ಕಲ್ಪವೃಕ್ಷ:
ಐದು ಸಾವಿರ ಕಾಯಿಗಳನ್ನು ಬಿಡುವ ಕಲ್ಪವೃಕ್ಷ!; ವಿಶೇಷ ಗೊಬ್ಬರವಿಲ್ಲ, ತಳಿ ಯಾವುದೆಂದೇ ಗೊತ್ತಿಲ್ಲ..
ಒಂದು ತೆಂಗಿನ ಮರದಿಂದ ವರ್ಷಕ್ಕೆ 100 ರಿಂದ 150 ಕಾಯಿ ಸಿಗಬಹುದು. ಇನ್ನೂ ಹೆಚ್ಚೆಂದರೆ 200ರಿಂದ 300 ಸಿಗಬಹುದು. ಆದರೆ, ಇಲ್ಲೊಂದು ‘ಕಲ್ಪವೃಕ್ಷ’ 5 ಸಾವಿರಕ್ಕೂ ಅಧಿಕ ಕಾಯಿ ಕಟ್ಟಿದೆ!
ಹತ್ತಾರು ವರ್ಷಗಳಿಂದ ಇದೇ ರೀತಿ ಕಾಯಿ ಕಟ್ಟುತ್ತಿರುವ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕು ಬೇಳಾ ಬಂದರಿನ ಅನಿಲ ರಾಮಾ ನಾಯ್ಕ ಅವರ ತೆಂಗಿನ ಮರ ಜನಾಕರ್ಷಣೆಯ ಕೇಂದ್ರ ಬಿಂದವಾಗಿದೆ.
ಪ್ರತಿ ವರ್ಷ 10 ರಿಂದ 12 ಹಿಂಡಿಗೆ (ಗೊಂಚಲು) ಬರುತ್ತದೆ. ಪ್ರತಿ ಹಿಂಡಿಗೆಗೆ 400ಕ್ಕೂ ಅಧಿಕ ಕಾಯಿ ಹಿಡಿಯುತ್ತದೆ. ಬೇರೆಡೆಗಿಂತ ಈ ಮರದ ಕಾಯಿಗಳು ಚಿಕ್ಕದಿರುತ್ತವೆ.
ಇವರ ಮನೆ ಸುತ್ತ 20ಕ್ಕೂ ಅಧಿಕ ಮರಗಳಿದ್ದರೂ ಬೇರೆ ಮರಗಳು ಇಷ್ಟು ಪ್ರಮಾಣದಲ್ಲಿ ಕಾಯಿ ಬಿಡುತ್ತಿಲ್ಲ. ಹಾಗಾಗಿ ಇದು ‘ವಿಶೇಷ ತಳಿ’ ಇರಬಹುದು ಎನ್ನುತ್ತಾರೆ ಮಾಲೀಕ.
ತಳಿ ಯಾವುದೆಂದೇ ಗೊತ್ತಿಲ್ಲ!:
ಸುಮಾರು 25 ವರ್ಷಗಳ ಹಿಂದೆ ನಮ್ಮ ತಂದೆ ಬೆಂಗಳೂರಿನಿಂದ ಐದು ತೆಂಗಿನ ಸಸಿ ತಂದು ನೆಟ್ಟಿದ್ದರು. ತಳಿ ಯಾವುದೆಂದು ಗೊತ್ತಿಲ್ಲ. ಅದರಲ್ಲಿ ಒಂದು ಮರ ಬೆಳೆದು ಇಷ್ಟು ಪ್ರಮಾಣದಲ್ಲಿ ಕಾಯಿ ಕಟ್ಟುತ್ತಿದೆ. ಟೆನ್ನಿಸ್ ಬಾಲ್ ಗಾತ್ರದ ಕಾಯಿಗಳಿವೆ.
ಕಾಯಿಯ ಒಳಗೆ ಸಾಮಾನ್ಯ ಪ್ರಮಾಣದಲ್ಲಿ ತಿರುಳು ಇರುತ್ತದೆ. ತಿರುಳು ಅತ್ಯಂತ ರುಚಿಯಾಗಿದೆ. ಅದನ್ನು ಅಡುಗೆಗೆ ಬಳಸುತ್ತೇವೆ. ಕೊಬ್ಬರಿ ಮಾಡುತ್ತೇವೆ. 5 ರೂಪಾಯಿಗೆ 1 ಕಾಯಿಯಂತೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಅನಿಲ ರಾಮಾ ನಾಯ್ಕ.
ವಿಶೇಷ ಗೊಬ್ಬರ ಇಲ್ಲ:
ತೆಂಗಿನ ಮರಕ್ಕೆ ನೀರು ಹೆಚ್ಚು ನೀಡುತ್ತೇವೆ. ವರ್ಷಕ್ಕೆ ಅಲ್ಪಸ್ವಲ್ಪ ಕೊಟ್ಟಿಗೆ ಗೊಬ್ಬರ ಬಿಟ್ಟರೆ ವಿಶೇಷ ಯಾವುದೇ ಗೊಬ್ಬರ ನೀಡುವುದಿಲ್ಲ. ಆದರೂ ಇಷ್ಟು ಕಾಯಿ ನೀಡುತ್ತಿದೆ.
ಈ ಕಾಯಿ ಯಿಂದ ಈವರೆಗೆ ಒಂದೇ ಸಸಿ ಮಾಡಿದ್ದೇವೆ. ಸಾಕಷ್ಟು ಜನ ಫೋನ್ ಮಾಡಿ, ಪತ್ರ ಬರೆದು ಕಳಿಸಿಕೊಡಿ ಎನ್ನುತ್ತಿದ್ದಾರೆ. ತಳಿ, ಅದರ ವಿಶೇಷತೆ ಬಗ್ಗೆ ಅಧ್ಯಯನ ನಡೆಯಬೇಕು ಎನ್ನುತ್ತಾರೆ ಅನಿಲ ರಾಮಾ ನಾಯ್ಕ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
