿದ್ದಾರೆ