ರೆಡಿ ಆಯ್ತು ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ರಹ್ಮೋಸ್ ಕ್ಷಿಪಣಿಯ ಮೊದಲ ಬ್ಯಾಚ್‌

ಲಖನೌ:

    ಆತ್ಮನಿರ್ಭರ ಭಾರತ್’ ಮಿಷನ್ ಅಡಿಯಲ್ಲಿ ಶನಿವಾರ ಲಕ್ನೋದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬ್ರಹ್ಮೋಸ್ ಕ್ಷಿಪಣಿಗಳ  ಮೊದಲ ಬ್ಯಾಚ್‌ಗೆ ಹಸಿರು ನಿಶಾನೆ ತೋರಿದರು. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಘೋಷಿಸಿದಂತೆ, ಹೊಸ ಬ್ಯಾಚ್ ಬ್ರಹ್ಮೋಸ್ ಕ್ಷಿಪಣಿಗಳನ್ನು ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಿಸಲಾಗಿದೆ. ಇದು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಗೆ ಒಂದು ಮೈಲಿಗಲ್ಲು ಮಾತ್ರವಲ್ಲದೆ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ಒದಗಿಸುತ್ತದೆ.

   ಮೇ 11, 2025 ರಂದು ಉದ್ಘಾಟನೆಯಾದ ಈ ಅತ್ಯಾಧುನಿಕ ಘಟಕವು ಕ್ಷಿಪಣಿ ಏಕೀಕರಣ, ಪರೀಕ್ಷೆ ಮತ್ತು ಅಂತಿಮ ಗುಣಮಟ್ಟದ ಪರಿಶೀಲನೆಗಳಿಗಾಗಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಕ್ಷಿಪಣಿಗಳ ಯಶಸ್ವಿ ಪರೀಕ್ಷೆಯ ನಂತರ, ಭಾರತೀಯ ಸಶಸ್ತ್ರ ಪಡೆಗಳು ನಿಯೋಜಿಸಲು ಅವುಗಳನ್ನು ಸಿದ್ಧಪಡಿಸಲಾಗಿದೆ.ಇದು 290-400 ಕಿ.ಮೀ ವ್ಯಾಪ್ತಿಯ ಮತ್ತು ಮ್ಯಾಕ್ 2.8 ರ ಗರಿಷ್ಠ ವೇಗದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿರುವ ನಿಖರ-ದಾಳಿಯ ಆಯುಧವಾಗಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPO ಮಶಿನೋಸ್ಟ್ರೋಯೆನಿಯಾ ನಡುವಿನ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಭೂಮಿ, ಸಮುದ್ರ ಅಥವಾ ಗಾಳಿಯಿಂದ ಉಡಾಯಿಸಬಹುದು. 

    ಮುಂದಿನ ಪೀಳಿಗೆಯ ಆವೃತ್ತಿಯಲ್ಲಿ ಕೆಲ ನವೀಕರಣ ಮಾಡಲಾಗಿದೆ. ಅದರ ತೂಕ ಪ್ರಸ್ತುತ 2,900 ಕಿಲೋಗ್ರಾಂಗಳಿಂದ 1,290 ಕಿಲೋಗ್ರಾಂಗಳಿಗೆ ಇಳಿಸಲಾಗಿದೆ. ಇದು 300 ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಲಕ್ನೋದಲ್ಲಿ ಹೊಸದಾಗಿ ಸ್ಥಾಪಿಸಲಾದ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಟೆಸ್ಟಿಂಗ್ ಫೆಸಿಲಿಟಿಯಿಂದ, ವಾರ್ಷಿಕವಾಗಿ ಅಂದಾಜು 80 ರಿಂದ 100 ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸಲಾಗುವುದು. ಇದರ ಜೊತೆಗೆ, ಈ ಘಟಕವು ಪ್ರತಿ ವರ್ಷ 100 ರಿಂದ 150 ಮುಂದಿನ ಪೀಳಿಗೆಯ ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ತಿಳಿದು ಬಂದಿದೆ.

Recent Articles

spot_img

Related Stories

Share via
Copy link