ತುಮಕೂರು:
ರೈತರ ವಿಂಗಡಣೆಯಿಂದ ಬೆಂಬಲ ಬೆಲೆಯಲ್ಲಿ ರಾಗಿ ಮಾರಲು ಅನ್ನದಾತರ ಪರದಾಟ
ಜಿಲ್ಲೆಯಲ್ಲಿ ಈ ಬಾರಿ ರಾಗಿ ಫಸಲು ಉತ್ತಮವಾಗಿ ಬಂದಿದ್ದು, ಸರಕಾರದಿಂದ ತೆರೆದಿರುವ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ರಾಗಿ ಆವಕ ಹೆಚ್ಚಾಗಿ ಬರತೊಡಗಿದೆ.
ಎತ್ತಿನಗಾಡಿ, ಟ್ರ್ಯಾಕ್ಟರ್, ಟೆಂಪೊ, ಲಾರಿಗಳಲ್ಲಿ ರಾಗಿ ಮೂಟೆಗಳನ್ನು ಹೊತ್ತು ಖರೀದಿಕೇಂದ್ರಕ್ಕೆ ತರುತ್ತಿರುವ ಜಿಲ್ಲೆಯ ನೋಂದಾಯಿತ ಸಣ್ಣ ರೈತರು ಗರಿಷ್ಠ 20 ಕ್ವಿಂಟಾಲ್ ಮಿತಿಯಲ್ಲಿ ಸರಕಾರಕ್ಕೆ ರಾಗಿ ಮಾರಾಟ ಮಾಡುತ್ತಿದ್ದಾರೆ.
ಫೆ.10ರಿಂದ ಪ್ರಾರಂಭವಾದ ರಾಗಿ ಖರೀದಿ ಪ್ರಕ್ರಿಯೆ ಮಾ.31ರವರೆಗೆ ನಡೆಯಲಿದ್ದು, ಪ್ರತೀ ಕ್ವಿಂಟಾಲ್ 3,377 ರೂ. ದರದಲ್ಲಿ ಜಿಲ್ಲೆಯಲ್ಲಿ ಫೆ.24ರವರೆಗೆ 8918 ರೈತರಿಂದ 4.67 ಕೋಟಿ ಮೌಲ್ಯದಷ್ಟು ರಾಗಿಯನ್ನು ಖರೀದಿ ಮಾಡಿದ್ದಾರೆ.
ಜಿಲ್ಲೆÉ್ಲಯಲ್ಲಿ ಗುಬ್ಬಿ, ಕುಣಿಗಲ್, ಸಿರಾ, ತಿಪಟೂರು, ಚಿ.ನಾ.ಹಳ್ಳಿ, ತುರುವೇಕೆರೆ, ಕುಣಿಗಲ್, ಮಧುಗಿರಿ, ತುಮಕೂರು, ಹುಳಿಯಾರುವಿನಿಲ್ಲಿ ಖರೀದಿ ಕೇಂದ್ರ ತೆರೆದಿದ್ದು, 28,923 ರೈತರು ರಾಗಿ ಮಾರಾಟಕ್ಕೆ ನೋಂದಾವಣಿ ಮಾಡಿಸಿದ್ದಾರೆ.
ಈ ಪೈಕಿ ಗುಬ್ಬಿಯಲ್ಲಿ 1033, ಕುಣಿಗಲ್ 3966, ಸಿರಾ 622, ತಿಪಟೂರು 5312, ಚಿ.ನಾ.ಹಳ್ಳಿ 3184, ತುರುವೇಕೆರೆ 4382, ಕುಣಿಗಲ್ 4253, ಮಧುಗಿರಿ 451. ತುಮಕೂರು 2630ಹಾಗೂ ಹುಳಿಯಾರಿವಿನಲ್ಲಿ 3090 ಸಂಖ್ಯೆಯ ರೈತರು ರಾಗಿ ಮಾರಾಟಕ್ಕೆ ನೋಂದಾವಣಿ ಮಾಡಿಸಿದ್ದು,
ಈವರೆಗೆ ಗುಬ್ಬಿಯಲ್ಲಿ 243, ಕುಣಿಗಲ್ನಲ್ಲಿ 978, ಸಿರಾದಲ್ಲಿ 446, ತಿಪಟೂರಲ್ಲಿ 1139, ಚಿ.ನಾಹಳ್ಳಿ 1139, ತುರುವೇಕೆರೆಯಲ್ಲಿ 1333, ಕುಣಿಗಲ್ನಲ್ಲಿ 1043, ಮಧುಗಿರಿಯಲ್ಲಿ 324, ತುಮಕೂರಲ್ಲಿ 880 ಹಾಗೂ ಹುಳಿಯಾರಲ್ಲಿ 1393 ರೈತರು ಖರೀದಿ ಕೇಂದ್ರಕ್ಕೆ ರಾಗಿ ಪೂರೈಸಿದ್ದಾರೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ಧಲಿಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ಅರ್ಧದಷ್ಟು ರೈತರು ರಾಗಿ ಮಾರಲಾಗುತ್ತಿಲ್ಲ:
ರಾಗಿ ಖರೀದಿಗೆ 20 ಕ್ವಿಂಟಾಲ್ ಮಿತಿ ಜೊತೆಗೆ 2 ಎಕರೆಗಿಂತ ಮೇಲ್ಪಟ್ಟು ಕೃಷಿ ಜಮೀನು ಹೊಂದಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿ ದೊಡ್ಡ ರೈತರೆಂದು ಗುರುತಿಸಲ್ಪಟ್ಟವರು ರಾಗಿ ಮಾರಾಟ ಮಾಡುವಂತಿಲ್ಲ ಎಂದು ವಿಧಿಸಿರುವ ಮಿತಿಯಿಂದ ಅರ್ಧದಷ್ಟು ರೈತರು ಬೆಂಬಲ ಬೆಲೆಗೆ ರಾಗಿ ಮಾರಲಾಗದೆ ಪರದಾಟುವಂತಾಗಿದೆ.
ಸರಕಾರದ ಬೆಂಬಲ ಬೆಲೆ ಪ್ರತೀ ಕ್ವಿಂಟಾಲ್ಗೆ 3377ರೂ.ಗಳಿದ್ದು, ಖಾಸಗಿ ವರ್ತಕರು 1500 ರಿಂದ 2000ಕ್ಕೆ ಮಾತ್ರ ಖರೀದಿಸುತ್ತಿದ್ದಾರೆ. ಹೀಗಾಗಿ ರೈತರು ಬೆಳೆದ ರಾಗಿಗೆ ಯೋಗ್ಯ ಬೆಲೆ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ. ಸರಕಾರ ತ್ವರಿತವಾಗಿ ಎಲ್ಲಾ ರೈತರನ್ನು ಒಂದೇ ಎಂದು ಪರಿಗಣಿಸಿ ರಾಗಿಯನ್ನು ಖರೀದಿಸಬೇಕು. ರೈತರೆಲ್ಲರು ಬಡವರೇ ಆಗಿದ್ದಾರೆ ಎಂದು ಜಿಲ್ಲೆಯ ರಾಗಿ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.
ಚೀಲದ ದರವನ್ನು ಸರಕಾರ ಕೊಡುತ್ತಿಲ್ಲ
ಮೊದಲೇ ರೈತರನ್ನು ಸಣ್ಣ, ದೊಡ್ಡವರೆಂದು ವಿಂಗಡಿಸಿ ಅರ್ಧದಷ್ಟು ರೈತರು ಬೆಂಬಲ ಬೆಲೆಗೆ ರಾಗಿ ಬೆಳೆ ಮಾರಾಟದಿಂದ ವಂಚಿತರಾಗಿದ್ದು, ಇದರ ನಡುವೇ ರಾಗಿ ತುಂಬಿಸಿದ ಚೀಲದ ದರವನ್ನು ಸಹ ಕೊಡದೆ ರೈತರಿಗೆ ಅನ್ಯಾಯಮಾಡಲಾಗುತ್ತಿದೆ ಎಂದು ರಾಗಿಬೆಳೆಗಾರರು ದೂರಿದ್ದಾರೆ. ಪ್ರತೀ ಚೀಲಕ್ಕೆ 25 ರೂ.ದರವನ್ನು ಹಿಂದಿನ ವರ್ಷದಲ್ಲಿ ಕೊಡುತ್ತಿದ್ದಾರೆ.
ಆದರೆ ಈ ಬಾರಿ ರಾಗಿ ಖರೀದಿಗೆ ಮಿತಿ, ರೈತರ ವಿಂಗಡಣೆ ಜೊತೆಗೆ ಚೀಲದ ಹಣವನ್ನು ನೀಡುತ್ತಿಲ್ಲ ಎಂದು ಹುಳಿಯಾರಿನ ಎಪಿಎಂಸಿ ಕೇಂದ್ರಕ್ಕೆ ರಾಗಿ ತಂದಿದ್ದ ರೈತ ನಿಂಗರಾಜು ಅವರು ಅವಲತ್ತುಕೊಂಡರು.
ರೈತರ ಆದಾಯದ್ವಿಗುಣ ಮಾಡಬೇಕು, ವೈಜ್ಞಾನಿಕ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿಕೊಳ್ಳುವ ಸರಕಾರಗಳು ರೈತರ ಬೆಳೆದ ಬೆಳೆಯನ್ನು ಬೆಂಬಲ ಬೆಲೆಗೆ ಖರೀದಿಸಲು ಮಿತಿಗಳನ್ನು ಹೇರಿ ಮತ್ತೆ ಅನ್ನದಾತ ಕಡಿಮೆ ದರಕ್ಕೆಬೆಳೆಗಳನ್ನು ಮಾರಿಕೊಂಡು ನಷ್ಟ ಅನುಭವಿಸಲು ತಾನೇ ಎಡೆಮಾಡಿಕೊಟ್ಟಿದೆ.
-ದಿನೇಶ್, ರೈತ ಮತ್ತಿಘಟ್ಟ.
– ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ